ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳ 21 ರಂದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ನಡುವೆ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಬೆಂಗಳೂರು ಅಂಡರ್ ವರ್ಲ್ಡ್ ಇತಿಹಾಸದ ಮೊದಲ ಡಾನ್ ಜಯರಾಜ್ ಜೀವನಾಧಾರಿತ ಸಿನಿಮಾದಲ್ಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲಮ ಬಳಿಕ ಡಾಲಿ ನಟಿಸುತ್ತಿರುವ ಬಯೋಪಿಕ್ ಇದಾಗಿದ್ದು, ಅಗ್ನಿಶ್ರೀಧರ್ ಕಥೆ ಬರೆದಿದ್ದಾರೆ. ಕಿರಗೂರಿನ ಗಯ್ಯಾಳಿಗಳು ಸಿನಿಮಾದ ನಂತರ ಶ್ರೀಧರ್ ಯಾವ್ದೇ ಸಿನಿಮಾ ಮಾಡಿರಲಿಲ್ಲ. ಇದೀಗ 4 ವರ್ಷದ ಬಳಿಕ ಜಯರಾಜ್ ಕಥೆಯನ್ನು ಹೇಳಲು ಬರ್ತಿದ್ದಾರೆ.
ಶೂನ್ಯ ನಿರ್ದೇಶನ : ಇನ್ನು ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಶೂನ್ಯ ಎಂಬ ಯುವ ನಿರ್ದೇಶಕನ ಎಂಟ್ರಿಯಾಗುತ್ತಿದೆ. ಕೆಲವೊಂದಿಷ್ಟು ಸಿನಿಮಾ ತಂಡದೊಂದಿಗೆ ಡೈರೆಕ್ಷನ್ ವಿಭಾಗದಲ್ಲಿ ಪಳಗಿರುವ ಇವರು ಜಯರಾಜ್ ಬಯೋಪಿಕ್ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.
ಅಶು ಬೆದ್ರ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರತಂಡ ಎರಡು ಭಾಗಗಳಲ್ಲಿ ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ಪಂಚಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, ಸದ್ಯದಲ್ಲೇ ಟೈಟಲ್ ಮತ್ತು ಡಾಲಿ ಹೊರತುಪಡಿಸಿ ಉಳಿದ ತಾರಾಗಣ ಮತ್ತಿತರ ವಿವರಗಳನ್ನು ಚಿತ್ರ ತಂಡ ಹಂತ ಹಂತವಾಗಿ ತಿಳಿಸಲಿದೆ.