ಅತಿಥೇಯ ಇಂಗ್ಲೆಂಡ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಂಡರಿ ಲೆಕ್ಕಾಚಾರದಲ್ಲಿ ರೋಚಕ ಗೆಲುವು ಕಂಡು ಚೊಚ್ಚಲ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿರುವುದು ಮುಗಿದ ಅಧ್ಯಾಯ..!
ಈಗ 2020ರಲ್ಲಿ ವೆಸ್ಟ್ಇಂಡೀಸ್ನಲ್ಲಿ ನಡೆಯಲಿರುವ ಟಿ20 ಮತ್ತು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ನತ್ತ ಎಲ್ಲಾ ದೇಶಗಳು ಗಮನ ಹರಿಸಿವೆ. ಈ ಬಾರಿ ವಿಶ್ವಕಪ್ ಗೆದ್ದುಕೊಂಡೇ ಬರೋದು ಎಂದು ಇಂಗ್ಲೆಂಡ್ಗೆ ತೆರಳಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಲೀಗ್ನಲ್ಲಿ ಚಾಂಪಿಯನ್ ಆಟ ಆಡಿದ್ರೂ ಸೆಮಿಫೈನಲ್ನಲ್ಲಿ ಮುಗ್ಗರಿಸಿ 3ನೇ ಬಾರಿ ವಿಶ್ವ ಚಾಂಪಿಯನ್ ಆಗುವ ಅವಕಾಶ ಮಿಸ್ ಮಾಡಿಕೊಂಡರು.
ಈಗ 2020ರ ಟಿ20, 2023ರ ಒಡಿಐ ವಿಶ್ವಕಪ್ಗೆ ಬಲಾಢ್ಯ ತಂಡವನ್ನು ರೆಡಿ ಮಾಡುವ ಉದ್ದೇಶದಿಂದ ಬಿಸಿಸಿಐ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ.
ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ನಿನ್ನೆಯಷ್ಟೇ ಪ್ರಕಟಿಸಲಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮೂರು ಮಾದರಿಗೆ ಆಯ್ಕೆಯಾಗಿದ್ದಾರೆ. ಮನೀಷ್ ಪಾಂಡೆ ಟಿ20 ಮತ್ತು ಒಡಿಐಗೆ ಸೆಲೆಕ್ಟ್ ಆಗಿದ್ದಾರೆ. ಮಯಾಂಕ್ ಅಗರ್ವಾಲ್ ಟೆಸ್ಟ್ಗೆ ಮಾತ್ರ ಆಯ್ಕೆಯಾಗಿದ್ದಾರೆ.
ವಿಶ್ವಕಪ್ನಲ್ಲಿ ಆಲ್ ರೌಂಡರ್ ವಿಜಯ್ ಶಂಕರ್ ಗಾಯಗೊಂಡು ಟೂರ್ನಿಯಿಂದ ಹೊರ ಬಂದಾಗ ಮಯಾಂಕ್ ಅವರನ್ನು ಇಂಗ್ಲೆಂಡ್ಗೆ ಕಳುಹಿಸಲಾಗಿತ್ತು. ಪ್ರತಿಷ್ಠಿತ ಟೂರ್ನಿಗೆ ಒಡಿಐಗೆ ಆಯ್ಕೆಯಾಗಿದ್ದ ಪರಿಗಣಿಸಲ್ಪಟ್ಟಿದ್ದ ಅಗರ್ವಾಲ್ ವೆಸ್ಟ್ ಇಂಡೀಸ್ ಟೂರ್ನಲ್ಲಿ ಒಡಿಐಗೆ ಯಾಕಿಲ್ಲ ಅನ್ನೋದು ಪ್ರಶ್ನೆ. ವಿಶ್ವಕಪ್ಗೆ ಆಯ್ಕೆಯಾಗಿದ್ದ ಮಯಾಂಕ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬರೀ ಟೆಸ್ಟ್ಗೆ ಮಾತ್ರ ಯಾಕೆ ಸೀಮಿತ ಎನ್ನುವುದು ಚರ್ಚೆಯ ವಿಷಯವಾಗಿದೆ.