ರೊಟ್ಟಿ ತಟ್ಟುತ್ತಾ ದುಡಿಮೆಯ ದಾರಿ ತೋರಿಸಿದ ಗೃಹಿಣಿ

Date:

  • ಇವರು ಮಹಾರಾಷ್ಟ್ರದ ಸೋಲಾಪುರದ ಚಂದ್ರಿಕಾ ಚವ್ಹಾಣ್ ಎಂದು. ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣಿ ಎನಿಸಿಕೊಂಡಿದ್ದಾರೆ. ಸಾವಿರಾರು ಬಡ ಹೆಣ್ಣು ಮಕ್ಕಳ ಬಂಧುವಾಗಿದ್ದಾರೆ. ಮಹಿಳಾ ಸಬಲೀಕರಣದ ಮಾದರಿ ಹೆಣ್ಣು ಸೋಲಾಪುರ ‘ಬಾಬಿ ’ ’ ಎಂದೆಲ್ಲ ಕರೆಸಿಕೊಳ್ಳುವ ಚಂದ್ರಿಕಾ ಚಹ್ಣಾಣ್. ತನ್ನ ಸಹವರ್ತಿಗಳೊಂದಿಗೆ ಸೇರಿ ‘ಉದ್ಯೋಗವರ್ಧಿನಿ’ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆ ಮೂಲಕ ಅಸಂಖ್ಯಾತ ಗೃಹಿಣಿಯರಿಗೆ ಆಸರೆ ಆಗಿದ್ದಾರೆ.

ಚಂದ್ರಿಕಾ ಚವ್ಹಾಣ್, ಗುಜರಾತಿನಲ್ಲಿ ಹುಟ್ಟಿ ಬೆಳೆದು, ಮದುವೆಯಾದ ಮೇಲೆ ರಾಜಸ್ಥಾನದಲ್ಲಿ ನೆಲೆಸಿದ್ರು. ಅಲ್ಲಿಂದ ಗಂಡನ ಜತೆ ಪಶ್ಚಿಮ ಮಹಾರಾಷ್ಟ್ರದ ಸೋಲಾಪುರಕ್ಕೆ ಬಂದ ಚಂದ್ರಿಕಾ ಚವ್ಹಾಣ್ ಆದರ್ಶ ಗೃಹಿಣಿಯಾಗಿ ಮನೆ ಸಂಭಾಳಿಸುತ್ತಿದ್ದರು. ಗಂಡ, ಮೂವರು ಮಕ್ಕಳ ತುಂಬು ಸಂಸಾರ, ದಿನವಿಡೀ ಕೆಲಸ. ಕೆಳಮಧ್ಯಮವರ್ಗದ ಕುಟುಂಬವಾಗಿದ್ದರಿಂದ ಒಂದಿಷ್ಟು ಸಾಲಸೋಲವೂ ಇತ್ತು. ಹೀಗಿರುವಾಗ ಚಂದ್ರಿಕಾರ ಪತಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಹಾಸಿಗೆ ಹಿಡಿದರು.
