ರಂಜು..ರಂಜು.. ರಂಜೂ.. ಎಲ್ಲಿ ಹಡುಕಿದರೂ, ಎಷ್ಟೇ ಕೂಗಿದರೂ ರಜನಿ ಕಾಣ್ತಾ ಇಲ್ಲ..! ಹೇ.. ಸಂಜು ರಂಜುನಾ ನೋಡಿದ್ಯಾ? ಇಲ್ಲ, ಸಂಜನಾ ಕೂಡ ರಜನಿನಾ ನೋಡಿಲ್ಲ…! ಬೆಳಗ್ಗೆ ಯಿಂದಲೇ ಅವಳನ್ನು ಹುಡುಕ್ತಾ ಇದೀನಿ ಮಮ್ಮೀ..ಫೋನ್ ಕೂಡ ಸ್ವಿಚ್‍ಆಫ್ ಮಾಡಿದ್ದಾಳೆ..! ಮೊನ್ನೆ ಆಫೀಸ್‍ಗೆ ನನ್ ಚೂಡಿದಾರ್ ಹಾಕ್ಕೊಂಡು ಹೋಗಿದ್ಲು, ಎಲ್ಲಿ ಇಟ್ಟಿದ್ದಾಳೋ ಏನೋ? ಕೇಳೋಣ ಅಂದ್ರೆ ಅವಳಿಲ್ಲ..! ಇವಳದ್ದೂ ಬರೀ ಇದೇ ಆಯ್ತು ಕಣಮ್ಮಾ.. ನನ್ ಡ್ರಸ್ ಹಾಕ್ಕೊಂಡು ಹೋಗ್ತಾಳೆ..ವಾಪಸ್ಸು ಕೇಳೋ ತನಕ ಕೊಡಲ್ಲ..! ನಾಳೆ ನಾನು ಕಾಲೇಜಿಗೆ ಅದೇ ಡ್ರಸ್ ಹಾಕ್ಕೊಂಡು ಹೋಗ್ಬೇಕಂತ ಇದ್ದೆ ಎಂದು ಒಂದೇ ಉಸಿರಲ್ಲಿ ವಟಗುಟ್ಟೋಕೆ ಶುರುವಿಟ್ಲು ಸಂಜನಾ..!
ಅಯ್ಯೋ,ನೀನ್ ವಟಗುಟ್ಟೋದು ಸ್ವಲ್ಪ ಬಿಡ್ತೀಯಾ? ಚೂಡಿದಾರ್ ಹೋದ್ರೆ ಹೊಸದು ತರಬಹದು, ರಜನಿ ಎಲ್ಲಿ ಹೋದ್ಲು? ಅಪ್ಪ, ಗೆಸ್ಟ್ ಹೌಸ್, ಫ್ಯಾಕ್ಟರಿ ಎಲ್ಲಾ ಕಡೆ ಹೋಗಿ ಬಂದ್ರು ಅವಳಿಲ್ಲ..! ಅವಳ ಫ್ರೆಂಡ್ ಮಾಯಾಗೆ ಫೋನ್ ಮಾಡಿ ಅವಳ ಮನೆಗೆ ಬಂದಿದ್ದಾಳ ಅಂತನೂ ವಿಚಾರಿಸಿ ಆಯ್ತು..! ಅಲ್ಲಿಗೂ ಹೋಗಿಲ್ಲ..! ಎಲ್ಲಿ ಹೋದ್ಲು, ಹೇಳ್ದೇ ಕೇಳ್ದೆ ಅಳ್ತಾ ಅಳ್ತಾ ಮಾತಾಡ್ತಾ ನೋವು ತಡೆಯೋಕಾಗದೆ ಕುಸಿದು ಬಿದ್ರು ಸಂಜನಾ, ರಜನಿ ಅಮ್ಮ..!
ಕಾಲೇಜು, ಮನೆ, ಫ್ಯಾಕ್ಟರಿ, ಫ್ರೆಂಡ್ಸ್ ಮನೆ, ದೇವಸ್ಥಾನ ಎಲ್ಲಿ ನೋಡಿದ್ರೂ ರಜನಿಯ ಸುಳಿವೇ ಇಲ್ಲ..! ಅವಳ ಅಪ್ಪ, ಅಮ್ಮ ಹುಡುಕಿ ಹುಡುಕಿ ಸುಸ್ತಾದ್ರು..! ತಂಗಿ, ಸಂಜನಾಗೆ ರಜನಿ ಇಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ ಚೂಡಿದಾರದ್ದೇ ಚಿಂತೆ..!
