ಒಂದು ಸಂಬಂಧದ ವಿದಾಯ ಅದೆಷ್ಟು ನೀರಸ ಅಲ್ವಾ..? ಮತ್ತೆ ಯಾರಿಗೂ ನನ್ನ ಹೃದಯದಲ್ಲಿ ಸ್ಥಾನ ಕೊಡಲ್ಲ ಅನ್ನೋ ಬಾಂಡ್ ನೊಂದಿಗೆ ಐ ಲವ್ ಯು ಅಂತಾ ಉಸಿರಿದ್ದೆ. ಅ ರಾತ್ರಿಯ ದಿನ ಇನ್ನು ನೆನಪಿದೆ. ಎಲ್ಲರಿಗೂ ಮುಂಜಾವಿನ ಸಿಹಿಕನಸು ಕಾಣುವ ಸಮಯ. ಆದ್ರೆ ನಾನು ಅವನು ದೂರವಾಣಿ ಕರೆಯಲ್ಲಿ ತಲ್ಲೀನ. ಒಂಟಿಯಾಗಿದ್ದ ಸಿಟಿಯಲ್ಲಿ ಏಕಾಂಗಿತನ ಇನ್ನಿಲ್ಲದಂತೆ ಕಾಡಿತ್ತು. ಸ್ನೇಹ, ಪ್ರೇಮದ ಮೋಸದ ಬಲೆಗೆ ಬೀಳಲು ಭಯ. ನನ್ನ ಪಾಡಿಗೆ ನಾನಿದ್ದವಳನ್ನು ಮತ್ತೆ ಅವರಿಸಿದ. ಸಾಯೋವರೆಗೂ ಜೊತೆಗಿರುತ್ತೇನೆ ಅಂದ. ಪ್ರಾಮಣಿಕ ಪ್ರೀತಿ ನಂಬಿಕೆ, ವಿಶ್ವಾಸ ಇವಿಷ್ಟು ಕೊಡಬಲ್ಲ ಅನ್ನೋ ನಂಬಿಕೆಯೊಂದಿಗೆ ಜಾತಿಯ ಹಂಗಿದ್ದರೂ ಪ್ರೀತಿಯ ಹೆಜ್ಜೆ ಹಾಕಿದೆ. ಅವತ್ತಿನಿಂದ ಅವನಿಗೆ ಸಣ್ಣ ಮೋಸವೂ ಆಗಲಿಲ್ಲ. ನನ್ನೆಲ್ಲ ಸಂಬಂಧಗಳನ್ನು ಕಡಿದುಕೊಂಡು ಪವಿತ್ರ ಪ್ರೀತಿಗಾಗಿ ಮುಡಿಪಿಟ್ಟೆ. ಅವತ್ತೊಂದಿನ ನಡುರಾತ್ರಿ ಒಂದ್ ಮಾತು ಹೇಳಿದ್ದ. ಒಂದು ಪ್ರೀತಿಯಲ್ಲಿ ಬಿದ್ದ ಮೇಲೆ ಪ್ರಾಮಣಿಕತೆ ಇರಬೇಕು. ಅಲ್ಲಿ ಮೂರನೇ ವ್ಯಕ್ತಿಯ ಹೆಜ್ಜೆಯ ಗುರುತು ಇರಬಾರದು. ಸ್ನೇಹವಾಗಿಯೂ ಕೂಡ ನಾನು ಸಹಿಸಲ್ಲ ಅಂದ. ಅವನ ಮಾತು ಅಪ್ಯಾಯಮಾನವಾಗಿ ಕೇಳಿಸಿತು. ಅವನು ಮಾತಷ್ಟೇ ಹೇಳಿದ್ದ ಅಣೆ ತೆಗೆದುಕೊಂಡಿರಲಿಲ್ಲ. ಅವನ ಮಾತಿಗೆ ಇವತ್ತಿನವರೆಗೂ ಗೌರವ ಕೊಟ್ಟಿದ್ದೆ. ಬೇರೆ ಹುಡುಗಿಯಂತೆ ನನ್ನ ಫ್ರೆಂಡ್ ಅವ್ನು ಅವ್ನಿಗೆ ಮೇಸೆಜ್ ಮಾಡ್ತೀನಿ, ಫೋನ್ ಮಾಡ್ತೀನಿ ನಿಂಗೇನು ಅಂತೆಲ್ಲ ಜಗಳವಾಡಿಲ್ಲ. ನನಗದು ಬೇಕಾಗಿಯೂ ಇರಲಿಲ್ಲ. ಅವನಿಗಿಷ್ಟವಿಲ್ಲದೇ ಇದ್ದದ್ದು ನಂಗೂ ಇಷ್ಟವಿರಲಿಲ್ಲ. ಅಮ್ಮ ಪ್ರೀತಿಯಿಂದ ಮೂಗುತಿ ಹಾಕಿದ್ಲು. ಅಣ್ಣ ಪ್ರೀತಿಯಿಂದ ಮೂಗುತಿ ತರಿಸಿದ್ದ. ಅದ್ಯಾಕೋ ನನ್ನ ಮೂಗಿನ ನತ್ತು ಅವ್ನಿಗೆ ಇಷ್ಟವಾಗಿರಲಿಲ್ಲ. ತೆಗಿತೀಯಾ ಅದನ್ನು ಅಂದ ತೆಗೆದೇಬಿಟ್ಟೇ..? ಅಮ್ಮನ ಪ್ರೀತಿ ಅಣ್ಣನ ಅಕ್ಕರೆ ಮರೆತೆಬಿಟ್ಟೆ. ಈಗ ಕಣ್ಣಂಚಲ್ಲಿ ಸಣ್ಣ ನೀರು..
ಮಾತಿನಿಂದ ಬೆಳೆದ ಸ್ನೇಹ ಪ್ರೇಮವಾಗಿ ಬಿಟ್ಟಾಗ ಗೊಂದಲ ಭಯ ಎಲ್ಲವೂ ಇತ್ತು. ಜಾತಿಯ ಸಮಸ್ಯೆ ಮನೆಯವರ ವಿರೋಧ ಎಲ್ಲವೂ ಕಾಡಿತ್ತು. ಆದ್ರೇ ಪ್ರೀತಿಸುವವನ ಜೊತೆ ಬದುಕು ಹಂಚಿಕೊಳ್ಳುವ ನಿರ್ಧಾರಕ್ಕೆ ಮನಸು ಬಂದೇಬಿಟ್ಟಿತ್ತು. ನನ್ನೆಲ್ಲ ಕಥೆಯನ್ನು ಪ್ರಾರಂಭದಲ್ಲಿಯೇ ಬಿಚ್ಚಿಟ್ಟೇ. ಆದ್ರೇ ಅದ್ಯಾಕೋ ಅವನು ಅದೆಲ್ಲವನ್ನು ಮುಚ್ಚಿಟ್ಟನೋ ಗೊತ್ತಿಲ್ಲ. ಆದ್ರೆ ನನಗೆ ತಿಳಿದ ಮೇಲೆ ಒಂದೊಂದಾಗಿ ಹೇಳಿಬಿಟ್ಟ. ನನ್ನ ಪ್ರೀತಿಗೆ ಜಾತಿ ಅದರೊಂದಿಗೆ ಧರ್ಮವೂ ಸೇರಿಬಿಟ್ಟಿತ್ತು. ಜೊತೆಗೆ ಪ್ರಥಮ ಪ್ರೀತಿಯ ವಿಷ್ಯಾ ನಂಗೆ ಇದೆಲ್ಲ ಹೇಳದೇ ಮುಚ್ಚಿಟ್ಟನಲ್ಲ ಅನ್ನುವ ಸಿಟ್ಟಿಗಿಂತ ಅವ್ನ ಕಥೆ ಮನಸ್ಸು ಕಲಕಿತ್ತು. ಅವತ್ತೇ ನಿರ್ಧಾರ ಮಾಡಿದ್ದೇ, ಈ ಮುಗ್ಧ ಹುಡುಗನ ಬಿಟ್ಟು ಬದುಕಲ್ಲ ಅಂತ. ಆನಂತ್ರ ಎಲ್ಲವೂ ಕನಸಿನಂತೆ ನಡೆಯಿತು. ಬದುಕಿನಲ್ಲಿ ತುಂಬಾ ಸವಾಲು ಎದುರಿಸಿದ. ಅವಮಾನ ಎದುರಿಸಿದ, ಕಷ್ಟಪಟ್ಟ. ಬೇರೆಯವರಿಂದ ಮೋಸ ಹೋದ. ಕಣ್ಣೀರು ಹಾಕಿದ. ಅವನ ನೋವಿಗೆ ನಾನು ಸಾಂತ್ವನ ನೀಡಿದ ನೆಮ್ಮದಿ ಇದೆ. ಅವ್ನ ಪ್ರತಿ ಕಣ್ಣೀರು ಒರೆಸೋಕೆ ನಾ ಜೊತೆ ಇದ್ದೆ. ಹಾಗಂತ ನಾನು ಜಗಳವಾಡಿಲ್ಲ ಎಂದಲ್ಲ. ತುಂಬಾನೆ ಜಗಳವಾಡಿದ್ದೇ, ಸಣ್ಣ ವಿಷ್ಯಾಕ್ಕೂ ರೇಗುತ್ತಿದ್ದೆ, ಬುದ್ಧಿ ಹೇಳಿದ್ದೆ. ಅದೇನೆ ಇದ್ರೂ ಅಲ್ಲಿದ್ದಿದ್ದು ನನಗೆ ಅವ್ನ ಮೇಲೆ ತಾಯಿ ಪ್ರೀತಿ ಅಷ್ಟೇ. ಪ್ರತಿವಾರವೂ ಮೀಟ್ ಆಗುತ್ತಿದ್ದ. ಆ ದಿನದ ಸವಿನೆನಪೇ ಬೇರೆ.ಬೆಂಗಳೂರು ವಿಶಾಲವಾಗಿದ್ರೂ ಅಲ್ಲಿ ನಾವಿಬ್ಬರೇ ಇದ್ದ ಅನುಭವ. ಅವತ್ತು ಅವನು ಸಿಗರೇಟು ಸೇದೋ ವಿಷ್ಯಾ ಹೇಳಿದ್ದ. ನನಗೆ ನಡುಕ. ನನಗೆ ಸ್ಮೋಕ್ ಅಂದ್ರೆ ಆಗಲ್ಲ. ದಯವಿಟ್ಟು ಅದ್ನ ಬಿಡ್ತೀರಾ ಅಂದೆ. ಓಕೆ ಅಂದ. ಟೈಂ ಕೊಡು ಅಂದ. 1 ತಿಂಗಳು ಕೊಟ್ಟು ನಂತ್ರ ಇನ್ಮುಂದೆ ಸೇದಬೇಡ ಅಂದೆ. ಸೇದಲ್ಲ ಅಂದ. ಫ್ರಥಮ ಬಾರಿಗೆ ಪ್ರೀತಿ ಮೇಲೆ ಅಣೆ ಹಾಕಿಸಿಕೊಂಡೆ. ನನ್ನ ಹುಡ್ಗ ನನ್ನ ಮಾತು ಮೀರಲ್ಲ ಅನ್ನೋ ಹುಚ್ಚು ನಂಬಿಕೆಯಲ್ಲಿ. ಆದ್ರೆ ಅವನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರೂ ವಾದಿಸತೊಡಗಿದ. ಬಹುಶಃ ಅಲ್ಲಿಂದ ಶುರುವಾಯಿತು ಅನಿಸುತ್ತೇ ನನ್ನ ನಂಬಿಕೆ ಬುನಾದಿ ಬಿರುಕು ಬಿಡಲು. ಯಾರ ಜೊತೆನೂ ಮೇಸೆಜ್ ಮಾಡಬಾರದು, ಮೂರನೆಯವರ ಪ್ರವೇಶ ಆಗಬಾರದು ಅಂದವನು ಅದ್ಯಾಕೋ ಸ್ವಲ್ಪ ಎಡವುತ್ತಿದ್ದಾನೆ ಅನಿಸಿತ್ತು. ಎಲ್ಲಿ ನನ್ನಿಂದ ಪ್ರೀತಿ ದೂರವಾಗುತ್ತೋ ಅನ್ನೋ ಭಯದಿಂದ ಕೆಟ್ಟದಾಗಿ ಜಗಳವಾಡಿದ್ದೇ. ಯಾಕೋ ಎಚ್ಚೆತ್ತುಕೊಂಡ. ಅವನಿಗೂ ತಪ್ಪಿನ ಅರಿವಾಗಿರಬಹುದು ಅಂದುಕೊಂಡೆ. ಅದ್ರೆ ಹುಚ್ಚು ಮನಸು ಒಂದು ಕ್ಷಣ ಅನುಮಾನವೆಂಬ ಭೂತ ಹೊಕ್ಕುಬಿಟ್ರೆ ಹೊರಬರೋದು ಕಷ್ಟನೇ..