ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರದ್ದು ಅದೆಂಥಾ ಮಾಸ್ಟರ್ ಮೈಂಡ್ ಅಂತ ಇಡೀ ಪ್ರಪಂಚಕ್ಕೇ ಗೊತ್ತು. ಇಡೀ ವಿಶ್ವಕ್ರಿಕೆಟ್ ಧೋನಿ ಬುದ್ಧಿವಂತಿಕೆ ಮತ್ತು ನಾಯಕತ್ವದ ಗುಣವನ್ನು ಇಷ್ಟಪಡುತ್ತದೆ. ಇಂದಿನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಧೋನಿಯೇ ದಾರಿದೀಪ ಎಂದರೆ ತಪ್ಪಾಗುವುದಿಲ್ಲ. ಧೋನಿ ಕೊಹ್ಲಿಯನ್ನು ಮುಂದೆ ಬಿಟ್ಟು ನಾಯಕತ್ವದ ಪಾಠ ಮಾಡ್ತಿದ್ದಾರೆ ಎಂದರೂ ಸುಳ್ಳಲ್ಲ. ವಿರಾಟ್ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಧೋನಿಯನ್ನು ಕೇಳಿಯೇ ತೆಗೆದುಕೊಳ್ಳುವುದು. ಧೋನಿ ತೀರ್ಮಾನ ನೂರರಲ್ಲಿ ಒಂದು ಅಥವಾ ಎರಡು ಮಾತ್ರವೇ ಉಲ್ಟಾ ಆಗಬಹುದಷ್ಟೇ..! ಇಂಥಾ ಮಹಾನ್ ಚಾಣಕ್ಯ ಮಾಹಿಯೇ ತಪ್ಪು ಮಾಡಿದ್ದಾರೆ ಎಂದರೆ ಯಾರೂ ನಂಬಲ್ಲ.. ಧೋನಿಯ ಆ ಒಂದು ನಿರ್ಧಾರ ಭಾರತಕ್ಕೆ ಮುಳುವಾಗಿದೆ.
ಇಂದು ಬರ್ಮಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ವಿಶ್ವಕಪ್ ಲೀಗ್ ಮ್ಯಾಚ್ ನಡೀತಾ ಇದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದಾರ. ಆರಂಭಿಕ ಆಟಗಾರರಾದ ಬೈರ್ಸ್ಟ್ರೋ ಹಾಗೂ ಜೇಸನ್ ರಾಯ್ ಉತ್ತಮ ಆರಂಭ ಒದಗಿಸಿದ್ದಾರೆ. ಈ ಆರಂಭಿಕ ಜೋಡಿ 160ರನ್ಗಳ ಜೊತೆಯಾಟವಾಡಿದೆ. ರಾಯ್ 66ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಆದರೆ ಈ ಮೊತ್ತಕ್ಕೆ ಧೋನಿ ತೆಗೆದುಕೊಂಡ ಆ ಒಂದು ನಿರ್ಧಾರ..!
ವಿಷಯ ಏನಪ್ಪಾ ಅಂದ್ರೆ, ರಾಯ್ 11ನೇ ಓವರ್ನಲ್ಲೇ ಔಟ್ ಆಗುವವರಿದ್ದರು. ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಜೇಸನ್ ರಾಯ್ ಅವರ ಗ್ಲೌಸ್ಗೆ ತಗುಲಿದ ಬಾಲ್ ಕೀಪರ್ ಧೋನಿ ಕೈ ಸೇರಿತು. ಆಗ ಅಂಪೈರ್ ಔಟ್ ಕೊಡಲಿಲ್ಲ. ಆದರೆ, ಧೋನಿ ಮಾತು ಕೇಳಿದ ವಿರಾಟ್ ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ. ಆದರೆ, ಅಲ್ಟ್ರಾ ಎಡ್ಜ್ ನಲ್ಲಿ ರಾಯ್ ಔಟ್ ಆಗಿರುವುದು ಕ್ಲಿಯರ್ ಆಗಿ ಕಾಣುತ್ತಿತ್ತು. ಧೋನಿ ಸಾಮಾನ್ಯವಾಗಿ ಇಂಥಾ ನಿರ್ಧಾರಗಳನ್ನು ಆರಾಮಾಗಿ ತೆಗೆದುಕೊಳ್ಳುತ್ತಾರೆ. ಇವತ್ತು ಅದೃಷ್ಟ ಚೆನ್ನಾಗಿರಲಿಲ್ಲ ಅಷ್ಟೇ..