ರಾಜ್ಯ ರಾಜಕೀಯದಲ್ಲೀಗ ಕಳೆದ ಒಂದು ವಾರದಿಂದ ಮೈತ್ರಿ ಪಡೆಯ ಆಟ ಜೋರಾಗಿದೆ. ಇನ್ನೇನು ಮೈತ್ರಿ ಸರ್ಕಾರ ಬಿದ್ದೇ ಹೋಯಿತು.. ನಾವು ಆಡಳಿತದ ಚುಕ್ಕಾಣಿ ಹಿಡಿಯೋದೇ ಎಂದುಕೊಂಡಿದ್ದ ಬಿಜೆಪಿಗೆ ಮತ್ತೊಮ್ಮೆ ಶಾಕ್ ಆಗಿದೆ. ಯಾರೂ ಊಹಿಸಿರದ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಒಂದೆಡೆ ತಮ್ಮ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಸುಖಾ ಸುಮ್ಮನೆ ವಿಳಂಬ ಮಾಡ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಕೂಡ ರಾಜೀನಾಮೆ ಆಟಕ್ಕೆ ಸಂಬಂಧಿಸಿದಂತೆ ಸುಪ್ರೀಂಗೆ ಅರ್ಜಿ ಹಾಕಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಮಾಡಿತು. ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ತಮ್ಮ ತಮ್ಮ ವಾದ ಮಂಡಿಸಿದ್ರು. ಪರ-ವಿರೋಧ ವಾದ ಆಲಿಸಿದ ನ್ಯಾಯ ಪೀಠ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯ ತನಕ ಸ್ಪೀಕರ್ ಅತೃಪ್ತರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಅನರ್ಹಗೊಳಿಸುವಂತೆಯೂ ಇಲ್ಲ.. ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಹೇಳಿದೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯಾರೂ ಊಹಿಸಲಾಗದ ತೀರ್ಮಾನ ತೆಗೆದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸದನದ ಬೆಂಬಲ ಇದ್ದಲ್ಲಿ ಮಾತ್ರ ನಾನು ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ವಿಶ್ವಾಸಮತ ಯಾಚನೆ ಮಾಡುತ್ತೇನೆ. ಟೈಮ್ ನಿಗದಿಪಡಿಸಿ ಎಂದು ಸ್ಪೀಕರ್ ರಮೇಶ್ ಕುಮಾರ್ಗೆ ಮನವಿ ಮಾಡಿದ್ದಾರೆ.
ಸಂತಾಪ ಸೂಚನೆಯ ಸಮಯದಲ್ಲಿ ಸಿಎಂ ಹೀಗೆ ಘೋಷಿಸುತ್ತಿದ್ದಂತೆ ಬಿಜೆಪಿಗೆ ಶಾಕ್ ಆಗಿದೆ..! ಅವಿಶ್ವಾಸ ನಿರ್ಣಯ ಮಂಡಿಸಿ ಸರ್ಕಾರವನ್ನು ಉರುಳಿಸಿ, ಅಧಿಕಾರ ಗದ್ದುಗೆ ಏರಲು ಬಿಜೆಪಿ ಪ್ಲಾನ್ ಮಾಡಿತ್ತು. ಸಿಎಂ ಯಾವುದೇ ಸೂಚನೆ ನೀಡದೇ ತಾವೇ ವಿಶ್ವಾಸ ಮತಯಾಚನೆಗೆ ಮುಂದಾಗಿ, ಮೈತ್ರಿ ಸರ್ಕಾರದ ಉಳಿವಿಗೆ ಬತ್ತಳಿಕೆಯ ಅಸ್ತ್ರ ಪ್ರಯೋಗಿಸಿದ್ದಾರೆ.






