ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರೇಜಿಸ್ಟಾರ್ ರವಿಚಂದ್ರನ್ಗಾಗಿ ಲಾಯರ್ ಆಗಿದ್ದಾರೆ. ಕಿಚ್ಚ ಕಪ್ಪು ಕೋಟು ಧರಿಸಿ ರವಿಚಂದ್ರನ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ..!
ಅರೆ ಏನಿದು ಹೊಸ ವಿಷಯ ಎಂದ್ರಾ? ನಿಮಗೆ ಈಗಾಗಲೇ ಗೊತ್ತಿರುವಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರವಿಮಾಮ ಡೈರೆಕ್ಷನ್ ಮಾಡುವುದರ ಜೊತೆಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ರವಿ ಬೋಪಣ್ಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಕಳೆದವಾರವಷ್ಟೇ ರವಿ ಬೋಪಣ್ಣ ಸಿನಿಮಾದ ಕುರಿತು ರವಿಚಂದ್ರನ್ ಹೇಳಿಕೆ ನೀಡಿದ್ದರು. ಈ ಸಿನಿಮಾದಲ್ಲಿ ತನ್ನ ಹಿರಿಯ ಮಗ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾನೆ. ಅತಿಥಿ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ ಎಂದು ರವಿಚಂದ್ರನ್ ಹೇಳಿದ್ದರು. ತನ್ನ ಮಗ ಸುದೀಪ್ ಪಾತ್ರ ಇಡೀ ಸಿನಿಮಾಕ್ಕೇ ಟ್ವಿಸ್ಟ್ ಕೊಡುವಂತಹ ಪಾತ್ರವಾಗಿದೆ ಎಂದು ರವಿಚಂದ್ರನ್ ಸುದೀಪ್ ಪಾತ್ರದ ಗುಣಗಾನ ಮಾಡಿದ್ದರು.
ಮೊನ್ನೆ ಮೊನ್ನೆಯಷ್ಟೇ ರವಿಚಂದ್ರನ್ ಈ ಮಾತನ್ನು ಹೇಳಿದಂತಿದೆ.. ಅಷ್ಟರಲ್ಲೀಗ ರವಿ ಬೋಪಣ್ಣ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಸುದೀಪ್ ಪಾತ್ರ ಕ್ಲೈಮ್ಯಾಕ್ಸ್ನಲ್ಲಿ ಬರುವಂತಹದ್ದು. ಆದರೆ ಅವರ ಪಾತ್ರದ ಚಿತ್ರೀಕರಣದಿಂದಲೇ ಶೂಟಿಂಗ್ ಶುರು ಮಾಡಿದ್ದಾರೆ. ಸುದೀಪ್ ನಿನ್ನೆ ಹಾಗೂ ಇವತ್ತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸುದೀಪ್ ಪಾಲಿನ ಶೂಟಿಂಗ್ ಕಂಪ್ಲೀಟ್ ಆಗಿದೆ.
ಸುದೀಪ್ ಯಾವ ಪಾತ್ರದಲ್ಲಿ ನಟಿಸ್ತಾರೆ ಎನ್ನುವ ಕುತೂಹಲವಿತ್ತು. ಕೊನೆಗೂ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಸುದೀಪ್ ರವಿ ಬೋಪಣ್ಣ ಸಿನಿಮಾದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಕೊನೆಯಲ್ಲಿ ಸುದೀಪ್ ಎಂಟ್ರಿ.. ಅದೇ ಕ್ಲೈಮ್ಯಾಕ್ಸ್. ಈ ಪಾತ್ರಕ್ಕೆ ರವಿಚಂದ್ರನ್ ಅವರಿಗೆ ಪಟ್ಟನೆ ಹೊಳೆದಿದ್ದೇ ಸುದೀಪ್ ಅವರ ಹೆಸರಂತೆ. ಬೇರೆ ಆಯ್ಕೆಯ ಯೋಚನೆಯನ್ನೇ ರವಿಚಂದ್ರನ್ ಮಾಡಿರಲಿಲ್ಲವಂತೆ. ಸುದೀಪ್ ಸಹ ಯಾವ ಪಾತ್ರ.. ಏನು ಎಂಥಾ ಅಂತ ವಿಚಾರಿಸದೇ ರವಿಚಂದ್ರನ್ ಅವರಿಟ್ಟಿರುವ ಪ್ರೀತಿಗೆ ಅದೇ ಪ್ರೀತಿ ಗೌರವದಿಂದ ಒಪ್ಪಿಕೊಂಡರಂತೆ.. ಈಗ ಸುದೀಪ್ ಭಾಗದ ಚಿತ್ರೀಕರಣ ಸಹ ಮುಗಿದೇ ಬಿಟ್ಟಿದೆ. ಸುದೀಪ್ ಕಪ್ಪು ಕೋಟು ಧರಿಸಿ ಮಿಂಚಿದ್ದಾರೆ.
ಇನ್ನು ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸೆಪ್ಟೆಂಬರ್ 12ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಕೋಟಿಗೊಬ್ಬ 3 ಕೂಡ ಸೆಟ್ಟೇರಿದೆ. ಸುದೀಪ್ ಕನ್ನಡದ ಜೊತೆಗೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ಬ್ಯುಸಿ ಇದ್ದಾರೆ. ರವಿಚಂದ್ರನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದಲ್ಲಿ ಕೃಷ್ಣನ ಅವತಾರವೆತ್ತಿದ್ದಾರೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.