ಗಣೇಶನ ಹಬ್ಬ ಬಂದಿತು.. ನಮ್ಮಲ್ಲಿ ಗಣೇಶನಿಗೆ ಅಗ್ರಸ್ಥಾನ. ವಿಘ್ನ ನಿವಾರಕನಿಗೆ ಎಲ್ಲೆಲ್ಲೂ ಪ್ರಥಮ ಪೂಜೆ ಮತ್ತು ವಿಶೇಷ ಸ್ಥಾನ ಅಂತೆಯೇ ಸಿನಿಮಾಗಳಲ್ಲೂ ವಿಶೇಷ ಸ್ಥಾನವಿದೆ.
ಸಿನಿಮಾಗಳಲ್ಲಿ ಗಣೇಶ ನಾನಾ ರೀತಿ ಬಿಂಬಿಸಲ್ಲಪಟ್ಟಿದ್ದಾನೆ. ಚಲನಚಿತ್ರಗಳಲ್ಲಿ ಈ ದೇವರ ಕುರಿತಾಗಿ ಭಯ – ಭಕ್ತಿಗಿಂತ ಪ್ರೀತಿಯೇ ಹೆಚ್ಚು ಎನ್ನುವುದು ವಿಶೇಷ. ಹಲವು ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುವ ನಟ-ನಟಿಯರಿಗೆ ಗಣೇಶನೇ ಫ್ರೆಂಡ್! ಆತನಲ್ಲಿ ಅವರು ಕಷ್ಟ – ಸುಖ ಹೇಳಿಕೊಳ್ಳುವುದುಂಟು. ‘ಶ್ರೀಮೋಕ್ಷ’ ಸಿನಿಮಾದಲ್ಲಿ ಗಣೇಶೋತ್ಸವ ಪ್ರಮುಖ ಹಿನ್ನೆಲೆಯಾಗಿ ಬಳಕೆಯಾಗಿದ್ದರೆ, ಉಪೇಂದ್ರರ ‘ಕುಟುಂಬ’ ಚಿತ್ರದಲ್ಲಿ ‘ಜೈ ಗಣೇಶ’ ಹಾಡು ತುಂಬಾ ಫೇಮಸ್. ಈ ಮೊದಲು ತಾವೇ ನಿರ್ದೇಶಿಸಿ, ನಟಿಸಿದ ‘ಎ’ ಚಿತ್ರದಲ್ಲಿ ಉಪೇಂದ್ರ ಪಿಸ್ತೂಲು ಹಿಡಿದು ಈ ವಿಘ್ನನಾಶಕನನ್ನೇ ತರಾಟೆಗೆ ತೆಗೆದುಕೊಂಡಿದ್ದರು! ಮೊದಲೇ ಹೇಳಿದಂತೆ ನಮ್ಮ ಸಿನಿಮಾಗಳಲ್ಲಿ ಗಣೇಶನೆಂದರೆ ಭಕ್ತಿಗಿಂತ ಸಲುಗೆ ಜಾಸ್ತಿ.
ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಸಿನಿಮಾಗಳಲ್ಲಿ ಅದ್ಧೂರಿ ಗಣೇಶೋತ್ಸವ ತೋರಿಸಲಾಗಿದೆ. ವಿಚಿತ್ರವೆಂದರೆ ಈ ದೇವರ ಸನ್ನಿಧಿಯಲ್ಲಿ ರೋಮ್ಯಾನ್ಸ್ ನಡೆದದ್ದು ಕಡಿಮೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ಕ್ರೈಂ ತೋರಿಸಿದ್ದೇ ಹೆಚ್ಚು. ಹಾಡು – ಕುಣಿತದ ಥ್ರಿಲ್ ನಡುವಿನ ಹೊಡೆದಾಟದ ದೃಶ್ಯಗಳು ಹಬ್ಬದ ಪ್ರಾಮುಖ್ಯತೆಯನ್ನೇ ಮರೆಮಾಚುತ್ತವೆ. ಎಲ್ಲರನ್ನೂ ಒಂದುಗೂಡಿಸುವ ಸಾಂಸ್ಕೃತಿಕ ರಾಯಭಾರಿ ಈ ವಿನಾಯಕ. ಆದರೆ ನಮ್ಮ ಬಹುತೇಕ ಸಿನಿಮಾಗಳಲ್ಲಿ ಈ ಹಬ್ಬಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಆದರೆ ತೆರೆಯಾಚೆಗಿನ ಕಥೆಯೇ ಬೇರೆ. ಶೂಟಿಂಗ್‌ಗೆ ಮುನ್ನ ವಿಘ್ನ ನಿವಾರಕನ ನೆನೆಯುವುದನ್ನು ಮಾತ್ರ ಸಿನಿಮಾ ಮಂದಿ ಮರೆಯುವುದಿಲ್ಲ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗಣೇಶನ ಕುರಿತಂತೆ ಪೌರಾಣಿಕ ಚಿತ್ರಗಳು ಬಂದದ್ದು ಕಡಿಮೆ. ಶಿವ, ಷಣ್ಮುಖನ ಕಥೆಗಳಲ್ಲಿ ಪ್ರಾಸಂಗಿಕವಾಗಿ ಲಂಬೋದರ ಕಾಣಿಸಿಕೊಳ್ಳುತ್ತಾನೆ. ಕನ್ನಡದ ‘ಭೂಕೈಲಾಸ’, ‘ಸತಿ ಸಾವಿತ್ರಿ’, ‘ಪಾರ್ವತಿ ಕಲ್ಯಾಣ’ ಸಿನಿಮಾಗಳಲ್ಲಿ ಮೋದಕಪ್ರಿಯನ ಉತ್ತಮ ಚಿತ್ರಣ ಸಿಗುತ್ತದೆ. ಹಾಗೆ ನೋಡಿದರೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲೇ ಗಣೇಶನ ಸ್ತುತಿ ಹೆಚ್ಚು. ‘ವಿನಾಯಕ ಚೌತಿ’, ‘ನಾಯಕುಡು ವಿನಾಯಕುಡು’ ಜನಪ್ರಿಯ ತೆಲುಗು ಗಣೇಶ ಸಿನಿಮಾಗಳು. ತಮಿಳಿನ ಮುರುಗನ್ ಕಥೆಗಳಲ್ಲಿ ಪುಳ್ಳಯಾರ್ (ಗಣೇಶ) ಬಂದು ಹೋಗುತ್ತಾನೆ.
ಇನ್ನು ಸಾಮಾಜಿಕ ಚಿತ್ರಗಳಲ್ಲೂ ಏಕದಂತನ ಆರಾಧನೆ ಕಡಿಮೆ. ಇತರೆ ದೇವತೆಯರಂತೆ (ನಾಗದೇವತೆ) ಗಣೇಶನ ಪವಾಡದ ಕಥೆಗಳಿಲ್ಲ. ಅಪರೂಪ ಎನ್ನುವಂತೆ ಕನ್ನಡದಲ್ಲಿ ‘ಗಣೇಶನ ಮಹಿಮೆ’ ಚಿತ್ರ ತಯಾರಾಗಿತ್ತು. ಉಳಿದಂತೆ ಕೆಲವು ಚಿತ್ರಗಳಲ್ಲಿ ಪೂಜೆ, ಉತ್ಸವದ ಸೀನ್‌ಗಳು ಕಾಣಿಸುತ್ತವೆ. ಡಾ.ರಾಜ್‌ರ ‘ದಾರಿ ತಪ್ಪಿದ ಮಗ’ ಚಿತ್ರದಿಂದ ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ ‘ವಿನಾಯಕರ ಗೆಳೆಯರ ಬಳಗ’ದವರೆಗೆ ಸಾಕಷ್ಟು ಉದಾಹರಣೆಗಳಿವೆ. ತಮಿಳು, ತೆಲುಗು ಚಿತ್ರಗಳಲ್ಲೂ ಗಣಪನ ಹಾಡು – ಸನ್ನಿವೇಶಗಳಿಗೆ ಕೊರತೆಯಿಲ್ಲ.
ಫಣಿರಾಮಚಂದ್ರ ನಿರ್ದೇಶನದ ‘ಗಣೇಶ’ ಸರಣಿ ಚಿತ್ರಗಳಿಗೂ, ವಿಘ್ನೇಶ್ವರನಿಗೂ ಯಾವುದೇ ಸಂಬಂಧವಿಲ್ಲ. ತೆಲುಗಿನ ‘ವಿನಾಯಕರಾವ್ ಪೆಳ್ಳಿ’ ಕಾದಂಬರಿ ಇಲ್ಲಿ ‘ಗಣೇಶನ ಮದುವೆ’ಯಾಗಿ ತೆರೆಗೆ ಬಂದಿತಷ್ಟೆ. ‘ಗಣಪನದ್ದು ವಿಶಿಷ್ಟ ರೂಪ. ಆನೆ ಮೊಗದ ಆತನನ್ನು ತೋರಿಸಲು ಹಿಂದೆ ಗ್ರಾಫಿಕ್ಸ್ ತಂತ್ರಜ್ಞಾನ ಇರಲಿಲ್ಲ. ಬಹುಶಃ ಹೀಗಾಗಿ ಪೂರ್ಣಪ್ರಮಾಣದ ಗಣೇಶನ ಪೌರಾಣಿಕ ಚಿತ್ರಗಳು ಬಂದಿರಲಿಕ್ಕಿಲ್ಲ. ಮತ್ತೊಂದೆಡೆ ನಿರ್ಮಾಪಕರಿಗೂ ಭಯವಿತ್ತು. ಪಾತ್ರವನ್ನು ಸರಿಯಾಗಿ ಚಿತ್ರಿಸದಿದ್ದರೆ ಅಪಾಯ ಎಂದು ಹಿಂಜರಿಯುತ್ತಿದ್ದರು’ ಎನ್ನುತ್ತಾರೆ ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್.
ಸಿನಿಮಾಗಳಲ್ಲಿ ಗಣೇಶನ ಕುರಿತ ಹಾಡುಗಳು ಹೆಚ್ಚೇನಿಲ್ಲ. ಆದರೆ ಈ ದೇವರ ಭಕ್ತಿಗೀತೆಗಳ ಸಂಖ್ಯೆ ಸಾವಿರದಲ್ಲಿದೆ. ಒಂದು ಅಂದಾಜಿನಂತೆ ಗಣೇಶನ ಕನ್ನಡ ಭಕ್ತಿಗೀತೆಗಳ 500ಕ್ಕೂ ಹೆಚ್ಚು ಕೆಸೆಟ್‌ಗಳಿವೆಯಂತೆ. ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜಕುಮಾರ್, ಎಸ್.ಜಾನಕಿ ಮತ್ತಿತರ ಪ್ರಮುಖ ಗಾಯಕರು ಗಣೇಶನ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಕೆಲವರ್ಷಗಳ ಹಿಂದೆ ಗಣೇಶೋತ್ಸವಗಳಲ್ಲಿ ಕಡ್ಡಾಯವಾಗಿ ಭಕ್ತಿಗೀತೆಗಳು ಕೇಳಿಸುತ್ತಿದ್ದವು. ಈಗ ಈ ಪಟ್ಟಿಯಲ್ಲಿ ಸಿನಿಮಾ ಹಾಡುಗಳೂ ಸೇರಿಕೊಂಡಿವೆ.