No menu items!
9.6 C
Munich
Tuesday, April 21, 2026

ತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್.ಡಿ. ಕುಮಾರಸ್ವಾಮಿ

Must read

ತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ರಾಜ್ಯದಲ್ಲಿ ತಂಬಾಕು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಿದೆ ಎಂದು ಹೇಳಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು; ಈಗಾಗಲೇ ಕೊಟ್ಟ ಮಾತಿನಂತೆ ರೈತರಿನಿಂದ ತಂಬಾಕು ಖರೀದಿ ಮಾಡಬೇಕು ಎಂದು ವರ್ತಕರಿಗೆ ತಾಕೀತು ಮಾಡಿದರು.
ಮೈಸೂರಿನಲ್ಲಿ ಸೋಮವಾರ ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಎಫ್ ಸಿವಿ (FCV) ತಂಬಾಕು ಹರಾಜಿಗೆ ಸಂಬಂಧಿಸಿದಂತೆ ಇರುವ ಬಿಕ್ಕಟ್ಟಿನ ಬಗ್ಗೆ ತಂಬಾಕು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳು, ಬೆಳೆಗಾರರು, ಖರೀದಿದಾರರು ಹಾಗೂ ತಂಬಾಕು ಮಂಡಳಿ ಉನ್ನತ ಅಧಿಕಾರಿಗಳ ಜತೆ ಸಚಿವರು ಮಹತ್ವದ ಸಭೆ ನಡೆಸಿದರು.
ರೈತರನ್ನು ಕಾಪಾಡಿಕೊಳ್ಳಬೇಕಿದೆ. ಅವರಿಗೆ ನೀವು ಮಾತು ಕೊಟ್ಟಂತೆಯೇ ನಡೆದುಕೊಳ್ಳಿ. ನೆರೆ ರಾಜ್ಯ ಆಂಧ್ರ ಪ್ರದೇಶದಂತೆಯೇ ಇಲ್ಲಿಯೂ ಉತ್ತಮ ದರವನ್ನು ಕೊಟ್ಟು ತಂಬಾಕು ಖರೀದಿ ಮಾಡಿ. ಸುಂಕ ಸೇರಿದಂತೆ ನಿಮಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೂ ಮೊದಲು ನಿಗದಿಯಂತೆ ತಂಬಾಕು ಖರೀದಿ ಮಾಡಿ ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಸರ್ಕಾರ ಸಿಗರೇಟಿನ ಸುಂಕ ಹಾಕಿದೆ ಎಂದು ಹೇಳುತ್ತೀರಿ. ಆದರೆ, ನೀವು ಸುಂಕ ಏರಿಕೆಯ ಭಾರವನ್ನು ಸಿಗರೇಟ್ ಸೇದುವ ಗ್ರಾಹಕನ ಮೇಲೆ ವಿಧಿಸುತ್ತೀರಿ. ಆದರೆ, ಇದಕ್ಕೆ ಸಂಬಂಧವೇ ಇಲ್ಲದ ಬೆಳೆಗಾರನ ಮೇಲೆ ಬರೆ ಏಕೆ ಎಳೆಯುತ್ತೀರಿ ಎಂದು ಕೇಂದ್ರ ಸಚಿವರು ವರ್ತಕರನ್ನು ಕಟುವಾಗಿ ಪ್ರಶ್ನಿಸಿದರು.
ನಿಮ್ಮ ಸಮಸ್ಯೆಗಳನ್ನು ಕೇಳಲು ನಾವು ಸಿದ್ಧರಿದ್ದೇವೆ. ನಾನು, ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ್ ಅವರು ಸತತವಾಗಿ ಸಂಬಂಧಪಟ್ಟ ಎಲ್ಲರ ಜತೆ ಮಾತುಕತೆ ನಡೆಸಿದ್ದೇವೆ. ಸುಂಕ ಏರಿಕೆ ಬಗ್ಗೆ ನಾವು ಕೇಂದ್ರದ ವಿತ್ತ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಆದರೆ, ರೈತರಿಗೆ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಸಚಿವ ಕುಮಾರಸ್ವಾಮಿ ಅವರು ವರ್ತಕರಿಗೆ ಹೇಳಿದರು.
ಹರಾಜು ಪ್ರಕ್ರಿಯೆಯಲ್ಲಿ ಯಾವ ಯಾವ ಖರೀದಿದಾರರು ಭಾಗಿಯಾಗುತ್ತಿದ್ದಾರೆ ಎಂದು ತಂಬಾಕು ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು; ವಿದೇಶೀ ಕಂಪನಿಗಳು ಹರಾಜಿನಲ್ಲಿ ಭಾಗಿಯಾಗಲು ಏನಾದರೂ ನಿರ್ಬಂಧಗಳು ಇವೆಯೇ ಎಂದು ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಗಳು, ಯಾವುದೇ ನಿರ್ಬಂಧ ಇಲ್ಲ ಎಂಬ ಅಂಶವನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು.

- Advertisement -spot_img

More articles

- Advertisement -spot_img

Latest article