ಸೌದಿ ಅರೇಬಿಯಾದಲ್ಲಿ ಮಹಿಳಾ ಸಮಾನತೆಗೆ ದಿಟ್ಟ ಹೆಜ್ಜೆ ಇಟ್ಟವರು ಶ್ರೀಸಾಮಾನ್ಯರಲ್ಲ. ರಾಜಕುಮಾರಿ ನೌರಾ ಬಿಂತ್ ಫೈಸಲ್ ಅಲ್ ಸೌದ್! ಇವರು ಅರೇಬಿಯಾದ ರಾಜಕುಮಾರಿ. ಜಪಾನಿನ ರಾಜಧಾನಿ ಟೋಕಿಯೋದ ರಿಕ್ಯೊ ಯೂನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ಉದ್ಯಮದ ಪದವಿ ಪಡೆದ ನೌರಾ, ಸೌದಿಗೆ ವಾಪಸಾಗಿದ್ದಾರೆ.
2017ರಲ್ಲಿ ನೌರಾ ಸೌದಿ ಅರೇಬಿಯಾದ ಫ್ಯಾಷನ್ ಕೌನ್ಸಿಲ್ ಅಧ್ಯಕ್ಷೆಯಾದರು. ಅದು ಸೌದಿಯಲ್ಲಿ ಹೊಸತನದ ಗಾಳಿ ಬೀಸುತ್ತಿದ್ದ ಸಮಯ. ಮಹಿಳೆಯರ ಸಮಾನತೆಯ ಬಗ್ಗೆ ಈಗಲೂ ಸೌದಿಯಲ್ಲಿ ಬೇಡಿಕೆ ಕೇಳಿ ಬಂದಿಲ್ಲವಾದರೂ, ಫ್ಯಾಶನ್ ಕೌನ್ಸಿಲ್ ಮಾಡುವ ಮೂಲಕ ಹೊಸ ಸಾಧ್ಯತೆಯ ಆಶಾಭಾವ ಮೂಡಿಸಿದ್ದಾರೆ.
ನೌರಾ, ಸೌದಿ ಅರೇಬಿಯಾದ ಸಂಸ್ಥಾಪಕ ಅಬ್ದುಲ್ಲಾಝಿಜ್ರ ಮರಿಮೊಮ್ಮಗಳು. ಸೌದಿ ರಾಜ ಮನೆತನದಲ್ಲಿ ಹುಟ್ಟಿದ ನೌರಾ ಹುಟ್ಟಿನಿಂದ ಶ್ರೀಮಂತಿಕೆ ಕಂಡವರು. ಸೌದಿಯಲ್ಲೇ ಬಾಲ್ಯ ಕಳೆದ ನೌರಾ ಉನ್ನತ ವಿದ್ಯಾಭ್ಯಾಸಕ್ಕೆ ಜಪಾನಿಗೆ ತೆರಳಿದರು. ಜಪಾನಿಗೆ ತೆರಳಿದ ನೌರಾರನ್ನು ಫ್ಯಾಷನ್ ಲೋಕ ಆಕರ್ಷಿಸಿತ್ತು. ಅವರ ವಾರ್ಡ್ರೋಬ್ ಕಲೆಕ್ಷನ್ ಕೂಡ ಅದಕ್ಕೆ ಸಾಕ್ಷಿಯಾಗಿವೆ. ಅದಾದ ನಂತರ ಸೌದಿಗೆ ವಾಪಸಾದ ನಂತರ ಫ್ಯಾಷನ್ ಕೌನ್ಸಿಲ್ ಸ್ಥಾಪನೆಯಾಯಿತು.
ಕಳೆದ ಏಪ್ರಿಲ್ ನಲ್ಲಿ ನಡೆದ ಫ್ಯಾಷನ್ ಕೌನ್ಸಿಲ್ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಿತ್ತು. ಕ್ಯಾಮೆರಾಗಳು ಮತ್ತು ಮಾಧ್ಯಮಕ್ಕೆ ಅನುಮತಿ ಇರಲಿಲ್ಲ. ಇದಕ್ಕೆ ನೌರಾ ಅವರು ನೀಡುವ ಕಾರಣ ಏನೆಂದರೆ, ಫ್ಯಾಷನ್ ಕೌನ್ಸಿಲ್ನಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲು ಕಾರಣಗಳಿವೆ. ಸೌದಿಯಲ್ಲಿ ಮಹಿಳೆಯರು ತಮ್ಮಿಚ್ಛೆಯ ಬಟ್ಟೆ ಧರಿಸಿ ಬಹಿರಂಗವಾಗಿ ಓಡಾಡುವುದಿಲ್ಲ. ಹಾಗಿರುವಾಗ ಮಾಧ್ಯಮಗಳಿಗೆ ಅವಕಾಶ ನೀಡಿದರೆ ಅವರಿಗೆ ಮುಜುಗರವಾಗಬಹುದು ಅನ್ನೋ ಕಾರಣದಿಂದ ಪ್ರವೇಶ ನಿರ್ಬಂಧಿಸಲಾಗಿತ್ತಂತೆ.
ಆದರೆ, ಈ ಬಗ್ಗೆ ಸೌದಿ ಅರೇಬಿಯಾ ರಾಜ ಸಲ್ಮಾನ್ ಪ್ರತಿಕ್ರಿಯೆ ಬೇರೆ ರೀತಿಯಾಗಿದೆ. ಮಹಿಳೆಯರು ಅಬಯಾಸ್ ಅಂದರೆ, ಬುರ್ಕಾ ರೀತಿಯ ನಿಲುವಂಗಿ ಹಾಕಲೇ ಬೇಕು ಎಂಬುದಿಲ್ಲ. ತಮ್ಮಿಷ್ಟದ ಬಟ್ಟೆ ಧರಿಸಲು ಮಹಿಳೆಯರು ಸ್ವತಂತ್ರರು ಎಂದಿದ್ದಾರೆ. ಇದು ಮೊದಲ ಬಾರಿಗೆ ಸೌದಿಯ ರಾಜ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಆಡಿದ ಮಾತುಗಳು.
ಒಟ್ಟಿನಲ್ಲಿ ಸೌದಿ ಅರೇಬಿಯಾ ಕೂಡ ಹೊಸತನಕ್ಕೆ ಮತ್ತು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಇನ್ನೊಂದು ಪ್ರಬಲ ಹೆಜ್ಜೆಯನ್ನು ಇಟ್ಟಿದೆ. ಸೌದಿ ಅರೇಬಿಯಾದಲ್ಲಿ ಈಗ ಹೊಸತನದ ಗಾಳಿ ಬೀಸಿದೆ. ಅದಕ್ಕೆ ಕಾರಣ ಸೌದಿಯ ರಾಜಕುಮಾರಿ ನೌರಾ ಬಿಂತ್ ಫೈಸಲ್ ಅಲ್ ಸೌದ್!. ಅವರ ನಿಲುವು ಮತ್ತು ದಿಟ್ಟತನ ಇತರರಿಗೂ ಮಾದರಿಯಾಗಿದೆ.