ಶ್ರೀಮತಿ ಕೃಷ್ಣಾ ಯಾದವ್. ಉತ್ತರ ಪ್ರದೇಶದ ಗುಡ್ಗಾಂವ್ನ ಯಶಸ್ವಿ ಮಹಿಳಾ ಉದ್ಯಮಿ. ಈ ಕೃಷ್ಣ ಯಾದವ್ ಅವರೀಗ ತಮಗೆ ಮಾತ್ರ ಉದ್ಯೋಗ ದೊರಕಿಸಿಕೊಂಡದ್ದಲ್ಲ. ಇತರರಿಗೂ ಕೆಲಸ ಕೊಡುವಷ್ಟು ಬೆಳೆದು ಬಿಟ್ಟಿದ್ದಾರೆ. ಸಣ್ಣ ಕೋಣೆಯಲ್ಲಿ ಉಪ್ಪಿನಕಾಯಿ ಮಾಡುವ ಕೆಲಸ ಆರಂಭಿಸಿದರು. ಈಗ 100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಡುತ್ತಿದ್ದಾರೆ.
ಕೃಷ್ಣಾ ಯಾದವ್ ಅವರು ಶಾಲೆ ಕಲಿತೇ ಇಲ್ಲ. ಆದರೆ, ಕೃಷ್ಣಾ ಈ ಯಶಸ್ಸಿನ ಪ್ರಯಾಣದಲ್ಲಿದ್ದಾರೆ. ಇವರದು ಅತಿ ಸಣ್ಣ ಕುಟುಂಬ. ದಿನನಿತ್ಯದ ಬದುಕಿನ ಬಂಡಿ ಎಳೆಯಲು ಬಹಳಷ್ಟ ಪ್ರಯಾಸಪಡುತ್ತಿದ್ದರು. ಗಂಡ ಗೋವರ್ಧನ್ ಸಿಂಗ್ ಯಾದವ್ ಅವರಿಗೆ ದುಡಿಯಲು ಕೆಲಸವಿರಲಿಲ್ಲ. ಮಕ್ಕಳು ಮತ್ತು ಮಡದಿಯನ್ನು ಸಾಕಲು ಸಾಕಷ್ಟು ಕಷ್ಟುಪಡುತ್ತಿದ್ದರು.
ಇಂತಹ ಸಮಯದಲ್ಲಿ ಕೃಷ್ಣಾ ಯಾದವ್ ತಮ್ಮ ಅಜ್ಜಿ ಆಗ ಹಾಕುತ್ತಿದ್ದ ರುಚಿ ರುಚಿಯಾದ ಉಪ್ಪಿನಕಾಯಿ ನೆನಪು ಮಾಡಿಕೊಂಡು ತಾವೇಕೆ ಉಪ್ಪಿನಕಾಯಿ ಮಾಡಿ ಮಾರಾಟ ಮಾಡಬಾರದೆಂದು ನಿರ್ಧರಿಸಿದರು. ಗಂಡ ಗೋವರ್ಧನ್ ಯಾದವ್ ಅವರೊಂದಿಗೆ ಈ ಬಗ್ಗೆ ಮಾತಣಾಡಿದ್ರು. ಆದರೆ, ಉಪ್ಪಿನಕಾಯಿ ತಯಾರಿಸಿ, ಮಾರಾಟ ಮಾಡಲು ಮೊದಲಿಗೆ ಹಣ ಬೇಕಲ್ಲ? ಅದಕ್ಕಾಗಿ ಲೇವಾದೇವಿದಾರರಿಂದ ಬಡ್ಡಿಗೆ 2 ಸಾವಿರ ಹಣ ತಂದು ಶುರು ಮಾಡಿದ್ರು.
