ಟೀಮ್ ಇಂಡಿಯಾ ಮಾತ್ರವಲ್ಲ ಇಡೀ ವಿಶ್ವಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾಕ್ಕೆ ಬ್ಯಾಟ್ಸ್ಮನ್ ಆಗಿ ಕೂಡಿಕೊಂಡಿದ್ದ ದ್ರಾವಿಡ್ ಮುಂದಿನ ದಿನಗಳಲ್ಲಿ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಧಾರವಾದರು. ವಿಕೆಟ್ ಕೀಪಿಂಗ್ ಅವಶ್ಯಕತೆ ಇದ್ದಾಗ ದ್ರಾವಿಡ್ ಹೆಸರು ಕೇಳಿಬಂತು.. ಆಗ ಮುಕ್ತವಾಗಿ ಆ ಹೆಚ್ಚುವರಿ ಜವಬ್ದಾರಿಯನ್ನೂ ಹೊತ್ತರು. ಈಗ ಅದೇ ಹಾದಿಯಲ್ಲಿ ಮತ್ತೊಬ್ಬ ಕನ್ನಡಿಗ ಕೆ.ಎಲ್ ರಾಹುಲ್ ಹೆಜ್ಜೆ ಇಟ್ಟಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ, ಅದರಲ್ಲೂ ಟಿ20ಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರಾಹುಲ್ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಹೊಣೆಯನ್ನು ಹೊರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ನಂತರ ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್ ಎಂದೇ ಕರೆಯಲ್ಪಟ್ಟ ರಿಷಭ್ ಪಂತ್ ಮತ್ತೆ ಮತ್ತೆ ನಿರೀಕ್ಷೆಯನ್ನು ಹುಸಿಯಾಗಿಸುತ್ತಿದ್ದಾರೆ. ಏಕದಿನ ವಿಶ್ವಕಪ್ ಸೇರಿದಂತೆ ಇಲ್ಲಿಯವರೆಗೂ ರಿಷಭ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದಾರೆ. ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟ ಆಡಿದ್ದಾರಷ್ಟೇ. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಅವರ ಬದಲಿಗೆ ಸಂಜು ಸ್ಯಾಮ್ಸನ್ಗೆ ಅವಕಾಶ ಕೊಡಬಹುದಾದರೂ ಅವರು ಪರಿಗಣನೆ ಆಗುತ್ತಿಲ್ಲ. ಸದ್ಯ ರಾಹುಲ್ ಗೆ ಕೀಪಿಂಗ್ ಗ್ಲೌಸ್ ಕೊಡೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಮುಂದಿನ ಟಿ20 ವಿಶ್ವಕಪ್ ಹೊತ್ತಿಗೆ ರಾಹುಲ್ ಅವರನ್ನೇ ವಿಕೆಟ್ ಕೀಪರ್ ಆಗಿ ಖಾಯಂಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಹುಲ್, ದೇಶಿಯ ಟೂರ್ನಿಗಳಲ್ಲಿ, ಐಪಿಎಲ್ನಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್ ಅವರಂತೆ ತಂಡಕ್ಕೆ ಕೀಪರ್ ಆಗಿಯೂ ಬ್ಯಾಟ್ಸ್ಮನ್ ಆಗಿಯೂ ರಾಹುಲ್ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.