ದುಡಿಯುವ ವ್ಯಕ್ತಿಗೇ ಹೀಗಾದರೆ ಗತಿಯೇನು? ಈಗ ಕುಟುಂಬವನ್ನಂತೂ ನಿರ್ವಹಿಸಬೇಕಿತ್ತು. ಹಿಂದೆ ಅಷ್ಟಿಷ್ಟು ಟೇಲರಿಂಗ್ ಕಲಿತಿದ್ದ ಚಂದ್ರಿಕಾ ಮನೆಮೂಲೆಯಲ್ಲಿದ್ದ ಹೊಲಿಗೆಯಂತ್ರದ ಧೂಳು ಕೊಡವಿ, ರವಿಕೆ ಹೊಲಿಯಲು, ಎಂಬ್ರಾಯ್ಡರಿ ಮಾಡಲು ಶುರು ಮಾಡಿದ್ರು. ಸ್ವಲ್ಪ ಧೈರ್ಯ ಬಂತು. ಕ್ರಮೇಣ, ಮೆಹಂದಿ ಕ್ಲಾಸ್, ಹಪ್ಪಳ-ಸಂಡಿಗೆ ತಯಾರಿಕೆ ಆರಂಭಿಸಿದ್ರು. ಕೊಳೆಗೇರಿ ಪ್ರದೇಶದ ಬಳಿ ಹೊಲಿಗೆ ಯಂತ್ರ ತಂದಿಟ್ಟು, ಅಲ್ಲಿನ ಮಹಿಳೆಯರಿಗೂ ಟೇಲರಿಂಗ್ ಕಲಿಸತೊಡಗಿದರು. ನೋಡಿ, ಅಲ್ಲಿಂದ ಶುರುವಾಯಿತು, ಅವರ ಯಶಸ್ವಿನ ಹೆಜ್ಜೆ.
ಚಂದ್ರಿಕಾ ಚವ್ಹಾಣ್ ಅವರಿಗೆ ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಗುಣ, ಮೃದುಮಾತು, ಕಳಕಳಿಯ ಇತ್ತು. ಆ ಕಾರಣದಿಂದ ಅವರಿಗೆ ಗೆಳತಿಯರ ಬಳಗ ದೊಡ್ಡದಿತ್ತು. ಹಾಗಾಗಿ ಎಲ್ಲರೂ ಸೇರಿ ಏನಾದರೂ ಸಣ್ಣ ಉದ್ಯಮ ಶುರು ಮಾಡ್ಬೇಕು ಅಂದುಕೊಂಡ್ರು. ಆದರೆ, ಯಾರಲ್ಲೂ 100 ರೂಪಾಯಿಯ ಬಂಡವಾಳವೂ ಇರಲಿಲ್ಲ. ಕುಟುಂಬದ ಹೊಣೆ ಹೊರಬೇಕಾದ ಅನಿವಾರ್ಯತೆ ತುಂಬ ಮಹಿಳೆಯರಿಗಿತ್ತಾದರೂ, ಅವರ ಕೈಗೆ ಕೆಲಸ ಇರಲಿಲ್ಲ. ಈ ವೇಳೆ ಅವರಿಗೆ ಹೊಳೆದ ಐಡಿಯಾ ರೊಟ್ಟಿ ಮಾಡುವುದು!
ಎಲ್ಲ ಮಹಿಳೆಯರಿಗೂ ಅಡುಗೆ ಮಾಡೋದು ಗೊತ್ತು. ಹಾಗಾಗಿ, ರೊಟ್ಟಿ ತಯಾರಿಕೆ ಶುರು ಮಾಡಿದರು. ಆಗ ಒಂದೂವರೆ ರೂಪಾಯಿ ಖರ್ಚಲ್ಲಿ ರೊಟ್ಟಿ ಮಾಡಿ, ಎರಡು ರೂಪಾಯಿಗೆ ಮಾರಾಟ ಮಾಡತೊಡಗಿದರು. ಮೊದಲಿಗೆ ಬಂದದ್ದು ಬರೀ 25 ರೊಟ್ಟಿಗಳಿಗೆ ಆರ್ಡರ್. ಇವರ ಕೆಲಸದ ಗುಣಮಟ್ಟ, ಜೋಳದ ರೊಟ್ಟಿಯ ಸ್ವಾದ ಸ್ವಲ್ಪ ದಿನದಲ್ಲೇ ಸೋಲಾಪುರ ತುಂಬೆಲ್ಲ ಮನೆಮಾತಾಯಿತು. ಪರಿಣಾಮ, ಒಂದೂವರೆ ಸಾವಿರ ಮಕ್ಕಳಿರುವ ಶಾಲೆಗೆ ಪೌಷ್ಟಿಕ ಆಹಾರ ಒದಗಿಸುವ ಆರ್ಡರ್ ದೊರೆಯಿತು. ಅದಾಗಲೇ ಹತ್ತಾರು ಜನರಿಗೆ ಕೆಲಸ ನೀಡಿದ್ದ ಚಂದ್ರಿಕಾ ಎಲ್ಲರ ‘ಬಾಬಿ ’’ ಯಾಗಿ ಜನಮನ ಗೆದ್ದರು.
ಇಂಥ ಶ್ರಮಲಕ್ಷ್ಮಿಯರು ಮಹಾನಗರ ಪಾಲಿಕೆ ಪ್ರವೇಶಿಸಿದರೆ ಸೂಕ್ತ ಅಲ್ಲವೆ ಎಂಬ ಚಿಂತನೆ ಜನರಲ್ಲಿ ಮೂಡಿದ್ದೇ ತಡ 1997 ಮತ್ತು 2007ರಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಯೂಆಯ್ಕೆಯಾಗಿದ್ರು. ಜನರು ನೀಡಿದ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಕೊಳೆಗೇರಿ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಿದರು.ಶಾಸಕಿಯಾಗುವ ಅವಕಾಶ ಬಂದರೂ ಖ್ಯಾತ ಸಮಾಜಸೇವಕ ನಾನಾಜಿ ದೇಶಮುಖ್ ಅವರ ಸಂಪರ್ಕದಿಂದ ಸಮಾಜ ಮುಖಿ ಕೆಲಸಗಳಿಗೆ ಇಳಿದ್ರು.
ಆಗ ‘ಭಾಭಿ’ ಮತ್ತು ಅವರ ಗೆಳತಿಯವರೆಲ್ಲ ಸೇರಿ ಮಹಿಳೆಯರಿಗಾಗಿ ‘ಉದ್ಯೋಗವರ್ಧಿನಿ’ ಎಂಬ ಸಂಸ್ಥೆ ಆರಂಭಿಸಿದ್ರು. ಆ ಸಂಸ್ಥೆ ಮೂಲಕ ರೊಟ್ಟಿ ಜತೆ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಶಾವಿಗೆ, ಶೇಂಗಾ ಚಟ್ನಿ ತಯಾರಿಸಿದ್ರು. ಈಗ ಇವರ ಮಾಡುವ ರೊಟ್ಟಿಗಳಿಗೆ ಸೋಲಾಪುರದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬೇಡಿಕೆ ಇದೆ. ರೊಟ್ಟಿ, ಶೇಂಗಾ ಚಟ್ನಿ ಆಸ್ಟ್ರೇಲಿಯಾ, ಅಮೆರಿಕಕ್ಕೂ ರಫ್ತುಗೊಳ್ಳುತ್ತಿವೆ. ಶ್ರದ್ಧೆಯಿಂದ ಮಾಡಿದ ದುಡಿಮೆಗೆ ಮೋಸವಿಲ್ಲ ಎಂದು ಚಂದ್ರಿಕಾ ಮತ್ತವರ ತಂಡ ಸಾಬೀತು ಮಾಡಿದೆ.
ನೋಡಿ, ತನ್ನ ಮನೆ-ಮಕ್ಕಳ ಹಸಿವನ್ನು ನೀಗಿಸಬೇಕೆಂದು ಹೊರಟ ಚಂದ್ರಿಕಾ ಭಾಭಿ ಇಂದು ಸಾವಿರಾರು ಮನೆಗಳ ಒಲೆ ಉರಿಯುವಂತೆ ಮಾಡಿದ್ದಾರೆ. ತಾನು ಬೆಳೆದರೆ ಸಾಲದು, ಜತೆಯವರು ಬೆಳೆಯಬೇಕು ಎಂಬ ಉದಾತ್ತ ಮನೋಭಾವದಿಂದ ಸಬಲೀಕರಣದ ಸಶಕ್ತ ಮಾದರಿ ಪರಿಚಯಿಸಿದ್ದಾರೆ .

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...