ಸೋಮವಾರ ಸಂಜೆ ಮಂಗಳೂರು ಸಮೀಪದ ತೊಕ್ಕೊಟ್ಟು ಬಳಿ ನೇತ್ರಾವತಿ ನದಿ ಸೇತುವೆಯಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮೃತದೇಹ ಇಂದು ಬೆಳಿಗ್ಗೆ ನೇತ್ರಾವತಿ ನದಿ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಇದಾದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಕುಟುಂಬಸ್ಥರು ಸಿದ್ಧಾರ್ಥ್ ಅವರ ಅಂತಿಮ ಸಂಸ್ಕಾರವನ್ನು ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಎಸ್ಟೇಟ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿದೆ.
ಸಿದ್ದಾರ್ಥ್ ಅವರ ಮೃತದೇಹವನ್ನು ಈಗಾಗಲೇ ಸ್ನೇಹಿತರು ಹಾಗೂ ಸಂಬಂಧಿಕರು ಗುರುತಿಸಿದ್ದು, ಅವರು ಧರಿಸಿದ್ದ ಶೂ, ವಾಚ್ ಹಾಗೂ ಕೈಯಲ್ಲಿದ್ದ ಉಂಗುರ ಗುರುತು ಪತ್ತೆಗೆ ನೆರವಾಗಿದೆ.