ಅವರಿಬ್ಬರ ಮದುವೆ ನಿಶ್ಚಯವಾಗಿತ್ತು. ಬೆಳಗ್ಗಾದರೆ ಇಬ್ಬರೂ ಹೊಸ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದರು. ಆದರೆ, ಹಿಂದಿನ ದಿನ ಬಂದ ಅದೊಂದು ಫೋನ್ ಕಾಲ್ ಮದುವೆಯನ್ನು ಮುರಿದು ಬಿಟ್ಟಿತು..! ಅಷ್ಟರಲ್ಲೇ ಪಕ್ಕದ ಊರಿನ ಹುಡುಗ ತಾನು ಮದುವೆಯಾಗುತ್ತೇನೆಂದು ಮುಂದೆ ಬಂದು ವಧುವನ್ನು ವರಿಸಿದ. ಇದು ಯಾವುದೋ ಸಿನಿಮಾ ಸ್ಟೋರಿಯಲ್ಲ ನಮ್ಮ ರಾಮನಗರದಲ್ಲಿ ನಡೆದ ಸ್ಟೋರಿ!
ಹೌದು ಮದುವೆ ಮುರಿದು ಬಿದ್ದು, ನಿಶ್ಚಿತ ಮುಹೂರ್ತದಲ್ಲೇ ವಧುವಿಗೆ ಪಕ್ಕದ ಊರಿನ ಹುಡುಗ ತಾಳಿ ಕಟ್ಟಿದ ಘಟನೆ ರಾಮನಗರದ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ.
ತಿಟ್ಟಮಾರನಹಳ್ಳಿ ಭಾಗ್ಯಶ್ರೀಗೆ ಆರು ತಿಂಗಳ ಹಿಂದೆ ಬಸವರಾಜು ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ಶುಕ್ರವಾರ ಬೆಳಗ್ಗೆ ಇಬ್ಬರ ಮದುವೆ ನಡೆಯಬೇಕಾಗಿತ್ತು… ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರು. ಆದರೆ, ಗುರುವಾರ ರಾತ್ರಿ ಅನಾಮಿಕನೊಬ್ಬ ಕರೆ ಮಾಡಿ ಬಸವರಾಜುಗೆ ಈಗಾಗಲೇ ಮದುವೆಯಾಗಿದೆ. ಆತನಿಗೆ ಮಕ್ಕಳೂ ಇದ್ದಾರೆ ಎಂದಿದ್ದಾನೆ..! ಇದೊಂದು ಕರೆ ಮದುವೆಯನ್ನೇ ಮುರಿಯಿತು. ಇದು ಸುಳ್ಳು ಸುದ್ದಿ ಎಂದರೂ ವಧು ಭಾಗ್ಯಶ್ರೀ ಕಡೆಯವರು ಒಪ್ಪಲೇ ಇಲ್ಲ. ಬಸವರಾಜುಗೆ ಕೊಟ್ಟು ಮದುವೆ ಮಾಡಲ್ಲ ಎಂದು ಹಠ ಹಿಡಿದರು. ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ.
ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಮನೆಯಲ್ಲಿ ಸಂದಾನ ಸಾಧ್ಯವಾಗಲಿಲ್ಲ. ಅಂತಿಮವಾಗಿ ಮದುವೆ ಬ್ರೇಕ್ ಆಯಿತು. ಆದರೆ, ಪಕ್ಕದ ಊರಿನ ಆನಂದ್ ಎಂಬ ಹುಡುಗ ಅದೇ ಮಹೂರ್ತದಲ್ಲಿ ಭಾಗ್ಯಶ್ರೀಯನ್ನು ಮದುವೆಯಾಗಿದ್ದಾನೆ. ಕರೆ ಮಾಡಿ ಮದುವೆ ತಪ್ಪಿಸಿದ ವ್ಯಕ್ತಿಗೆ ಪೊಲೀಸರು ಬಲೆ ಬೀಸಿದ್ದಾರೆ.