ಸಮ್ಮಿಶ್ರ ಸರ್ಕಾರವನ್ನು ಉಳಿಸುವ ಪ್ರಯತ್ನ ಮುಂದುವರೆದಿದೆ. ನಮಗಿನ್ನೂ ಸಮ್ಮಿಶ್ರ ಸರ್ಕಾರದ ಮೇಲೆ ಆಶಾಭಾವನೆ ಇದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಅವರು, ನೀವು ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ಸರ್ಕಾರ ಉಳಿಯದಿದ್ದರೂ ಎದೆಗುಂದಬೇಡಿ, ಮುಂದೆ ನಿಮಗೆ ಒಳ್ಳೆಯ ಅವಕಾಶಗಳಿವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ಇನ್ನೂ ಎರಡು-ಮೂರು ದಿನ ಇರಬೇಕಾಗಬಹುದು. ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದಾರೆ ಎಂಬ ಭಾವನೆ ನಿಮಗೆ ಬೇಡ. ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಹಾಗಾಗಿ, ಇಂತಹ ಸನ್ನಿವೇಶ ಎದುರಾಗಿದೆ. ಸದನ ಮುಗಿಯುತ್ತಿದ್ದಂತೆ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆರಳಿ ಎಂದು ಸೂಚಿಸಿದ್ದಾರೆ.
ಕೆಲಸವಿಲ್ಲದೆ ಬೆಂಗಳೂರು ಕಡೆಗೆ ಬರಬೇಡಿ. ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನ ಹರಿಸಿ. ಕ್ಷೇತ್ರದ ಜನರ ಸಮಸ್ಯೆಗೆ ಕಿವಿಗೊಡಿ. ಜನರನ್ನು ವಿಶ್ವಾಸಕ್ಕೆ ಪಡೆಯಿರಿ. ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಅದಕ್ಕೆ ಈಗಿನಿಂದಲೇ ನಾವು ಸಿದ್ಧರಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