ಆತ ಕಾಲೇಜು ವಿದ್ಯಾರ್ಥಿ. ಅದ್ಯಾಕೋ ಓದುವ ಮನಸ್ಸಿಲ್ಲದೆ ಮನೆ ಬಿಟ್ಟು ಪರಾರಿಯಾಗುವ ಯತ್ನದಲ್ಲಿದೆ. ಒಂದು ವೇಳೆ ಆ ಇಬ್ಬರು ಪೊಲೀಸರಿಗೆ ಆತ ಸಿಗದೇ ಇದ್ದಿದ್ದರೆ ಮಗನ ಹುಡುಕಾಟದಲ್ಲಿ ಅಪ್ಪ – ಅಮ್ಮ ಇರ್ತಿದ್ರು! ಅಮ್ಮನಿಗೂ ಮಗ ಮನೆ ಬಿಟ್ಟಿದ್ದು ಗೊತ್ತಾಗಿದ್ದು ಪೊಲೀಸರು ಮನೆಗೆ ಕರೆತಂದು ಬಿಟ್ಟಾಗ.
ಹೌದು ಮನೆ ಬಿಟ್ಟು ಹೋಗಿದ್ದ ಕಾಲೇಜು ವಿದ್ಯಾರ್ಥಿಯನ್ನು ಬಜ್ಪೆ ಪೊಲೀಸರು ಮನವೊಲಿಸಿ, ಠಾಣೆಗೆ ಕರೆತಂದು ಮನೆಗೆ ತಲುಪಿಸಿದ್ದಾರೆ. ಸೋಮವಾರ ತಡರಾತ್ರಿ 2.45ರ ಸುಮಾರಿಗೆ ಗುರುಪುರ ಕೈಕಂಬ ವಿಕಾಸನಗರದ ರಸ್ತೆಯಲ್ಲಿ ಅಲೆದಾಡುತ್ತಿದ್ದ ವಿದ್ಯಾರ್ಥಿ ರಾತ್ರಿ ಬೀಟಿನಲ್ಲಿದ್ದ ಬಜ್ಪೆ ಠಾಣೆಯ ಅನಿತಾ ನಿಕ್ಕಂ ಮತ್ತು ದೇವಪ್ಪ ಹೊಸಮನಿ ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಕರೆದು ವಿಚಾರಿಸಿದಾಗ ಉತ್ತರಿಸಲು ನಿರಾಕರಿಸಿದ್ದಾನೆ. ವಿಳಾಸ ಕೇಳಿದಾಗ ನೀಡಲಿಲ್ಲ. ಸಂಶಯಗೊoಡ ಐಡಿ ಕಾರ್ಡ್, ಮನೆ ಬಗ್ಗೆ ವಿಚಾರಿಸಿದಾಗ `ಮನೆಯವರ ಒತ್ತಾಯಕ್ಕೆ ಕಾಲೇಜು ಸೇರಿದೆ. ಜೀವನ ಸಾಕಾಗಿದೆ. ಓದಲು ಇಷ್ಟವಿಲ್ಲ, ಅದಕ್ಕೆ ಮನೆ ಬಿಟ್ಟು ಬಂದೆ’ ಎಂದು ಉತ್ತರಿಸಿದ್ದಾನೆ.
ವಿದ್ಯಾರ್ಥಿಯಿಂದ ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದುಕೊಂಡು ಫೋನ್ ಮಾಡಿದಾಗ ಆತನ ತಾಯಿ ಆತ ಮನೆಯಲ್ಲೇ ಇದ್ದಾನೆ ಎಂದು ಉತ್ತರಿಸಿದ್ದಾರೆ. ಬಳಿಕ ಪೊಲೀಸರು ಹೇಳಿದ ಬಳಿಕವಷ್ಟೇ ಆಕೆಗೂ ವಿಚಾರ ಗೊತ್ತಾಗಿದೆ!
ವಿದ್ಯಾರ್ಥಿಯ ತಂದೆ ಬೆಂಗಳೂರಿನಲ್ಲಿದ್ದು, ತಾಯಿ ಮಾತ್ರ ತೋಡಾರು ಸಮೀಪದ ಹಂಡೇಲುವಿನ ಬಾಡಿಗೆ ಮನೆಯಲ್ಲಿ ಇಬ್ಬರು ಪುತ್ರರೊಂದಿಗೆ ವಾಸವಿದ್ದಾರೆ. ಮೂಲತಃ ಶಿವಮೊಗ್ಗದವರಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿ ನೆಲೆಸಿದ್ದಾರೆ.
ಆತ ಮನೆ ಬಿಟ್ಟು ಹೋಗಿದ್ದ…ಅಮ್ಮನಿಗೂ ಗೊತ್ತಿರಲಿಲ್ಲ.. ಪೊಲೀಸರು ಬಚಾವ್ ಮಾಡಿದ್ರು!
Date: