ಭವಿಷ್ಯದಲ್ಲಿ 180 ಕೋಟಿ ಜನರಿಗೆ ಕುಡಿಯಲು ನೀರಿಲ್ಲ..!! `ಬರ'ಸಿಡಿಲು

Date:

raaaಜಗತ್ತು, ದೇಶ, ರಾಜ್ಯಗಳು ಬರಗಾಲದಿಂದ ತತ್ತರಿಸುತ್ತಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. ಜನರ ಪರಿಸ್ಥಿತಿ ಅವರೇ ನಂಬುವ ಸಾಕ್ಷಾತ್ ಭಗವಂತನಿಗೆ ಪ್ರೀತಿ. ಅಲ್ಲಲ್ಲಿ ಜನರು ಸಾಯುತ್ತಿದ್ದಾರೆ. ಇವುಗಳ ಜೊತೆ ರಾಜಕಾರಣಿಗಳ ಅಸಮರ್ಥ ಆಡಳಿತ. ಎಲ್ಲವೂ ಮನುಷ್ಯನ ಸ್ವಾರ್ಥದ ಎಫೆಕ್ಟ್. ಭೂಮಿ ಸುಡುತ್ತಲೇ ಇದೆ. ಈ ಬಾರಿ ಏನಾದ್ರೂ ಸರಿಯಾದ ಪ್ರಮಾಣದಲ್ಲಿ ಮಳೆ ಬಂದಿಲ್ಲ ಎಂದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಇಲ್ಲಿಗೆ ನೂರು ವರ್ಷದ ಹಿಂದೆ ಇಡೀ ಭೂಮಿಯನ್ನು ಸ್ಯಾಟ್ ಲೈಟ್ ಮೂಲಕ ನೋಡಿದಾಗ, ಶೇಕಡಾ ಎಂಬತ್ತರಷ್ಟು ಹಸಿರು ಬಣ್ಣವೇ ವ್ಯಾಪಿಸಿತ್ತು. ಇವತ್ತಿಗೆ ಅದೇ ಭೂಮಿಯಲ್ಲಿ ಹಳದಿ ಬಣ್ಣ ಕಣ್ಣಿಗೆ ರಾಚುತ್ತದೆ. ಹಸಿರು ಮಾಯವಾಗಿ ಅಲ್ಲೀಗ ಉಳಿದುಕೊಂಡಿದ್ದು ಬಟಾಬಯಲು. ಓಝೋನ್ ಪದರವನ್ನು ನಾಶಪಡಿಸಿ ನೇರವಾಗಿ ಭೂಮಿಯ ಮೇಲೆ ರೌದ್ರವತಾರ ತೋರಿಸುತ್ತಿದೆ ಸೂರ್ಯ. ಜಾಗತೀಕ ತಾಪಮಾನ ಯಾವಪರಿ ಹೆಚ್ಚಿದೆಯೆಂದರೇ, ಅದೆಷ್ಟೋ ಲಕ್ಷ ಕಿಲೋಮೀಟರ್ ದೂರದಿಂದ ಭೂಮಿಗೆ ಬೀಳುವ ಸೂರ್ಯ ಕಿರಣದ ತಾಪ ತಾಳದೆ ಜನರು ಸಾಯುತ್ತಿದ್ದಾರೆ.

ಜಗತ್ತು ಬೆಳೆಯುತ್ತಿದ್ದಂತೆ ಮನುಷ್ಯನ ಮೆದುಳು ವಿಕಾಸವಾಗತೊಡಗಿತ್ತು. ಅವನು ಪ್ರಕೃತಿ ಜೊತೆ ಆಟವಾಡಲು ಶುರುಮಾಡಿದ. ಒಂದು ಹಂತಕ್ಕೆ ಪ್ರಕೃತಿ ಸ್ಪಂದಿಸದಿದ್ದಾಗ ಅದರ ಜೊತೆ ಸೆಣಸಾಡತೊಡಗಿದ. ಪ್ರಕೃತಿಯನ್ನು ಸೋಲಿಸಿ ಮುನ್ನುಗ್ಗತೊಡಗಿದ. ಗೆದ್ದುಬೀಗಿದ. ಆ ಕ್ಷಣಕ್ಕೆ ಮನುಷ್ಯನಿಗೆ ಇದು ತಾತ್ಕಾಲಿಕ ಸಂಭ್ರಮ. ಭವಿಷ್ಯದಲ್ಲಿ ಕಾದಿದೆ ಅಪಾಯ ಎಂಬ ಹಕೀಕತ್ತು ಅರ್ಥವಾಗಲೇ ಇಲ್ಲ. ಇವತ್ತು ಅರ್ಥವಾದರೂ ಪ್ರಕೃತಿ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳುವ ಎಲ್ಲಾ ದಾರಿಗಳನ್ನು ಮುಚ್ಚಿಕೊಂಡಿದ್ದಾನೆ. ಅವತ್ತು ಸ್ವಾರ್ಥ ಮೆರೆದಿದ್ದಕ್ಕೆ ಸೂಕ್ತ ಪಾಠ ಕಲಿಸಲು ಈಗ ಪ್ರಕೃತಿ ಸಿದ್ದವಾಗಿದೆ. ಇವತ್ತಿಗೆ ಪ್ರಕೃತಿಯದ್ದೇ ರೌದ್ರವತಾರ.