ನಿನ್ನೆ ರಾತ್ರಿ ಜೊತೆಗೆ ಊಟ ಮಾಡಿದ್ವಿ? ಆರಾಮಾಗಿಯೇ ಇದ್ಲು, ಮಾಮೂಲಿಯಂತೆ..! ಊಟ ಮಾಡಿ, ನಮ್ ಜೊತೆನೇ ಕೂತು ಸ್ವಲ್ಪ ಹೊತ್ತು ಟಿವಿ ನೋಡಿ, ಅವಳ ರೂಮ್‍ಗೆ ಹೋಗಿ ಮಲಗಿದ್ಲು! ಬೆಳಗ್ಗೆ 11ಗಂಟೆಯಾದ್ರೂ ಎದ್ದು ಬರ್ಲಿಲ್ಲ. ಪಾಪ, ವಾರಪೂರ್ತಿ ಬೇಗ ಎದ್ದು ಆಫೀಸ್‍ಗೆ ಹೋಗ್ತಾಳಲ್ಲಾ? ಶನಿವಾರ, ಭಾನುವಾರ ಸ್ವಲ್ಪ ಹೆಚ್ಚು ಹೊತ್ತು ಮಲಗಿಕೊಳ್ಳಲಿ ಎಂದು ಎಬ್ವಿಸಲು ಹೋಗಲ್ಲ..! ಆದರೆ, ಯಾವತ್ತೂ ಇಷ್ಟೊತ್ತು ಮಲಗಲ್ವಲ್ಲಾ? ಹುಷಾರು ಇಲ್ವೇನೋ? ಅಂತ ಸುಮಾರು 11.30ಕ್ಕೆ ಮಹಡಿ ಮೇಲಿನ ಅವಳ ರೂಮ್‍ಗೆ ಹೋದ್ರೆ ಬಾಗಿಲು ತೆರೆದಿತ್ತು..! ಅವಳಿಲ್ಲ, ? ಎಷ್ಟೊತ್ತೊಗೆ ಆಚೆ ಹೋದ್ಲು ಗೊತ್ತಿಲ್ಲ..! ಹೀಗೆ ರಜನಿ ಅಮ್ಮ ಮಗಳು ಕಾಣದ ಕತೆಯನ್ನು ಹೇಳಿದ್ರು ದೂರು ದಾಖಲಿಸಿಕೊಳ್ಳುತ್ತಿದ್ದಪೊಲೀಸ್ ಬಳಿ..! ನಿಮ್ಮ 2ನೇ ಮಗಳ ಎಲ್ಲಿ? ಕೇಳಿದ್ರು ಎಸ್‍ಐ.
ಅವಳು ಮನೆಯಲ್ಲಿದ್ದಾಳೆ..!ಗಂಡ-ಹೆಂಡತಿ ಇಬ್ರೂ ಒಟ್ಟಿಗೇ ಹೇಳಿದ್ರು. ಅವಳು, ಏನ್ ಮಾಡ್ತಿದ್ದಾಳೆ? ಪೊಲೀಸ್ ಪ್ರಶ್ನೆ! ಓದ್ತಾ ಇದ್ದಾಳೆ. (ತಾಯಿ ಉತ್ತರ) ಸರಿ, ದೂರು ಕಟೊಟಿದ್ದೀರಿ, ಹುಡುಕೋ ಪ್ರಯತ್ನ ಮಾಡ್ತೀವಿ, ತಲೆಕೆಡಿಸಿಕಕೊಳ್ಳಬೇಡಿ ಹೋಗಿ ಎಂದು ಹೇಳಿ ಎಸ್‍ಐ ದೈರ್ಯ ತುಂಬಿ ಕಳುಹಿಸಿದ್ರು!
