ಬೆಂಗಳೂರು : ಕೆಪಿಎಲ್ ಫಿಕ್ಸಿಂಗ್ ಹಗರಣದ ಜಾಲ ಸಿನಿಮಾ ರಣಗಕ್ಕೂ ವಿಸ್ತರಿಸಿದೆ. ಬೆಳಗಾವಿ ತಂಡದ ಕೋಚ್ ಸುಧೀಂದ್ರ ಶಿಂಧೆ ಬಂಧನದ ಬಳಿಕ ಅನೇಕ ವಿಚಾರಗಳು ಬಯಲಾಗುತ್ತಿವೆ. 2020ರ ಟೂರ್ನಿಯನ್ನು ಕೆಎಸ್ ಸಿ ಎ ಕ್ಯಾನ್ಸಲ್ ಮಾಡಿದೆ. ಈ ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಹನಿಟ್ರ್ಯಾಪಲ್ಲಿ ಚಂದನವನದ ನಟಿಯರು ಭಾಗಿಯಾಗಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.
ಫಿಕ್ಸಿಂಗಲ್ಲಿ ಸ್ಯಾಂಡಲ್ವುಡ್ಡಿನ ಮೂವರು ನಟಿಯರು ಪಾತ್ರ ನಿಭಾಯಿಸಿದ್ದಾರೆ ಎಂಬ ಶಂಕೆಯನ್ನು ಪೊಲೀಸರೇ ವ್ಯಕ್ತಪಡಿಸಿದ್ದಾರೆ. ಇಬ್ಬರು ನಟಿಯರು ಒಂದು ಕಾಲದ ಸ್ಟಾರ್ ನಟಿಯರಾಗಿದ್ದು, ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೊಬ್ಬ ನಟಿ ಎರಡು – ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದರಲ್ಲಿ ಹೆಸರುವಾಸಿ ಎಂದು ಹೇಳಲಾಗುತ್ತಿದೆ.
ಮ್ಯಾಚ್ ಬಳಿಕ ನಡೆದ ಆಫ್ಟರ್ ಮ್ಯಾಚ್ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿಯರ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ ನಟಿಯರ ಐಷಾರಾಮಿ ಜೀವನ ಫಿಕ್ಸಿಂಗ್ ಆರೋಪಕ್ಕೂ ತಳುಕುಹಾಕಿಕೊಳ್ಳುವಂತಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮೂವರಲ್ಲಿ ಒಬ್ಬರು ಪರ ರಾಜ್ಯದ ನಟಿ, ಎರಡನೇಯಾಕೆ ಕರ್ನಾಟಕದ ಮೂಲದವರು, ಮೂರನೆಯ ಮದನಾರಿ ಬಹು ಭಾಷಾ ನಟಿಯಾಗಿದ್ದು, ಶೀಘ್ರವೇ ಈ ಮೂವರ ವಿಚಾರಣೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.