ದೇಶ, ರಾಜ್ಯದ ವಿಚಾರವನ್ನು ಚರ್ಚಿಸುವ ಮೊದಲು ಜಗತ್ತಿನ ಸಂಗತಿಯನ್ನು ತೆಗೆದುಕೊಂಡರೇ, ಕೆಲವು ತಿಂಗಳ ಹಿಂದಷ್ಟೆ ಜಾಗತೀಕ ತಾಪಮಾನವನ್ನು ತಹಬಂಧಿಗೆ ತರುವ ನಿಟ್ಟಿನಲ್ಲಿ ಜಗತ್ತಿನ 196 ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಪ್ಯಾರಿಸ್ನ ಡಿ ಬೊಗರ್ೆಟ್ನಲ್ಲಿ ಸತತ ಹದಿಮೂರು ದಿನಗಳ ಕಾಲ ಸಂಧಾನಶೃಂಗ ನಡೆದಿತ್ತು. ಭಾರತ, ಚೀನಾ, ಅಮೆರಿಕಾ ಫ್ರಾನ್ಸ್ ಸೇರಿದಂತೆ 196 ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಹಗಲು ರಾತ್ರಿ ನಡೆಸಿದ ಸಂಧಾನದ ಫಲವಾಗಿ ಎರಡು ಮಹತ್ವದ ಕಾನೂನುಬದ್ಧ ನಿರ್ಣಯಗಳು ಅಂಗೀಕಾರವಾಗಿತ್ತು. ಶತಮಾನದಿಂದ ಶತಮಾನಕ್ಕೆ, ದಶಕದಿಂದ ದಶಕಕ್ಕೆ, ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಏರುತ್ತಲೇ ಇದೆ. ಜಾಗತಿಕ ತಾಪಮಾನ ಇಳಿಸುವ ಬಗ್ಗೆ ಬಡ ಹಾಗೂ ಶ್ರೀಮಂತ ರಾಷ್ಟ್ರಗಳ ಮಧ್ಯೆ ಮೌನ ಕಲಹಕ್ಕೆ ಕಾರಣವಾಗಿದ್ದ ವಿವಾದವೇನೋ ಬಗೆಹರಿದಿತ್ತು. ಆದರೆ ಕೆಲ ರಾಷ್ಟ್ರಗಳು ಪರಮಾಣುಗಳನ್ನಿಟ್ಟುಕೊಂಡು ಯುದ್ಧಕ್ಕೆ ಸಿದ್ದವಾಗಿವೆ. ಅಷ್ಟಕ್ಕೂ ಜಾಗತಿಕ ತಾಪಮಾನಕ್ಕೆ ಕಾರಣ ಮಾನವ ಚಟುವಟಿಕೆಗಳು. ಹಸಿರುಮನೆ ಅನಿಲ ಉತ್ಪಾದಕಗಳು, ತೀವ್ರ ಬೇಸಾಯ ಮತ್ತು ಮರಕಡಿಯುವಿಕೆ. ಇವು ವಾತಾವರಣದಲ್ಲಿ ವಿಷಕಾರಿ ಅನಿಲ ಬಿಡುಗಡೆಗಳನ್ನು ಹೆಚ್ಚಿಸಿ, ಹಸಿರುಮನೆ ಪರಿಣಾಮಗಳನ್ನು ಹೆಚ್ಚಿಸುತ್ತವೆ. ಜಾಗತಿಕ ತಾಪಮಾನ ಹೆಚ್ಚಳವು, ಹಸಿರುಮನೆ ಅನಿಲಗಳ ಬಿಡುಗಡೆಯಿಂದ ಮೇಲ್ಮೈ ತಾಪಮಾನದ ಹೆಚ್ಚಳದೊಂದಿಗೆ ಜೊತೆಗೂಡಿದ್ದು, ಕಾಲಕ್ರಮೇಣ ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತಿದೆ.

ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕದಿದ್ದರೇ 2025ರ ವೇಳೆಗೆ ಜಗತ್ತಿನಲ್ಲಿ ನೂರ ಎಂಬತ್ತು ಕೋಟಿ ಜನರಿಗೆ ನೀರು ಸಿಗುವುದಿಲ್ಲ ಎಂದು ವರದಿ ಹೇಳುತ್ತಿದೆ. ಭಾರತ, ಚೀನಾದಂತ ಎರಡು ದೇಶಗಳಿಗೆ ನೀರು ಸಿಗುವುದಿಲ್ಲ ಎಂದು ಉದಾಹರಿಸಬಹುದು. ತಾಪಮಾನದ ಎಫೆಕ್ಟ್ ಯಾವುದು ಅಂತ ಮೊದಲಿಗೆ ನೋಟ್ ಮಾಡುವುದಾದರೇ ಅದು ನೀರಿನ ಕೊರತೆ. ನೀರಿಲ್ಲದಿದ್ದರೇ ಜೀವ ಉಳಿಸಿಕೊಳ್ಳುವುದು ಅಸಾಧ್ಯ. ಏಕೆಂದರೇ ಕುಡಿಯುವುದಕ್ಕೆ ಮಾತ್ರವಲ್ಲ, ಆಹಾರದ ಉತ್ಪಾದನೆಗೂ ನೀರು ಅತ್ಯವಶ್ಯಕ. ಸಧ್ಯಕ್ಕೆ ದೇಶದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಈ ಕ್ಷಣಕ್ಕೆ ಜನರಿಗೆ ಬೆಳೆ ಬೆಳೆಯುವ ಚಿಂತನೆಗಳಿಲ್ಲ. ಅವರಿಗೆ ಕುಡಿಯಲು ನೀರು ಸಿಕ್ಕರೇ ಸಾಕಾಗಿದೆ. ನದಿ, ಕೆರೆಗಳು ಬತ್ತಿಹೋಗಿವೆ. ಅಣೆಕಟ್ಟುಗಳಲ್ಲಿ ನೀರು ಪಾತಾಳಕ್ಕಿಳಿದಿದೆ. ಬಾವಿಗಳು ಒಣಗಿವೆ. ನೂರಾರು ಕಿಲೋಮೀಟರ್ ಗಳಿಂದ ನೀರನ್ನು ಹೊತ್ತು ತರುವ ಟ್ಯಾಂಕರ್ಗಳಿಂದ ವಾರಕ್ಕೊಮ್ಮೆ ನೀರು ಹಿಡಿದು ಶೇಖರಿಸಿಕೊಳ್ಳುವ ಸ್ಥಿತಿ ದೇಶದ ಅನೇಕ ರಾಜ್ಯಗಳದ್ದಾಗಿದೆ. ಕೆಲವು ಜಿಲ್ಲೆ, ತಾಲ್ಲೂಕುಗಳಲ್ಲಿ ಆ ಸೌಲಭ್ಯವೂ ಸಿಗುತ್ತಿಲ್ಲ. ಅದಕ್ಕೆ ಸಚಿವರು, ಜಿಲ್ಲಾಡಳಿತಗಳೇ ನೇರಕಾರಣ. ಪ್ರಕೃತಿ ಮುನಿದು ನಿಂತಾಗಿದೆ. ಪರ್ಯಾಯ ದಾರಿ ಕಾಣಿಸಬೇಕಾದ ಜನಪ್ರತಿನಿಧಿಗಳು ಸುಮ್ಮನಾಗಿರುವುದು ಜನರ ನರಳುವಂತಾಗಿದೆ.

