ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನ 16 ಶಾಸಕರು ರಾಜೀನಾಮೆ ನೀಡಿದ್ದು, ಬಹುತೇಕ ಶಾಸಕರು ಹೆಚ್.ಡಿ. ರೇವಣ್ಣ ವಿರುದ್ಧ ಆರೋಪ ಮಾಡಿದ್ದಾರೆ.
ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಸರ್ಕಾರದ ಈ ಸ್ಥಿತಿಗೆ ಶಾಸಕರ ರಾಜೀನಾಮೆಗೆ ಅವರೂ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಇದೇ ವೇಳೆ ಅತೃಪ್ತ ಶಾಸಕರು ಹಿಂತಿರುಗಿ ಬಂದು ಮೈತ್ರಿ ಸರ್ಕಾರ ಉಳಿಸಿದರೆ ಹೆಚ್.ಡಿ. ರೇವಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರ ಉಳಿಸಿದಲ್ಲಿ ಹೆಚ್.ಡಿ. ರೇವಣ್ಣ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಈ ಸ್ಥಿತಿಗೆ ಹೆಚ್.ಡಿ.ರೇವಣ್ಣ ಒಬ್ಬರೇ ಕಾರಣರಲ್ಲ, ಅವರು ಉತ್ಸಾಹದಿಂದ ಕೆಲಸ ಮಾಡುವ ಸಂದರ್ಭದಲ್ಲಿ ಕೆಲ ತಪ್ಪು ಆಗಿರಬಹುದು. ಅತೃಪ್ತ ಶಾಸಕರು ಎಲ್ಲದಕ್ಕೂ ರೇವಣ್ಣನವರೇ ಕಾರಣವೆಂದು ಭಾವಿಸಿರುವಂತಿದೆ. ಒಂದು ವೇಳೆ ಅತೃಪ್ತ ಶಾಸಕರು ವಾಪಸ್ ಬಂದು ಸಮ್ಮಿಶ್ರ ಸರಕಾರವನ್ನು ಉಳಿಸಿದಲ್ಲಿ ರೇವಣ್ಣನವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಪ್ರಯತ್ನ ನಡೆಸುತ್ತೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.