ಇನ್ನು 1996ರಲ್ಲಿ ಒಂದು ಸಣ್ಣ ಕೋಣೆಯಲ್ಲಿ ಉಪ್ಪಿನಕಾಯಿ ವ್ಯಾಪಾರ ಆರಂಭಿಸಿದ್ದ ಕೃಷ್ಣಾ ಯಾದವ್ ಅವರು ಈಗ ಪ್ರಮುಖ 4 ಘಟಕಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ಉಪ್ಪಿನ ಕಾಯಿಗೆ ಸಂಬಂಧಿಸಿದ 152 ಉತ್ಪಾದನೆಗಳು ಸಿದ್ಧವಾಗುತ್ತಿದೆ. ಈಗ ಉತ್ತರ ಪ್ರದೇಶದ ಗುಡ್ ಗಾಂವ್ ಮಾತ್ರವಲ್ಲ, ಉತ್ತರ ಭಾರತದಲ್ಲಿ ‘ ಕೃಷ್ಣ ’ ಉಪ್ಪಿನಕಾಯಿ ತುಂಬಾ ಫೇಮಸ್ ಆಗಿದೆ.
ಕೃಷ್ಣಾರ ಸಂಪಾದನೆ ಮಾರ್ಗ ಆರಂಭಗೊಂಡ ಬಳಿಕ ಪತಿ ಗೋವರ್ಧನರಾವ್ ತನ್ನ ಸಣ್ಣ ಜಮೀನಿನಲ್ಲಿ ತರಕಾರಿ ಬೆಳೆಯ ತೊಡಗಿದ್ದಾರೆ. ಹೀಗೆ ತಮ್ಮ ಜಮೀನಿನ ತರ ತರದ ತರಕಾರಿಯಿಂದಲೂ ಉಪ್ಪಿನಕಾಯಿ ತಯಾರು ಆಗುತ್ತಿದೆ. 2001ರಲ್ಲಿ ಕೃಷಿವಿಜ್ಞಾನ ಕೇಂದ್ರ, ಉಜಾವದಲ್ಲಿ ಮೂರು ತಿಂಗಳ ತರಬೇತಿ ಬಳಿಕ ಕೃಷ್ಣಾರ ಉಪ್ಪಿನಕಾಯಿ ಫ್ಯಾಕ್ಟರಿಗೆ ತಲುಪಿಸಲು ಆರಂಭಿಸಿದ್ದಾರೆ.
ಕೃಷ್ಣಾ ಯಾದವ್ ಅವರ ‘ ಕೃಷ್ಣ ’ ಉಪ್ಪಿನಕಾಯಿಗೆ ಆರಂಭದಲ್ಲಿ ಮಾರುಕಟ್ಟೆ ಕಷ್ಟವಾಯಿತು ನಿಜ, ಆದರೆ, ಧೃತಿಗೆಡಲಿಲ್ಲ. ಕೊನೆಗೆ ಕೃಷ್ಣಾ ಯಾದವ್ ಅವರು ಸ್ವಯಂ ಮಾರ್ಕೆಟ್ ಮಾಡಿದರು. ಮನೆ ಮನೆಗೆ ಉಪ್ಪಿನಕಾಯಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ರು. ಜೊತೆಗೆ ಪ್ರಮುಖ ರಸ್ತೆ ಬದಿ ಉಪ್ಪಿನಕಾಯಿ ಮಾರಲು ಆರಂಭಿಸಿದರು. ಗುಣಮಟ್ಟ ಉತ್ತಮ ಇದ್ದುದರಿಂದ ನಿಧಾನವಾಗಿ ಉಪ್ಪಿನಕಾಯಿ ವ್ಯಾಪಾರ ಕಳೆಕಟ್ಟಿತು. ಈಗ ವಾರ್ಷಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದ್ದಾರೆ.
ಈಗ ಅವರು ದೇಶದ ಯಶಸ್ವಿ ಮಹಿಳಾ ಉದ್ಯಮಿಯಾಗಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ರಾಷ್ಟ್ರ ಮನ್ನಣೆ ಪಡೆದಿದ್ದಾರೆ. ಏನೇ ಹೇಳಿ, ಸಣ್ಣ ಬಂಡವಾಳದಲ್ಲಿ ಶುರು ಮಾಡಿದ ಉಪ್ಪಿನಕಾಯಿ ಉದ್ಯಮ, ಇಂದು ನೂರಾರು ಮಂದಿಗೆ ಕೆಲಸ ಕೊಡುತ್ತಿದೆ. ಇದರ ಹಿಂದಿರುವ ಕೃಷ್ಣಾ ಯಾದವ್ ಅವರ ಶ್ರಮ ಪ್ರತಿಯೊಬ್ಬರಿಗೂ ಸ್ಫೂರ್ತಿ.