ಮೊನ್ನೆಯಷ್ಟೆ ಮಹಾರಾಷ್ಟ್ರದಲ್ಲಿ ಪುಟ್ಟ ಬಾಲಕಿಯೊಬ್ಬಳು ದುರಂತವಾಗಿ ಸಾವನ್ನಪ್ಪಿದ್ದಳು. ಕಿಲೋಮೀಟರ್ ಗಟ್ಟಳೆಯಿಂದ ನೀರನ್ನು ಹೊತ್ತು ತಂದು ಹೃದಯಾಘಾತವಾಗಿ ಸಾವನ್ನಪ್ಪಿದ್ದಳು. ಮಹಾರಾಷ್ಟ್ರದ ಅನೇಕ ಅಣೆಕಟ್ಟುಗಳು ಹೆಚ್ಚುಕಮ್ಮಿ ಬರಿದಾಗಿವೆ. ನೀರಿರುವ ಅಣೆಕಟ್ಟುಗಳಿಂದ ಅಕ್ಕಪಕ್ಕದ ರಾಜ್ಯಗಳಿಗೆ ನೀರುಣಿಸುವ ಕೆಲಸವಾಗುತ್ತಿದೆ. ದೇಶದ ಮಟ್ಟಿಗೆ ಹಂಚಿ ತಿನ್ನಲೇಬೇಕಾದ ಅನಿವಾರ್ಯತೆಯಿದೆ. ಇಲ್ಲವೆಂದರೇ ನೀರು ಕಾಣದ ರಾಜ್ಯಗಳು ಸ್ಮಶಾನವಾಗಿ ಮಾರ್ಪಡುತ್ತದೆ. ಅಲ್ಲಿನ ಸರ್ಕಾರ ರೈಲುಗಳಲ್ಲಿ ನೀರು ತುಂಬಿಸಿ ಹಳ್ಳಿಗಳಿಗೆ ನೀರು ಪೂರೈಸುವ ಕೆಲಸ ಮಾಡುತ್ತಿವೆ. ಕುಟುಕು ನೀರು ಕುಟುಕು ಜೀವಕ್ಕೆ ಆಸರೆಯಾಗುತ್ತಿದೆ. ಇನ್ನೊಂದು ಕಡೆ ಬರಪರಿಸ್ಥಿತಿ ಅಧ್ಯಯನಕ್ಕೆ ಹೋದ ಅಲ್ಲಿನ ಸಚಿವಾಲಯದ ಪಂಕಜ ಅವರಂತ ಅವಿವೇಕಿಗಳು ಬರಗಾಲ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಂಡು ಬರಗಾಲದಲ್ಲೂ ಹುಚ್ಚು ತೆವಲುಗಳನ್ನು ತೀರಿಸಿಕೊಳ್ಳುತ್ತಾರೆ. ವ್ಯಾಪಕ ಬರಗಾಲದ ಕಾರಣಕ್ಕೆ, ನೀರು ವ್ಯಥಾ ಪೋಲಾಗುತ್ತದೆ ಎಂಬ ಅಂಶವನ್ನು ಮುಂದಿಟ್ಟು ಮಹಾರಾಷ್ಟ್ರ ಹೈಕೋರ್ಟ್ ಐಪಿಎಲ್ ಪಂದ್ಯಗಳನ್ನೇ ನಿಷೇಧಿಸಿದೆ. ದಿನದಿಂದ ದಿನಕ್ಕೆ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳ ಪರಿಸ್ಥಿತಿ ವಿಷಮಿಸುತ್ತಿದೆ.

ಇನ್ನು ರಾಜ್ಯದ ವಿಚಾರಕ್ಕೆ ಬಂದರೇ ರಾಜಧಾನಿ ಬೆಂಗಳೂರು ಯಾವತ್ತಿಗೂ ನಲವತ್ತು ಡಿಗ್ರಿ ಬಿಸಿಲನ್ನು ಕಂಡಿರಲೇ ಇಲ್ಲ. ಒಂದು ಕಾಲದಲ್ಲಿ ಬೆಂಗಳೂರಿನ ತಂಪಾದ ವಾತಾವರಣಕ್ಕೆ ಪೂರಕವಾಗಿ ಟೂರಿಸಂ ಸ್ಥಳ ಮಾಡಲು ಬ್ರಿಟೀಷರು ಹೊರಟಿದ್ದರು. ಇಷ್ಟು ದೊಡ್ಡ ಸಿಟಿಯಾದರೂ ಯಾವತ್ತಿಗೂ ಬೆಂಗಳೂರು ತಾಪಮಾನದಿಂದ ಬಳಲಿರಲಿಲ್ಲ. ಇವತ್ತು ಜಲಾಶಯಗಳಲ್ಲಿ ನೀರು ಬತ್ತಿರುವುದರಿಂದ ವಿದ್ಯುತ್ ಅಭಾವ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ಕೆಲವು ಆಯಕಟ್ಟಿನ ಸ್ಥಳಗಳನ್ನು ಹೊರತುಪಡಿಸಿದರೇ ಇಲ್ಲೂ ಟ್ಯಾಂಕರ್ ಗಳಲ್ಲಿ ನೀರು ಪೂರೈಸುವ ಸ್ಥಿತಿ ಬಂದಿದೆ. ಮೇ ತಿಂಗಳವರೆಗೆ ಹೇಗೂ ಕಷ್ಟಪಟ್ಟು ನೀರು ಪೂರೈಸಬಹುದು ಎಂದು ಸರ್ಕಾರ ಹೇಳಿದೆ. ಕೆ.ಆರ್.ಎಸ್, ತಿಪ್ಪಗೊಂಡನಹಳ್ಳಿ ಇತರೆ ಜಲಾಶಯಗಳಲ್ಲಿರುವ ನೀರಿನ ಮಟ್ಟವನ್ನು ಆಧರಿಸಿ ಸರ್ಕಾರ ಈ ವರದಿ ನೀಡಿದೆ. ಜೂನ್ ನಲ್ಲಿ ಮಳೆಯಾಗುವವರೆಗೆ, ಜಲಾಶಯ ತುಂಬುವವರೆಗೆ ಪಕ್ಕದ ಮಹಾರಾಷ್ಟ್ರದಿಂದ ನೀರು ಪಡೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಈ ನಡುವೆಯೂ ಪಕ್ಕದ ತಮಿಳುನಾಡಿಗೂ ನೀರನ್ನು ಪೂರೈಸುತ್ತಿದೆ. ಇಲ್ಲಿಯೇ ನೀರಿಲ್ಲ, ಅವರಿಗೆ ಹೇಗೆ ಕೊಡೋದು ಎಂದು ಹೋರಾಟ ಮಾಡುವ ವಿಚಾರವಿದಲ್ಲ. ಏಕೆಂದರೇ ತಮಿಳುನಾಡಿನಲ್ಲೂ ನೀರಿಗೆ ಹಾಹಾಕಾರವಿದೆ.

ಅದೆಂಥಾ ಬರಗಾಲದ ಪರಿಸ್ಥಿತಿಯಲ್ಲೂ ನೀರಿಗಾಗಿ ಮಲೆನಾಡಿನ ಜನರು, ಕರಾವಳಿ ಭಾಗದವರು ಒದ್ದಾಟ ನಡೆಸಿದ್ದು ಕಡಿಮೆ. ಆದರೆ ಈ ವರ್ಷ ಅಲ್ಲೂ ನೀರಿಗಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಬಾವಿಗಳು ಒಣಗಿ ಜನರು ಪರಿತಪಿಸುತ್ತಿದ್ದಾರೆ. ಹಳ್ಳ-ಕೊಳ್ಳಗಳು ಬಯಲುಗಳಾಗಿ ಮಾರ್ಪಾಡಾಗಿವೆ. ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರು ಇಂಗಿದ ಉದಾಹರಣೆಯೇ ಇಲ್ಲ. ಆದರೆ ಈಗ ತುಂಗೆಯಲ್ಲಿ ಚರಂಡಿಯ ಅಳತೆಯಲ್ಲಿ ನೀರು ಹರಿಯುತ್ತಿದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ದೊಡ್ಡ ದೊಡ್ಡ ನದಿಗಳು ಬರಿದಾಗುವ ಎಲ್ಲಾ ಲಕ್ಷಣಗಳಿವೆ. ತುಂಗೆ, ಭದ್ರೆ, ಕಾವೇರಿ, ಇನ್ನಿತರೆ ನದಿಗಳ ಹಿನ್ನೀರಿನ ಕೊಳ್ಳಗಳು ಖಾಲಿಯಾಗಿರುವುದರಿಂದ ಉತ್ತರ ಕರ್ನಾಟಕದ ಜನರು ಬರಗಾಲದ ಎಫೆಕ್ಟ್ ಅನ್ನು ನೇರವಾಗಿ ಎದುರಿಸುವಂತಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲು 42 ಡಿಗ್ರಿ ಮೀರಿದೆ. ಮಕ್ಕಳು, ಗರ್ಭಿಣಿಯರು, ಮಹಿಳೆಯರ ಪರಿಸ್ಥಿತಿ ಭೀಕರವಾಗಿದೆ. ವಾರಕ್ಕೆರಡು ದಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆ, ಒಂದು ವಾರಕ್ಕೆ ಬೇಕಾದಷ್ಟು ಸ್ಟಾಕ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಸಿಕ್ಕರೇ ಸೀರುಂಡೆ, ಇಲ್ಲದಿದ್ದರೇ ಏನೂ ಇಲ್ಲ ಎಂಬಂತಿರುವ ವಾಸ್ತವ. ರಾಜ್ಯದ 25 ಜಿಲ್ಲೆ, 140ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಲ್ಲದೇ ಜನರು ನರಳುತ್ತಿದ್ದಾರೆ. ದಿನಕ್ಕೆ ಎರಡು, ಮೂರು ತಾಸು ವಿದ್ಯುತ್ ಸಿಕ್ಕರೇ ಪುಣ್ಯ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೇ ಸಾಯುತ್ತಿವೆ. ಅವುಗಳನ್ನು ಕಸಾಯಿಖಾನೆಗೆ ಕಳುಹಿಸದೇ ವಿಧಿಯಲ್ಲ ಎನ್ನುವ ನಿರ್ಧಾರಕ್ಕೆ ಅಲ್ಲಿನ ಜನರು ಬಂದಾಗಿದೆ. ನೋವಿನ ವಿಚಾರವೇನಂದ್ರೇ, ತಾಪಮಾನಕ್ಕೆ ರಾಯಚೂರಿನಲ್ಲಿ ಗರ್ಭಿಣಿಯರು ಸಾವಿಗೀಡಾಗುತ್ತಿರುವ ವರದಿ ಬರುತ್ತಿದೆ. ಚಿಕ್ಕ ಮಕ್ಕಳ ಕಿಡ್ನಿ ವೈಫಲ್ಯವಾಗುತ್ತಿದೆ. ಈ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲವನ್ನು ಶಕ್ತಿಮೀರಿ ನಿವಾರಿಸಲು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಸಂಪೂರ್ಣ ವಿಫಲರಾಗಿದ್ದಾರೆ. ಎಸಿ ರೂಂ, ಇಪ್ಪತ್ನಾಲ್ಕು ಗಂಟೆ ವಿದ್ಯುತ್, ನೀರಿನ ಸೌಲಭ್ಯ ಹೋದಿರುವ ಈ ಜನಪ್ರತಿನಿಧಿಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದಿರುವುದು ಜನರ ಪಿತ್ಥ ಕೆರಳಿಸಿದೆ. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಯೂರೋಪ್ ಪ್ರವಾಸದಲ್ಲಿ ಪೊಗದಸ್ತಾಗಿದ್ದಾರೆ ಎಂಬ ವರದಿಯಿದೆ. ಇವರಿಗೆಲ್ಲಾ ಯಾವ ಕಾಲಕ್ಕೆ ಬುದ್ದಿ ಬರುತ್ತೋ ಗೊತ್ತಿಲ್ಲ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರಿಗೆ ಭೇಟಿಕೊಟ್ಟು ಬರಗಾಲದಿಂದ ನರಳುತ್ತಿರುವ ಜನರ ಸಮಸ್ಯೆಗಳನ್ನು ನಿವಾರಿಸುವ ಭರವಸೆ ಕೊಟ್ಟು ಬಂದಿದ್ದಾರೆ. ಅವರ ಜೊತೆ ಒಂದಿಷ್ಟು ಸಚಿವರು ಹೋಗಿ ತಮ್ಮ ಕರ್ತವ್ಯ ಮುಗಿಸಿ ಬಂದಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಸುಮ್ಮನೇ ಭೇಟಿಕೊಟ್ಟು ಬಂದ ಮಾತ್ರಕ್ಕೆ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು. ಹಲವು ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಸಚಿವರುಗಳು ಚಿಕ್ಕಾಬಳ್ಳಾಪುರ , ಕೋಲಾರ, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ತುಮಕೂರು ಇನ್ನತರೆ ಬರಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟಿಲ್ಲ. ಇದು ಅವರ ಉಢಾಳತನಕ್ಕೆ ಸಾಕ್ಷಿಯಾಗಿದೆ.

