ಚಿಕ್ಕಮಗಳೂರು : 9 ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಗೆ ಮಕ್ಕಳೆಂದರೆ ಪ್ರಾಣ. ತನ್ನ ಜೀವವನ್ನೇ ಒತ್ತೆಯಾಗಿಟ್ಟು ತನ್ನ ಮಗುವನ್ನು ಜೋಪಾನ ಮಾಡುತ್ತಾಳೆ ಪ್ರತಿಯೊಬ್ಬ ತಾಯಿ. ಆದರೆ. ಇಲ್ಲೊಬ್ಬ ತಾಯಿ ತಾನು ಹೆತ್ತ ಮಗುವನ್ನೇ ನಾಲೆಗೆ ಎಸೆದಿದ್ದಾಳೆ. ಈ ಘಟನೆ ನಡೆದಿರೋದು ದೂರದೆಲ್ಲೆಲ್ಲೂ ಅಲ್ಲ ನಮ್ಮ ಮಲೆನಾಡ ಸುಂದರ ತಾಣ ಚಿಕ್ಕಮಗಳೂರು ಜಿಲ್ಲೆಯಲ್ಲಿ!
ಅಚ್ಚರಿ ಹಾಗೂ ಆಘಾತಕಾರಿ ಸುದ್ದಿ ಇದು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ತನ್ನ 3 ತಿಂಗಳ ಹಸುಗೂಸನ್ನು ನಾಲೆಗೆ ಎಸೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಳಿಯೂರು ಎಂಬಲ್ಲಿ ನಡೆದಿದೆ.
ಆ ತಾಯಿಯ ಹೆಸರು ಕಮಲಾ ಎಂದು. ಈಕೆಯ 3 ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ತರಿಕೆರೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಗು ಮಂಗಳವಾರ ಆಸ್ಪತ್ರೆಯಲ್ಲಿ ಜೋರಾಗಿ ಅಳುತ್ತಿದ್ದಾಗ ಸಮಾಧಾನ ಮಾಡುತ್ತೇನೆಂದು ಹೊರಗೆ ಕರೆದುಕೊಂಡು ಹೋದ ಕಮಲಾ ತುಂಬಾ ಹೊತ್ತಾದರೂ ಬರದೇ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಎಷ್ಟೋ ಹೊತ್ತಾದ ನಂತರ ಕಮಲಾ ಬರಿಗೈಲಿ ಬಂದಿದ್ದು, ಮಗು ಎಲ್ಲಿ ಎಂದು ಕೇಳಿದಾಗ ಮಗುವನ್ನು ಹಳಿಯಾರು ಬಳಿ ನಾಲೆಗೆ ಎಸೆದು ಬಂದೆ ಎಂದು ಹೇಳಿದ್ದಾರೆ. ಕೂಡಲೇ ಮನೆಯರು ನಾಲೆ ಬಳಿ ಹೋಗಿ ಅಲ್ಲಿನ ಸ್ಥಳೀಯ ಜನರನ್ನು ಕೇಳಿದಾಗ ಅದು ತೇಲಿ ಹೋಯಿತು ಎಂದಿದ್ದಾರೆ. ನಂತರ 5 ಕಿ ಮೀ ದೂರದ ಬೆಟ್ಟತಾವರೆಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆತ್ತ ತಾಯಿಯೇ ಹಸುಗೂಸನ್ನು ನಾಲೆಗೆ ಎಸೆದ ಹೃದಯವಿದ್ರಾವಕ ಕಥೆಯಿದು!
Date: