ಸಮ್ಮಿಶ್ರ ಸರ್ಕಾರ ಪತನವಾಗಿ ಮೂರು ದಿನ ಕಳೆದರೂ ಬಿಜೆಪಿ ಸರ್ಕಾರ ರಚನೆಗೆ ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದರೆ, ಇಂದು ಬೆಳ್ಳಂಬೆಳಿಗ್ಗೆ ಬಿಜೆಪಿ ವರಿಷ್ಠರು ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದ ಮೂವರು ಶಾಸಕರನ್ನು ಅನರ್ಹಗೊಳಿಸುತ್ತಿದ್ದಂತೆ ಬಿಜೆಪಿ ಕಾರ್ಯತಂತ್ರ ಕೂಡ ಬದಲಾಗಿದೆ. ಈ ಮೊದಲು ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದ್ದ ವರಿಷ್ಠರು ಇಂದೇ ಪ್ರಮಾಣ ವಚನ ಸ್ವೀಕರಿಸುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಸೂಚನೆಗಾಗಿ ರಾಜ್ಯ ಬಿಜೆಪಿ ನಾಯಕರ ನಿಯೋಗ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಸರಣಿ ಸಭೆಗಳನ್ನು ನಡೆಸಿದರೂ ಸರ್ಕಾರ ರಚನೆಗೆ ಇನ್ನು ನಿರ್ಧಾರ ಕೈಗೊಂಡಿರಲಿಲ್ಲ. ಹೀಗಿರುವಾಗಲೇ ಯಡಿಯೂರಪ್ಪ ಅವರಿಗೆ ಕರೆ ಮಾಡಿದ ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಅನುಕೂಲವಾಗುತ್ತದೆ ಎಂಬ ಚಿಂತನೆ ಇದರ ಹಿಂದೆ ಇದೆ. ಈ ಕಾರಣದಿಂದ ಇಂದೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ವರಿಷ್ಠರು ತಿಳಿಸಿದ್ದಾರೆ ಎನ್ನಲಾಗಿದೆ.