ರಾತ್ರಿ ಆಯ್ತು, ರಜನಿ ಬರಲೇ ಇಲ್ಲ..! ನೀರು ಕುಡಿದು ಮಲಗಿದ್ರು. ಮಧ್ಯಯರಾತ್ರಿ 1 ಗಂಟೆ ಆಗಿರಬಹುದೇನೋ? ಮನೆಯ ಬಾಗಿಲು ತಟ್ಟಿದ ಶಬ್ದ. ಸಂಜನಾ ಅಪ್ಪ, ಅಮ್ಮನನ್ನು ಎಬ್ಬಿಸಿದ್ಲು. ಯಾರೋ ಬಾಗಿಲು ತಟ್ಟಿದ ಹಾಗೆ ಕೇಳುತ್ತಿದೆ ನೋಡಿ..! ಬಾಗಿಲು ಬಡಿಯುವ ಶಬ್ಧ ನಿಂತಿತ್ತು. ಅಮ್ಮಾ, ಅಕ್ಕಾ ಜೊತೆಯಲ್ಲಿರುವಾಗ ಯಾವಾಗ್ಲೂ ಜಗಳ ಆಡ್ತಾನೇ ಇದ್ವಿ..! ಅವಳು ನಿಜಕ್ಕೂ ಎಲ್ಲೋ ಹೋಗಿದ್ದಾಳೆ ಅಂತ ಗೊತ್ತಿರ್ಲಿಲ್ಲ..! ಬೆಳಗ್ಗೆ ನೀವು ಅವಳನ್ನು ಹುಡುಕುವಾಗ ನಾನು ಚೂಡಿದಾರ್ ಯೋಚನೆ ಮಾತ್ರ ಮಾಡಿದೆ..! ಅವಳು, ಇಲ್ಲೇ ಎಲ್ಲೋ ಹೋಗಿದ್ದಾಳೆ ಎಂದು ಅಂದುಕೊಂಡಿದ್ದೆ, ಬರ್ತಾಳೆ, ನೀನು ಸುಮ್ಮನೇ ಯಾವಾಗ್ಲೂ ಗಾಬರಿ ಆಗುವವಳೆಂದು ನಾನು ಹಾಗೆ ಮಾಡ್ದೆ ಎಂದು ಎದೆಗೆ ಒರಗಿ ಅತ್ತಳು ಸಂಜನಾ!
ಮೂವರು ಮತ್ತೆ ಮಲಗಿದ್ರು, ಬಾಗಿಲು ಬಡಿಯುವ ಶಬ್ದ! ರಜನಿ ದನಿಯ ಪಿಸುಮಾತು..! ಒಂದೇ ಸಲ ಮೂವರಿಗೂ ಎಚ್ಚರವಾಯ್ತು..! ಬಾಗಿಲು ತೆರೆದರೆ ಯಾರೂ ಇಲ್ಲ..! ರಜನಿ ನೆನಪಲ್ಲಿ ಮಲಗಿದ್ರಿಂದ ಹಾಗೆ ಆಗುತ್ತಿತ್ತು..!
ಬೆಳಗಾಯ್ತು, ಸುಮಾರು 9ಗಂಟೆ ಹೊತ್ತಿಗೆ ಎಸ್‍ಐ ಸಂಜಯ್ ಮನೆಗೆ ಬಂದಿದ್ರು! ಅವರ ಬರುವಿಕೆ ನೋಡಿದ ಕೂಡಲೇ ಸಂಜನಾ ಮತ್ತು ಅವರ ಅಪ್ಪ ಅಮ್ಮ ಮೂವರು ಬಾಗಿಲಿಗೆ ಬಂದು ಎದುರುಗೊಂಡರು. ಏನ್ ಸಾರ್, ನೀವಿಲ್ಲಿ ನನ್ನ ಮಗಳು ಸಿಕ್ಕಳಾ? ತಂದೆ ಕೇಳಿದ್ರು.! ಅಪ್ಪಾ..ನೀವು, ಅಮ್ಮಾ ನಿನ್ನೆ ಸ್ಟೇಷನ್‍ಗೆ ಬಂದು ಹೋದ್ಮೇಲೆ ಬೇಜಾರಾಯ್ತು,ನಾನು ಅಲ್ಲಿ ಎಲ್ಲರ ಮುಂದೆ ಮಗನಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ..! ಪೊಲೀಸ್ ಆಗಿಯೇ ಮಾತಾಡಿ ಕಳುಹಿಸಿದೆ. ಒಳಗೆ ನಡೆಯಿರಿ ಕೂತು ಮಾತಾಡೋಣ ಎಂದ ಸಂಜಯ್! ಅವಶ್ಯಕತೆ, ಇಲ್ಲ, ನಾವು ಅಪ್ಪ-ಅಮ್ಮನಾಗಿ ನಿನ್ನ ನೋಡಲು ಬಂದಿಲ್ಲ..! ಮಗನಾಗಿ ಅಂತೂ ಅಪ್ಪ-ಅಮ್ಮನ ಆಸೆ ಈಡೇರಿಸಿಲ್ಲ, ಪೊಲೀಸ್ ಆಗಿಯಾದ್ರೂ ನಮ್ಮ ಮಗಳನ್ನು ಹುಡುಕೋ ಪ್ರಯತ್ನ ಮಾಡು ಎಂದರು ತಂದೆ! ನಮ್ಮ ಗ್ರಹಚಾರಕ್ಕೆ ನೀನೇ ಇಲ್ಲಿ ಪೊಲೀಸ್ ಎಂದು ತಲೆ ಚಚ್ಚಿಕೊಂಡ್ರು. ಅಪ್ಪ, ಅಮ್ಮಾ.. ನಿಮ್ದು ಹಳೇ ಕತೆ ಬಿಟ್ಟುಬಿಡಿ. ಅಕ್ಕನ ಬಗ್ಗೆ ಯೋಚನೆ ಮಾಡೋಣ ಒಳಗೆ ಬಾ ಅಣ್ಣಾ ನೀನು ಸಂಜನಾ ಅಪ್ಪ-ಅಮ್ಮನನ್ನು ಬದಿಗೆ ಸರಿಸಿ ಸಂಜಯ್ ನನ್ನು ಒಳಗೆ ಕರೆದು ಕೂರಿಸಿದಳು..!
ಒಂದು ಕ್ಷಣ ಎಲ್ಲರೂ ಮೌನ,ಸ್ವಲ್ಪ ಹೊತ್ತಿನ ನಂತರ ಸಂಜಯ್, “ಅಪ್ಪಾ, ಅಮ್ಮ ನಾನು ಹೀಗೆ ಹೇಳ್ತೀನಿ ಎಂದು ತಪ್ಪು ತಿಳಿಯಬೇಡಿ. ನಾನು ಅವತ್ತು ಅನನ್ಯಳನ್ನು ಮದುವೆ ಆಗಿದ್ದಕ್ಕೇ ನನ್ನನ್ನು ಮನೆಯಿಂದ ಆಚೆ ಹಾಕಿದ್ರಿ! ಪ್ರೀತಿ, ಜಾತಿ-ಗೀತಿ ನೋಡಿ ಹುಟ್ಟಲ್ಲ..! ನಾನು ಮದುವೆಯಾದವಳು ಬೇರೆ ಜಾತಿಯೇ? ಆದರೆ, ಅವಳು ಒಳ್ಳೆಯವಳು..! ಈ ಕ್ಷಣ ನೀವು ಬೇಜಾರು ಮರೆತು ಅವಳನ್ನು ಕರೆದರೆ ಬರುತ್ತಾಳೆ! ಅವತ್ತು ನೀವೇ ನಿಂತು ಖುಷಿ ಖುಷಿಯಿಂದ ನಮ್ಮ ಮದುವೆ ಮಾಡಿಕೊಟ್ಟಿದಿದ್ರೆ ರಜನಿ ಇವತ್ತು ಮನೆಬಿಡುತ್ತಿರಲಿಲ್ಲ..! ಅವಳ ಪ್ರೀತಿ ವಿಷಯವನ್ನು ದೈರ್ಯದಿಂದ ಹೇಳುತ್ತಿದ್ದಳು ಎಂದು ಸಂಜಯ್ ಹೇಳಿದಾಗ, ಏನು ನಿನ್ನ ಮಾತಿನ ಅರ್ಥ, ಗದರಿದರು ಅಪ್ಪ! ಅಪ್ಪಾ.. ನೀವು ಸ್ವಲ್ಪ ಕೋಪ ಕಡಿಮೆ ಮಾಡಿಕೊಳ್ಳಿ,ರಜನಿ ನನಗೆ ಸಿಕ್ಕಿದ್ದಾಳೆ..! ನಮ್ಮ ಮನೆಯಲ್ಲಿ ಬಿಟ್ಟು ಬಂದಿದ್ದೇನೆ..! ಅವಳ ಜೊತೆ ಅವಳು