ಮಧ್ಯ ಪ್ರದೇಶದ ರಾಜಧಾನಿ ಭೂಪಾಲ್ ನಿಂದ ಕೇವಲ 70 ಕಿ.ಮೀ. ದೂರದಲ್ಲಿರುವ ಸಂಕ ಜಾಗೀರ್ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರು ಗ್ರಾಮದ ವ್ಯಾಪ್ತಿಯಲ್ಲಿ ಮಕ್ಕಳನ್ನು ಹೆರುವಂತಿಲ್ಲ. ಮಹಿಳೆಯರ ಹೆರಿಗೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಅವರುಗಳನ್ನು ಹೆರಿಗೆಗಾಗಿ ಗ್ರಾಮದ ವ್ಯಾಪ್ತಿಯಿಂದ ಹೊರಗಿರುವ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.
ಗ್ರಾಮದಲ್ಲಿ ಮಗು ಜನಿಸಿದರೆ ಅದು ಸಾವಿಗೀಡಾಗುತ್ತದೆ ಇಲ್ಲವೇ ಅಂಗವಿಕಲತೆಗೆ ಒಳಗಾಗಿರುತ್ತದೆಂಬ ನಂಬಿಕೆ ಪ್ರಚಲಿತದಲ್ಲಿದ್ದು, ಹೀಗಾಗಿ ಗ್ರಾಮಸ್ಥರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಗ್ರಾಮದಲ್ಲಿ ಹೆರಿಗೆಯಾಗಲು ಅವಕಾಶ ನೀಡುವುದಿಲ್ಲ. ಇದಕ್ಕೆ ಒಂದು ಹಿನ್ನಲೆಯೂ ಇದ್ದು, ಬಹುತೇಕ ಗುರ್ಜರ್ ಸಮುದಾಯದವರೇ ವಾಸಿಸುವ ಈ ಗ್ರಾಮದಲ್ಲಿರುವ ದೇವಾಲಯಕ್ಕೆ ನಡೆದುಕೊಳ್ಳುವ ಗ್ರಾಮಸ್ಥರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆನ್ನಲಾಗಿದೆ. ಇದೇ ಸಂಪ್ರದಾಯ ಈಗಲೂ ಮುಂದುವರೆದಿದ್ದು, ಇದೀಗ ಗ್ರಾಮದ ಸರಪಂಚ್, ಈ ಸಂಪ್ರದಾಯಕ್ಕೆ ತಿಲಾಂಜಲಿ ಇಡಲು ಮುಂದಾಗಿದ್ದಾರೆ. ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.