ಬೆಂಗಳೂರು : ಮಗಳು ಯಾರನ್ನಾದರು ಪ್ರೀತಿಸುತ್ತಿದ್ದರೆ ಅದನ್ನೇ ಯಾವ ತಂದೆ-ತಾಯಿಯೂ ಸಹಿಸಲ್ಲ. ಪ್ರೀತಿಸಿದವರು ಮದುವೆಗೆ ಮುನ್ನ ಆರಂಭದಲ್ಲಿ ತಮ್ಮ ಪೋಷಕರ ಜೊತೆ ಫೈಟ್ ಮಾಡಲೇ ಬೇಕು. ಕೊನೆಗೆ ಪೋಷಕರ ಮನವೊಲಿಸಿ ಮದುವೆ ಆಗಬೇಕು. ಇಲ್ಲ ಪ್ರೀತಿ ತ್ಯಾಗ ಮಾಡಬೇಕು ಅಥವಾ ಪೋಷಕರನ್ನು ಬಿಟ್ಟು ಜೀವನ ನಡೆಸಬೇಕು. ಇನ್ನು ಮಗಳು ಯಾರೋ ಜೊತೆಗೆ ಇಡೀ ರಾತ್ರಿ ಲಾಡ್ಜಿನಲ್ಲಿ ಕಳೆದಿದ್ದಾಳೆ ಎಂದರೆ ಯಾವ ಪೋಷಕರು ಸುಮ್ಮನಿರ್ತಾರೆ ಹೇಳಿ? ಆದರೆ, ಇಲ್ಲೊಂದು ದಂಪತಿ ಮಗಳ ಜೊತೆ ರಾತ್ರಿ ಕಳೆದ ಯುವಕನ ಪೋಷಕರಿಗೆ ಕರೆಮಾಡಿ ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡಿಟ್ಟು, ಸಿಕ್ಕಿಬಿದ್ದಿದ್ದಾರೆ.
ಈ ಘಟನೆ ನಡೆದಿರೋದು ದೂರದಲ್ಲೆಲ್ಲೋ ಅಲ್ಲ. ನಮ್ಮ ಬೆಂಗಳೂರಲ್ಲೇ. ಯುವಕನ ಜೊತೆ ಮಗಳು ಲಾಡ್ಜಲ್ಲಿದ್ದರೂ ತಲೆಕೆಡಿಸಿಕೊಳ್ಳದೆ, ಯುವಕನ ಪೋಷಕರಿಗೆ ಕರೆ ಮಾಡಿ 1ಕೋಟಿ ರೂಗೆ ಬೇಡಿಕೆಯಿಟ್ಟ ದಂಪತಿಯನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಲೀನಾ ಕವಿತಾ, ಪ್ರಮೋದ್ ಬಂಧಿತರು. ಈ ಮಹಾ ದಂಪತಿ ಪುತ್ರಿ ಪುತ್ರಿ ಡೇಟಿಂಗ್ ಆ್ಯಪಲ್ಲಿ ಪರಿಚಿತನಾಗಿದ್ದ ನಿಖಿಲ್ ಜೊತೆ ಸ್ನೇಹ ಬೆಳೆಸಿ, ಪ್ರೀತಿ ಮಾಡಿ, ಮೊಬೈಲ್ ನಂಬರ್ ಮೊದಲಿಸಿಕೊಂಡು ಆ ಬಳಿಕ ಲಾಡ್ಜಲ್ಲಿ ಒಂದು ಇಡೀ ರಾತ್ರಿ ತಂಗಿದ್ದಾಳೆ! ಅದನ್ನು ತಿಳಿದು ಆಕೆಗೆ ಬುದ್ಧಿ ಹೇಳುವ ಬದಲು, ಪ್ರಶ್ನೆ ಮಾಡುವ ಬದಲು. ಇಲ್ಲ ಹುಡುಗನ ಮನೆಯವರಿಗೆ ವಿಷಯ ಮುಟ್ಟಿಸಿ, ಮದುವೆ ಮಾತುಕತೆ ಆಡುವ ಬದಲು, ಆ ಹುಡುಗನ ಪೋಷಕರಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಬರೋಬ್ಬರಿ 1 ಕೋಟಿಗೆ ಡಿಮ್ಯಾಂಡಿಟ್ಟಿದ್ದಾರೆ.
ನಿಮ್ಮ ಮಗ, ನಮ್ಮ ಮಗಳ ಖಾಸಗಿ ಫೋಟೊಗಳಿದ್ದು, ದುಡ್ಡು ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆಂದು ಬೆದರಿಸಿದ್ದಾರೆ. ಮರ್ಯಾದೆಗೆ ಅಂಜಿ ನಿಖಿಲ್ ಪೋಷಕರು 3 ಚೆಕ್ಗಳಲ್ಲಿ 22 ಲಕ್ಷ ರೂ ನೀಡಿದ್ದಾರೆ. ಅದಾದಮೇಲೆ ಕೆಲವು ದಿನಗಳ ನಂತರ ಪುನಃ ಕರೆ ಮಾಡಿ ಮಗಳಿಗೆ ಅಬಾಷನ್ ಮಾಡಿಸಬೇಕು ಅದಕ್ಕೆ 20 ಲಕ್ಷ ಬೇಕು ಎಂದು ಕಿತ್ತಿದ್ದಾರೆ. ಅಷ್ಟಕ್ಕೆ ತೆಪ್ಪಗಿರದೆ ಪುನಃ ಕರೆಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ, ನಿಖಿಲ್ ಪೋಷಕರು ಏನಾಗುತ್ತಾ ಆಗಲಿ ಅಂತ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.