ಪ್ರೀತಿಸಿದ ಅಜಿತ್ ಕೂಡ ಇದ್ದಾನೆ!.. ಹ್ಞಾಂ, ಅಜಿತ್ ಅಂದ್ರೆ ನಿಮಗೆ ಗೊತ್ತಾಗಲ್ಲ? ನನಗೂ ಗೊತ್ತಾಗಿದ್ದು ನಿನ್ನೆಯೇ? ರಜನಿ ನಿನ್ನೆ ನನಗೆ ಅವನನ್ನು ಭೇಟಿ ಮಾಡಿಸಿ ಪರಿಚಯಿಸಿದ್ಲು..! ನನ್ನ ಕಾಲಿಗೆ ಬಿದ್ದು ಪ್ರೀತಿ ಉಳಿಸೋಕೆ ಕೇಳಿದ್ಲು ಎಂದು ಏರು ದನಿಯಲ್ಲೇ ಉತ್ತರಿಸಿದ, ಅಪ್ಪ ಮಾತೆತ್ತುವ ಮೊದಲೇ ಮಾತು ಮುಂದುವರಿಸಿದ ಸಂಜಯ್, ನೀವು ಅವತ್ತು ನಾನು ಪ್ರೀತಿಸಿದ ಹುಡುಗಿ ಬೇರೆ ಜಾತಿ ಎಂದು ಹೊರದಬ್ಬಿದ್ರಿ, ಆದ್ರೆ ನನ್ನ ತಂಗಿ ರಜನಿ ಪ್ರೀತಿಸಿದ ಹುಡುಗ ನಮ್ಮ ಜಾತಿಯವನೇ..!
ಅವನ ಮನೆಯಲ್ಲಿ ನಾನು ಮಾತಾಡಿ ಬಂದಿದ್ದೇನೆ. ನೀವು ಒಪ್ಪಿ ಅಪ್ಪ..! ರಜನಿ ಅಪ್ಪ-ಅಮ್ಮನ ಒಪ್ಪಿಸು ಅಂತ ಅಂಗಲಾಚುತ್ತಿದ್ದಾಳೆ..! ಅವರ ಪ್ರೀತಿನ ಉಳಿಸೋಣ, ನಮಗೂ ನಮ್ಮ ಮನೆಮಗಳು ಜೊತೆಯಲ್ಲೇ ಉಳೀತಾಳೆ ಎಂದ. ಅವನ ಮಾತು ಸರಿ ಅನಿಸಿತೇನೋ, ತಂದೆಗೆ ತನ್ನ ತಪ್ಪಿನ ಅರಿವಾಯ್ತು, ಸರಿ, ಎಂದರು. ಸಂಜಯ್ ಹೆಂಡತಿಯನ್ನೂ ಮನೆಗೆ ಬರುವಂತೆ ಹೇಳಿದ್ರು! ರಜನಿ ಮದುವೆ ಡಾಂ.. ಢೂಂ ಅಂತ ಆಯ್ತು..! ಸಂಜನಾ ಇವತ್ತಿಗೂ ತಮಾಷೆ ಮಾಡ್ತಾಳೆ, ಅಪ್ಪ ನಿಮ್ಮ ಹಠ ಅಣ್ಣನ ಮದುವೆಯಲ್ಲಿ ಗೆದ್ದು ಸೋತಿತು..! ರಜನಿ ವಿಷಯದಲ್ಲಿ ತಲೆ ನೋವಿಲ್ಲದೇ ಪ್ರೀತಿ ಗೆದ್ದಿತು. ಆದರೆ, ನೀವು ನೋಡಿದ ಹುಡುಗ ಅಥವಾ ಹುಡುಗಿಯನ್ನು ನೋಡಿಲ್ಲ ಎಂದು ಬೇಜಾರಾಗ್ಬೇಡಿ ನೀವೆಲ್ಲಾ ನೋಡಿ ಒಪ್ಪಿದ ಹುಡುಗನನ್ನೇ ನಾನು ಕಟ್ಟಿಕೊಳ್ಳುತ್ತೇನೆ ಎಂದಿದ್ದಳಂತೆ..! ಅಂತೆಯೇ ಮೊನ್ನೆ ಮೊನ್ನೆ ಸಂಜನಾಳ ಅಪ್ಪ ಅಮ್ಮ, ಅಣ್ಣ, ಅತ್ತಿಗೆ, ಅಕ್ಕ, ಭಾವ ಒಪ್ಪಿ ಒಂದು ಹುಡುಗನನ್ನು ನೋಡಿ ಮದುವೆ ಮಾಡಿದ್ದಾರೆ..!