ಅದ್ಯಾಕೋ ಸ್ವಲ್ಪ ನನ್ನೆದೆಯಲ್ಲಿ ಸಣ್ಣದಾಗಿ ಅನುಮಾನದ ಹೊಗೆ ಏಳಲಾರಬಿಸಿತ್ತು. ಆದ್ರೆ ಅಲ್ಲಿ ಅನುಮಾನ ಅನ್ನೋದಕ್ಕಿಂತಲೂ ನನ್ನ ಪ್ರೀತಿ ಕೈತಪ್ಪಿ ಹೋಗಬಾರದು, ನನಗೆ ಮಾತ್ರ ಸೀಮಿತವಾಗಿರಬೇಕು ಅನ್ನೋ ಹುಚ್ಚುತನವಷ್ಟೇ. ಪ್ರತಿ ಹೆಣ್ಣಿಗೂ ಇರುವ ಜಲಸ್ ನನಗೂ ಇತ್ತು. ಸ್ವಲ್ಪ ಜಾಸ್ತೀನೆ ಇತ್ತು. ಯಾಕೆಂದ್ರೆ ನಂಗೆ ಅವನ ಬಿಟ್ರೆ ಬೇರೆ ಪ್ರಪಂಚಾನೇ ಇರಲಿಲ್ಲ. ಅಮ್ಮನ ಸ್ಥಾನ, ಅಣ್ಣನ ಸ್ಥಾನ ಎಲ್ಲವೂ ಅವನೇ ತುಂಬತೊಡಗಿದ. ಅವನೆದೆಯಲ್ಲಿ ತಲೆಯಿಟ್ಟು ಮಲಗಿದ್ರೆ ಜಗತ್ತೇ ಮರೆತ ಭಾವ. ಅಲ್ಲಿ ನನ್ನ ಮನೆ ಸಮಸ್ಯೆ, ಕಾಡೋ ನೋವು ಯಾವುದು ಇರಲ್ಲ. ಅಲ್ಲಿ ಎಲ್ಲವೂ ನಿರಾಳ. ಅವನೊಂದಿಗೆ ಇದ್ರೆ ಅಮ್ಮನೊಂದಿಗೆ ಇದ್ದಷ್ಟು ಸೆಕ್ಯೂರ್ ಫೀಲಿಂಗ್. ಪ್ರೀತಿಗೆ ಎರಡು ವರ್ಷ ತುಂಬುವಷ್ಟರಲ್ಲಿ ಅಷ್ಟು ಆತ್ಮೀಯರಾಗಿದ್ದೇವು. ನೈಟ್ ಶಿಪ್ಟ್ ಇದ್ದವನು ನನಗಾಗಿ ಐದರ ಜಾವಕ್ಕೆ ಬಂದಿದ್ದ. ಡ್ಯೂಟಿಗೆ ಹೊರಟವನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ. ಅವನ ಬಳಿ ಬೈಕ್ ಇಲ್ದೇ ಇದ್ದಾಗ ಸ್ನೇಹಿತರ ಬೈಕ್ ತೆಗೆದುಕೊಂಡು ಬರುತ್ತಿದ್ದ, ಮೈಲುಗಟ್ಟಲೇ ನಡೆದುಕೊಂಡು ಬರುತ್ತಿದ್ದ. ಅವನ ಅರೋಗ್ಯ ಸ್ಥಿತಿಗೆ ಭಯಪಟ್ಟ ಪ್ರೀತಿ ಮೇಲೆ ಅಣೆ ಹಾಕಿದ್ರೂ ಕ್ಯಾರೆ ಅಂದಿಲ್ಲ, ಇನ್ನು ನನಗಿಷ್ಟದ ಧರ್ಮಸ್ಥಳ ದೇವರ ಮೇಲೆ ಆಣೆ ಹಾಕಿಸಿ ಬಿಡುತ್ತೇನೆ ಅಂತ ಅಂದುಕೊಂಡಿದ್ದೇ. ಅವನಿಗೆ ಸಣ್ಣ ಸಮಸ್ಯೆಯಾದ್ರೂ ನಾನು ಎಷ್ಟೋ ಸಲ ಬೇಡುತ್ತಿದ್ದಿದ್ದು ದರ್ಮಸ್ಥಳ ಮಂಜುನಾಥನ ಬಳಿ. ಅವನಿಗಾಗಿ ಅದೆಷ್ಟು ಹರಕೆ ಕೂಡ ಹೇಳಿಕೊಂಡಿದ್ದೇ. ಅದ್ಯಾವತ್ತು ಸುಳ್ಳು ಆಗಿಲ್ಲ. ಅವತ್ತು ನಾನು ಅವನು ಧರ್ಮಸ್ಥಳ ದೇವರ ಸಾನಿಧ್ಯದಲ್ಲಿ ನಿನಗೆ ನಿಜವಾಗಿಯೂ ಸಿಗರೇಟ್ ಬಿಡೋದಕ್ಕೆ ಆಗುತ್ತಾ, ಆಗುತ್ತಾದ್ರೆ ನಾನೊಂದು ಅಣೆ ಹಾಕುತ್ತೇನೆ. ನಾನು ಖಂಡಿತಾ ಬಿಡುತ್ತೇನೆ ಅಂದ. ನನಗೆ ಭಯ. ನೋಡು ಇದು ಧರ್ಮಸ್ಥಳ, ಕೊಟ್ಟ ಮಾತಿಗೆ ಎಂತಹ ಪರಿಸ್ಥಿತಿ ಬಂದ್ರೂ ತಪ್ಪಬಾರದು ಅಂದಿದ್ದೆ. ಆಯಿತು ಅಂದ. ನಾನು ತುಂಬಾ ಖುಷಿಯಾಗಿದ್ದೆ. ನಾನು ಅವತ್ತು ಅವನು ಪ್ರ
ೀತಿ ಅಣೆ ಮೀರಿದಾಗಲೇ ಅಂದುಕೊಂಡಿದ್ದೇ ಧರ್ಮಸ್ಥಳದಲ್ಲಿ ಅಣೆ ಹಾಕಿಸಿ ಈ ಕೆಟ್ಟ ಹ್ಯಾಬಿಟ್ ಬಿಡಿಸಬೇಕು ಅಂತ. ಕೊನೆಗೂ ಸಾಧಿಸಿದ ಖುಷಿ ನನಗಿತ್ತು.
ಆದ್ರೆ ಅವತ್ತು ಆಕ್ಟೋಬರ್ 2. ಸಣ್ಣ ತಪ್ಪಿಗೆ ತೀರಾ ಅಸಭ್ಯವಾಗಿ ಬೈದೇ ಬಿಟ್ಟ. ಪ್ರೀತಿಯ ಕನಸು ಕೈಜಾರಿದ ನೋವು. ಅವನ ಮೇಲೆ ಇಟ್ಟಿದ್ದ ಅಷ್ಟು ಪ್ರೀತಿ, ಅಭಿಮಾನ, ಕೊಚ್ಚಿಕೊಂಡು ಹೋದ ಅನುಭವ. ಅಬ್ಬಾ.. ಆ ದಿನ ಅನುಭವಿಸಿದ ನೋವು!. ನನ್ನ ಪ್ರೀತಿಯ ಪುಟ್ಟ ಹೇಳಬಾರದ ಮಾತು ಹೇಳಿಬಿಟ್ಟ. ನಿರೀಕ್ಷಿಸಿರಲಿಲ್ಲ. ಆಗ ಫೋನ್ ಕಟ್ ಮಾಡಿ ಆಫೀಸ್ನಲ್ಲಿ ಫೋನ್ ಕೆಳಗೆಸೆದು ಬಿಟ್ಟೆ. ಅದೇನೋ ಟೈಪಿಸುತ್ತಿದ್ದ ಕೈ ಅಲ್ಲೇ ನಿಂತುಹೋಯಿತು. ಅದ್ಯಾವ ಲೋಕದಲ್ಲಿ ಇದ್ದೇನೋ ಗೊತ್ತಿಲ್ಲ. ಅವತ್ತೆಲ್ಲ ಬೆಂಗಳೂರಿನ ಟ್ರಾಫಿಕ್ ಸದ್ದು ನನಗೆ ಕೇಳಿಸಲಿಲ್ಲ. ನನ್ನ ಕಿವಿ ಕಿವುಡು ಅಯಿತೇನೋ ಅನಿಸುತ್ತು. ನೋವು ಕೊಟ್ಟಿದ್ದು ಅಂದ್ರೆ ಅವನ ಸಣ್ಣ ಬೈಗಳಕ್ಕೂ ಕಣ್ತುಂಬ ನೀರು ತುಂಬಿ ಅತ್ತುಬಿಡುವ ನಾನು ಅವತ್ತೆಲ್ಲ ಅಳಲೇ ಇಲ್ಲ. ಮಧ್ಯರಾತ್ರಿಯಲ್ಲಿ ಅವನ ಮೆಸೇಜ್ ಕೆಟ್ಟದಾಗಿ ಬೈದೆ ಬೇಸರವಾಯಿತು, ಕ್ಷಮಿಸು ಅಂದ. ನನ್ನ ಮನಸಿಗಾದ ಘಾತಕ್ಕೆ ಕ್ಷಮೆ ನೀಡಲು ಅನರ್ಹ ಅನಿಸಿತು. ನನಗೆ ನಾನೇ ಚೀಪ್ ಅದ ಭಾವ. ಅವನು ಕೋಪಗೊಂಡ್ರೆ ನಾನೇ ಮೊದಲು ಫೋನ್ ಮಾಡುತ್ತಿದ್ದೆ, ಆದ್ರೆ ಅವತ್ಯಾಕೋ ಫಸ್ಟ್ ಟೈಂ ಸಾಕು ಇವನ ಪ್ರೀತಿ ಅನಿಸಿಬಿಟ್ಟಿತ್ತು. ಫಸ್ಟ್ ಟೈಂ ಬಿರುಗಾಳಿ ಎದ್ದಿತ್ತು. ದಿನಾ ಬೆಳಗಾದ್ರೆ, ರಾತ್ರಿಯಾದ್ರೆ ಅವನೊಂದಿಗೆ ಮಾತು ಜಗಳ, ತಲೆಹರಟೆಯಲ್ಲಿ ಕಾಲ ಕಳೆಯುತ್ತಿದ್ದ ನನಗೆ ಮೊದಲ ಬಾರಿ ಅವನಿಂದ ತುಂಬಾ ದೂರ ಹೋದ ಅನುಭವ. ಆದ್ರೆ ಹೆಚ್ಚುದಿನ ಅವನ ಬಿಟ್ಟು ಇರಲು ಕಷ್ಟ. ಹೇಗೋ ಸಣ್ಣದಾಗಿ ಕಾಂಪ್ರಮೈಸ್ ಆದ್ರೂ ಅದ್ಯಾಕೊ ಅ ಪದ ಮಾತ್ರ ಮರೆಯಲೇ ಆಗಿಲ್ಲ. ಅವತ್ತು ಮತ್ತೆ ಮಾತಿಗಿಳಿದ್ವಿ. ಆದ್ರೆ ಅವ್ನ ಮತ್ತೆ ನನ್ನ ಘಾಸಿಯಾದ ಹೃದಯಕ್ಕೆ ಚೂರಿ ಹಾಕಿದ. ನಾನು ಸ್ಟೋರಿಗೆ ಹೋದಾಗ ಅನಿವಾರ್ಯವಾಗಿ ಎರಡು ದಮ್ ಹೊಡೆದೆ ಅಂದ. ಅದ್ಯಾರೋ ಚಪ್ಪಲಿಯಲ್ಲಿ ಕೆನ್ನೆಗೆ ಪಟ ಪಟ ಹೊಡೆದ ಹಾಗೆ ಅಯಿತು. ನಾನು ಅವನಿಂದ ನಂಬಿಕೆ, ವಿಶ್ವಾಸ, ಪ್ರಾಮಣಿಕತೆ ಬಿಟ್ಟು ಬೇರೆನೂ ಬಯಸಿರಲಿಲ್ಲ. ಅದುಕೊಡಿಸು ಅಲ್ಲಿಗೆ ಕರೆದುಕೊಂಡು ಹೋಗು, ಗಿಫ್ಟ್ ಕೊಡಿಸು, ಯಾವ ಕಾಟನೂ ನೀಡಲಿಲ್ಲ. ಅವನಿಗೆ ತಾಯಿ ಒಬ್ಬಳೇ ನೀಡಬಹುದಾದ ನಿರ್ಮಲ ಪ್ರೀತಿ ನೀಡಿದ್ದೆ. ಅವನು ಅದನ್ನು ದಿಕ್ಕರಿಸಿದ್ದ. ನಂಬಿಕೆಯ ಬೆಲೆಗೆ ಕೊಡಲಿಯೇಟು ಕೊಟ್ಟು. ನಂಬಿಕೆ ದ್ರೋಹ ಮಾಡಿದ. ನಾನು ಅವತ್ತು ಕೆಟ್ಟ ದೈರ್ಯದಲ್ಲಿ ಈಶ್ವರನ ಮುಂದೆ ಬೇಡಿದ್ದೇ, ದೇವ್ರೇ ನನ್ನ ಪುಟ್ಟಗೆ ಒಳ್ಳೆ ಬುದ್ದಿ ಕೊಡು, ಈ ಕೆಟ್ಟ ಅಭ್ಯಾಸದಿಂದ ದೂರ ಇರೋ ತರ ಮಾಡು. ನಿನ್ನ ಮೇಲೆ ಹಾಕಿದ ಅಣೆ ಯಾವತ್ತು ಮೀರಲ್ಲ. ನನ್ನ ಅವ್ನ ಪ್ರೀತಿ ನಿಜವಾಗಿದೆ. ಅವ್ನು ಎತ್ತ ಪರಿಸ್ಥಿತಿ ಬಂದ್ರೂ ಅಣೆ ಮೀರಲ್ಲ. ಆದ್ರೆ ಅಪ್ಪಿತಪ್ಪ ಅಣೆ ಮೀರಿದ್ರೆ ನನಗೆ ಕೆಟ್ಟ ಶಿಕ್ಷೆ ನೀಡು. ಆದ್ರೆ ಅವನಿಗೇನೂ ಮಾಡಬೇಡ ಅಂತ ಬೇಡಿದ್ದೆ. ಧರ್ಮಸ್ಥಳದ ಅಣೆ ಮುರಿದರೆ ಅದ್ರ ಕೆಟ್ಟ ಫಲದ ಬಗ್ಗೆ ನನಗೆ ಗೊತ್ತಿದೆ. ದೇವರು ಕೊಡುವ ಶಿಕ್ಷೆ ಬಗ್ಗೆ ಭಯವಿಲ್ಲ. ಆದ್ರೆ ನಂಬಿಕೆಯ ಬುನಾದಿ ಪೂರ್ತಿ ಕುಸಿದುಬಿದ್ದ ನೋವಿತ್ತು. ಆದ್ರೆ ಅವನಿಗೆ ಅದ್ರೆ ಮೇಲೆ ನಂಬಿಕೆಯೇ ಇರಲಿಲ್ಲ. ಅವನು ನಗುತ್ತಾ ಹಾಸ್ಯ ಮಾಡುತ್ತಿದ್ದ. ನನ್ನ ನಂಬಿಕೆ ಜೊತೆ ಚೆಲ್ಲಾಟವಾಡಿದ್ದ. ಇದ್ರ ಬಗ್ಗೆ ಅವನಿಗೆ ತಿಳಿಹೇಳೋಣ, ನನ್ನ ಮನಸಿನ ನೋವು ಹೇಳೋಣ ಅಂತ ಅದೆಲ್ಲವನ್ನು ಸಹಿಸಿಕೊಂಡು, ಪ್ಲೀಸ್ ಸಿಗ್ತೀಯ.. ಅಂತ ಕೇಳಿದ್ದೆ. ಬೈಕ್ನಲ್ಲಿ ಹೋಗುತ್ತಿದ್ದವ್ನು ಬೈಕ್ ಒಳಗಡೆ ಇಟ್ಟಿದ್ದೀನಿ ಅಂದ. ಒಂದು ಹತ್ತು ನಿಮಿಷ ಬಂದು ಹೋಗು ಅಂತ ಗೋಗರೆದೆ. ಅವನಿಗೆ ಮನಸು ಕರಗಲೇ ಇಲ್ಲ. ಸರಿ, ನೀನಿರೋ ಕಡೆ ನಾನೇ ಬರ್ತೀನಿ, ನಿನಗಾಗಿ ಸ್ವೀಟ್ ಬಾಕ್ಸ್ ತಂದಿದ್ದೇ ಅಂದೆ. ಅದ್ರೂ ಬರಲಿಲ್ಲ. ಸತ್ತು ಹೋಯಿತು ನನ್ನ ಮನಸು. ಮತ್ತೆ ಯಾವತ್ತು ಮರುಹುಟ್ಟು ಪಡೆಯಲ್ಲ, ಒಂದಲ್ಲ ಎರಡಲ್ಲ ಸಾಕಷ್ಟು ಬಾರಿ ನಂಬಿಕೆ ದ್ರೋಹ ಅಯಿತು. ಸುಳ್ಳಿನ ಕಂತೆ ಪೋಣಿಸಿ ಬದುಕೋದು ನನಗೆ ಕಷ್ಟ. ಸಾಕು ಸಾಕು ನಂಬಿಕೆ ಪ್ರಾಮಾಣಿಕತೆ, ಅತೀ ಪ್ರೀತಿ ಹುಚ್ಚು ಪ್ರೀತಿ ಯಾವುದು ಇರಬಾರದು ಅನಿಸಿತು. ಇನ್ಮುಂದೆ ನಾ ನಂಬೋದು ನನ್ನ ತಾಯಿ ಒಬ್ಬಳನ್ನೇ. ಬಹುಶಃ ಅವಳ ಕಣ್ತಪ್ಪಿಸಿ ನಾನು ಮಾಡುತ್ತಿದ್ದ ಕೆಲ್ಸಕ್ಕೆ ದೇವರು ನೀಡಿದ ಶಿಕ್ಷೆಯೋ ಗೊತ್ತಿಲ್ಲ. ಆದ್ರೆ ಬದುಕು ಇಷ್ಟೇ ಸಾಕು ಅನಿಸಿದೆ. ಕಲ್ಲಾಗಿ ಬಿಟ್ಟಿದೆ. ಬದುಕು ಭ್ರಮೆಯಲ್ಲ, ಯಾವುದಾದ್ರೂ ಒಂದು ಡಿಸೈಡ್ ಮಾಡಿ ಸೆಟ್ಲ್ ಮಾಡಿ ದೂರ ಹೋಗೋಣ ಅಂತ ಮೇಸೆಜ್ ಹಾಕಿದ ಅವನಿಗೆ ನನ್ನ ನಿರ್ಮಲ ಪ್ರೀತಿ, ಅವನಿಗಾಗಿ ನಾನು ದೇವರಲ್ಲಿ ಬೇಡಿದ ಕ್ಷಣ, ಕಣ್ಣೀರಿಟ್ಟಿದ್ದು ಎಲ್ಲವೂ ಮರೆತುಹೋಯಿತು. ಸಮಯದ ಅರಿವೇ ಇಲ್ಲದೇ ಅವನಿಗಾಗಿ ಚಡಪಡಿಸಿದವಳಿಗೆ ಆಟ್ಲೀಸ್ಟ್ ಬಂದು ಮಾತನಾಡೋದಕ್ಕೂ ಟೈಂ ಇರಲಿಲ್ಲ ಅವತ್ತು…!
ಎನಿವೇ ಬಾಯ್ ಪುಟ್ಟಾ. ಇದು ನನ್ನ ಕೊನೆಯ ಮೆಸೇಜ್. ನಿನ್ನಿಂದ ದೂರ ಹೋಗ್ತಾ ಇದ್ದೀನಿ. ಇನ್ಯಾವತ್ತು ಕಿರಿಕಿರಿ ಅನಿಸುವ ನಾನು ನಿನ್ನ ಪಾಲಿಗೆ ಇರಲ್ಲ. ನಿನಗೊಪ್ಪುವ ಹುಡುಗಿಯನ್ನು ಹುಡುಕು. ಆದ್ರೆ ದಯವಿಟ್ಟು ನಂಬಿಕೆ ದ್ರೋಹ ಮಾತ್ರ ಯಾರಿಗೂ ಮಾಡಬೇಡ..!
- ರಾ ಚಿಂತನ್.
POPULAR STORIES :
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!