ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈ ಮತ್ತು ಪುಣೆಯಲ್ಲಿ ಗೋಡೆ ಕುಸಿದು ಇದುವರೆಗೆ 43 ಮಂದಿ ಸಾವನ್ನಪ್ಪಿದ್ದಾರೆ ಮತ್ತು 80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗೋಡೆ ಕುಸಿತದಿಂದಾಗಿ ಮುಂಬೈನಲ್ಲಿ 22 ಮಂದಿ ಹಾಗೂ ಪುಣೆಯಲ್ಲಿ 21 ಮಂದಿ ಮೃತಪಟ್ಟಿದ್ದಾರೆ.
ಭಾರಿ ಮಳೆಯಿಂದಾಗಿ ರಸ್ತೆಗಳು ಮತ್ತು ರೈಲು ಹಳಿಗಳಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆ ಇಂದು ಸಾರ್ವಜನಿಕ ರಜಾ ಘೋಷಣೆಯಾಗಿದೆ.
ಮುಂಜಾನೆ 2 ಗಂಟೆ ಸುಮಾರಿಗೆ ಮಲಾಡ್ ಪೂರ್ವದ ಪಿಂಪ್ರಿಪಾಡಾ ಪ್ರದೇಶದಲ್ಲಿ ಕಾಂಪೌಂಡ್ ಗೋಡೆ ಕುಸಿದಿದ್ದು, ಗೋಡೆಯ ಪಕ್ಕದ ಗುಡಿಸಲುಗಳಲ್ಲಿ ವಾಸಿಸುವ ಜನರು ಭಗ್ನಾವಶೇಷದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಗೋಡೆ ಕುಸಿದ ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರ ತಂಡವೂ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ಎನ್‌ಡಿಆರ್‌ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಡೆ ಕುಸಿತದಲ್ಲಿ ಗಾಯಗೊಂಡ 34 ಜನರನ್ನು ಜೋಗೇಶ್ವರಿ ತುರ್ತು ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ.