ಯೋಧರ, ನಿವೃತ್ತ ಸೈನಿಕರ, ಸೈನಿಕರ ಕುಂಟುಂಬಕ್ಕೆ ಉಚಿತ ಚಿಕಿತ್ಸೆ ನೀಡುವ ಮೂಲಕ ಪರೋಕ್ಷವಾಗಿ ದೇಶದ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಮಾನಸಿಕ ಅಸ್ವಸ್ಥರು ಮತ್ತು ವಯೋವೃದ್ಧರ ಜೊತೆಯಲ್ಲಿ ಕಾಲ ಕಳೆಯುತ್ತಾ ಅವರಿಗೆ ಚಿಕಿತ್ಸೆ ನೀಡುತ್ತಿರುವವರ ಹೆಸರು ಡಾ.ರಾಮಚಂದ್ರ ಕಾರಟಗಿ.
ಇವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೈನ್ಯಕ್ಕೆ ಸೇರಬೇಕು ಎಂದು ಕನಸು ಕಂಡವರು. ಆದರೆ ಕಾಲಿನ ಮೂಳೆ ಮುರಿದು ಬೈಪಾಸ್ ಸರ್ಜರಿ ಆದ ಕಾರಣ ಸೈನ್ಯ ಸೇರಲಾಗಲಿಲ್ಲ. ಕೊನೆಗೆ, ದಾವಣಗೆರೆಯ ವೈದ್ಯಕೀಯ ಕಾಲೇಜ್ನಲ್ಲಿ ಎಂಬಿಬಿಎಸ್ ಮುಗಿಸಿದ್ರು. ಡಾ.ರಾಮಚಂದ್ರ ಅವರೀಗ ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಕೆಲಸ ಮುಗಿದ ಬಳಿಕ ಹುಬ್ಬಳ್ಳಿಯ ಕೇಶವ ಕುಂಜದಲ್ಲಿರುವ ಸ್ವಂತ ಕ್ಲಿನಿಕ್ ಗೆ ತೆರಳುತ್ತಾರೆ. ಇಲ್ಲಿಗೆ ಬರುವ ಸೈನಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಕೆಲವು ಸೈನಿಕರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಿ ಬರುತ್ತಾರೆ. ಸೈನಿಕರು ಎಂದರೆ ನಮ್ಮನ್ನು ಕಾಯುವ ದೇವರು ಎಂದು ತಿಳಿದಿದ್ದಾರೆ ಡಾ ರಾಮಚಂದ್ರ ಕಾರಟಗಿ.
ಡಾ.ರಾಮಚಂದ್ರ ಕಾರಟಗಿ ಯೋಧರು, ಮತ್ತೆ ಅವರ ಅವಲಂಬಿತರು ಅಷ್ಟೇ ಅಲ್ಲ. ಪ್ರತಿ ಭಾನುವಾರ ಯಾವುದಾದರೂ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆಲ್ಲ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಬಹುತೇಕ ಮಾನಸಿಕ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ತಿಂಗಳಲ್ಲಿ ಎರಡು ವಾರ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳು, ಒಂದು ವಾರ ಕೂಲಿ ಕಾರ್ಮಿಕರು, ಬಡವರಿಗೆ ಮೀಸಲಿಟ್ಟಿದ್ದಾರೆ.
ಸೈನಿಕರು ದೇಶದ ಗಡಿ ಕಾಯುತ್ತಿದ್ದರೆ ಡಾ.ರಾಮಚಂದ್ರ ಕಾರಟಗಿ, ಸುತ್ತಮುತ್ತಲಿನ ಸೈನಿಕರ ಕುಂಟುಂಬವನ್ನು ಕಾಯುತ್ತಾ ದೇಶಸೇವೆ ಮಾಡುವವವರ ಸೇವೆ ಮಾಡುತ್ತಿದ್ದಾರೆ. ಇವರ ಈ ಸೇವೆಗಳಿಗೆಲ್ಲ ತಾಯಿಯೇ ಕಾರಣವಂತೆ. ಎಂಬಿಬಿಎಸ್ ಮುಗಿಸಿದ ಬಳಿಕ ತಾಯಿ ‘ಹಳ್ಳಿಗಳಲ್ಲಿ ಸೇವೆ ಸಲ್ಲಿಸು. ನಿನ್ನ ಸೇವೆ ಬಡವರು, ಕಾರ್ಮಿಕರಿಗೆ ಮೀಸಲಿಡು ಎಂದು ಹೇಳಿದ್ದರಂತೆ. ತಾಯಿಯ ಇಚ್ಛೆಯಂತೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.