ಪ್ರಕೃತಿ ಜೊತೆ ಬೇಕಾದಂತೆ ಆಟವಾಡಿ ಇದೀಗ ಬಾ ಮಳೆಯೇ ಬಾ ಎಂದು ಆಕಾಶ ನೋಡುತ್ತಾ ತಲೆಮೇಲೆ ಕೈಹೊತ್ತು ಕುಳಿತರೇ ಏನು ಪ್ರಯೋಜನ ಹೇಳಿ. ಒಂದು ಕಡೆ ಕತ್ತೆಗೆ ಮದುವೆ ಮಾಡಿಸುತ್ತಾರೆ, ಮತ್ತೊಂದು ಕಡೆ ಮಕ್ಕಳನ್ನು ಅರ್ಧ ನೆಲದಲ್ಲಿ ಹೂಳಿ ಆಕಾಶ ನೋಡುತ್ತಾರೆ. ಇಷ್ಟಕ್ಕೆ ಮಳೆ ಬರುತ್ತಾ..? ಇವೆಲ್ಲಾ ಅಮಾಯಕರ ಮೂಢನಂಬಿಕೆಗಳು ಅಂತ ನಗಾಡುವ ಬದಲು ಅವರ ಪರಿಸ್ಥಿಯ ಬಗ್ಗೆ ಮರುಕಪಡಬೇಕು. ಇವೆಲ್ಲಾ ಮೂಢನಂಬಿಕೆಗಳು ಎಂದು ಸುಮ್ಮನಾಗಬಹುದು. ಆದರೆ ಕೆಲವು ಕಿಡಿಗೇಡಿಗಳು, ಮತಾಂಧ ರಾಕ್ಷಸರು ಬರಗಾಲದಲ್ಲೂ ಧರ್ಮವನ್ನು ಎಳೆದು ತರುತ್ತಿದ್ದಾರೆ. ದೇಶದಲ್ಲಿ ಬರಗಾಲ ಹೆಚ್ಚುತ್ತಿರುವುದಕ್ಕೆ ಸಾಯಿಬಾಬಾನನ್ನು ಪೂಜಿಸುತ್ತಿರುವುದು, ಮಹಿಳೆಯರು ಶನಿದೇವಸ್ತಾನಕ್ಕೆ ಪ್ರವೇಶ ಮಾಡಿದ್ದೂ ಕಾರಣ ಎನ್ನುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಮೂಢನಂಬಿಕೆಯ ಬೀಜವನ್ನು ಭಿತ್ತಿಧರ್ಮದ ಮರವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಇವರ್ಯಾರಿಗೂ ಬರಗಾಲದ ಬಿಸಿ ತಟ್ಟುತ್ತಿಲ್ಲ. ತಟ್ಟಿದ್ದರೇ ಇವರ ನಾಲಿಗೆ ಅಮೇಧ್ಯ ತಿನ್ನುತ್ತಿರಲಿಲ್ಲ. ಇವುಗಳ ಜೊತೆ ಸರ್ಕಾರಗಳು ಮೋಡ ಬಿತ್ತನೆಯಂತ ಪ್ರಕೃತಿ ವಿರೋಧಿ ನೀತಿಗಳನ್ನು ಅನುಸರಿಸಿದ್ದು ಕೂಡ ಸಮಸ್ಯೆಗೆ ಕಾರಣವಾಗಿದೆ.

ಇವುಗಳ ಜೊತೆಗೆ ರಾಜ್ಯದಲ್ಲಿ ನೀರಿಗಾಗಿ ಅನೇಕ ಹೋರಾಟಗಳು ನಡೆದಿವೆ, ನಡೆಯುತ್ತಿವೆ. ತಮಿಳುನಾಡಿನ ಜೊತೆ ಕಾವೇರಿ ಕಿತ್ತಾಟ ಮುಗಿದಿಲ್ಲ. ಕೋರ್ಟ್ ನಲ್ಲಿ ನಮ್ಮ ಕಡೆ ನ್ಯಾಯ ಇಲ್ಲವಾದ್ದರಿಂದ, ಜೊತೆಗೆ ದೇಶದ ವಿಚಾರವಾಗಿರುವುದರಿಂದ ಹಂಚಿ ಕುಡಿಯುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಪಕ್ಕದ ಗೋವಾವೇಕೋ ನಮ್ಮಂತೆ ಉದಾರ ಮನಸ್ಸು ಮಾಡುತ್ತಿಲ್ಲ. ಹಾಗಿದ್ದಿದ್ದರೇ ಮಹದಾಯಿ ವಿವಾದವೇ ಇರುತ್ತಿರಲಿಲ್ಲ. ಜನರ ಸಂಕಷ್ಟಗಳಿಗೆ ಬಹುಪ್ರಯೋಜನಕಾರಿಯಾಗಿದ್ದ ಕಳಸಾ-ಬಂಡೂರಿ ಅರ್ಥಾತ್ ಮಹದಾಯಿ ಯೋಜನೆ ಜಾರಿಗೆ ಬಂದಿದ್ದರೇ ಸ್ವಲ್ಪಮಟ್ಟಿಗಾದರೂ ಬಯಲುಸೀಮೆಯ ಜನರಿಗೆ ನೀರಿನ ಹಾಹಾಕಾರ ತಪ್ಪುತ್ತಿತ್ತು. ಹಾಗೆಯೇ ಎತ್ತಿನಹೊಳೆ ಯೋಜನೆಗೂ ಪರವಿರೋಧ ಹೋರಾಟಗಳ ನಡೆಯುತ್ತಿವೆ. ನದಿ ತಿರುವು ಯೋಜನೆಯಿಂದ ಭವಿಷ್ಯದಲ್ಲಿ ಮಾರಕ ಪರಿಣಾಮವುಂಟಾಗುತ್ತದೆ ಅಂತ ಕರಾವಳಿ, ಮಲೆನಾಡು ಪ್ರಾಂತ್ಯದ ಜನರು ಹೇಳುತ್ತಿದ್ದರೇ, ಬಯಲುಸೀಮೆಯ ಜನ ಎತ್ತಿನಹೊಳೆ ಯೋಜನೆಯಿಂದ ನೀರಿನ ಹಾಹಾಕಾರ ತಪ್ಪುತ್ತದೆ ಎನ್ನುತ್ತಿದ್ದಾರೆ. ಸರ್ಕಾರ ಎತ್ತಿನಹೊಳೆ ಯೋಜನೆ ಜಾರಿತಂದೇ ಸಿದ್ದ ಎಂದು ರೂಪುರೇಶೆ ಸಿದ್ದ ಮಾಡಿಕೊಂಡು ಇನ್ವೆಸ್ಟ್ ಮೆಂಟ್ ಮಾಡಿದೆಯೇ ಹೊರತು ಏನಾಗುತ್ತಿದೆ ಎಂಬ ಮಾಹಿತಿಯೇ ಇಲ್ಲ. ಒಂದರ್ಥದಲ್ಲಿ ನದಿ ತಿರುವು ಮಾಡುವುದು ಪ್ರಕೃತಿಗೆ ವಿರುದ್ಧವಾದ ಚಿಂತನೆ ಎಂದರೇ ತಪ್ಪಾಗುವುದಿಲ್ಲ. ಭವಿಷ್ಯದಲ್ಲಿ ಅವರಿಗೂ ಇಲ್ಲ, ಇವರಿಗೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಹುಡುಕಬೇಕು.

ಬರೀ ಕುಡಿಯುವ ನೀರಿನ ವಿಚಾರ ಮಾತ್ರವಲ್ಲ. ಜಾಗತೀಕ ತಾಪಮಾನದ ಹೆಚ್ಚಳದಿಂದ ಉತ್ಪಾದನೆಯ ಮಟ್ಟ ಕುಸಿದಿದೆ. ಇಳುವರಿ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಜೊತೆಗೆ ಹಸಿರು ಕ್ರಾಂತಿಯ ಪರಿಣಾಮದಿಂದ ನಿಸರ್ಗದತ್ತ ತಳಿಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಕೀಟನಾಶಕ, ರಾಸಾಯನಿಕ ಗೊಬ್ಬರಗಳನ್ನು ಬೇಡುವ ತಳಿಗಳಾಗಿದ್ದವು. ಅಧಿಕ ನೀರು, ಅಧಿಕ ರಾಸಾಯನಿಕ, ಅಧಿಕ ವಿಷಪೂರಿತ ಕೀಟನಾಶಕಗಳಿಂದ ಈ `ಅಧಿಕ’ ಇಳುವರಿ ಬಂತು. ಸರ್ಕಾರಗಳು, ವಿಜ್ಞಾನಿಗಳು, ಸಂಶೋಧಕರು ಅಧಿಕ ಇಳುವರಿಗಷ್ಟೇ ಪ್ರಚಾರ ಕೊಟ್ಟರೇ ಹೊರತು ಅಧಿಕ ನೀರು, ವಿಷದ ಬಳಕೆಯನ್ನು ಮುಚ್ಚಿಟ್ಟರು. ಇವೆಲ್ಲದರ ಪರಿಣಾಮ ಕೃಷಿ ಉತ್ಪನ್ನ ವ್ಯಾಪಕವಾಗಿ ಕುಸಿದಿದೆ. ವಾಣಿಜ್ಯ ಸಂಸ್ಥೆಗಳು ಜಗತ್ತಿನ ಭವಿಷ್ಯವನ್ನು ರೂಪಿಸಲು ಹೊರಟಿದ್ದು, ಪ್ರಕೃತಿಯನ್ನು ಮೇಲಿಂದ ಮೇಲೆ ಹಿಂಸಿಸಿದ್ದು, ದಯೆ, ದಾಕ್ಷಿಣ್ಯ, ಸಹಿಷ್ಣುತೆ, ಅನುಕಂಪಗಳಂಥ ಕೋಮಲ ಭಾವನೆಗಳನ್ನು ಮೂಟೆ ಕಟ್ಟಿ ಬಿಸಾಡಿದ್ದು, ಲಾಭಗಳಿಕೆ, ಆರ್ಥಿಕ ದಕ್ಷತೆ, ನಿರಂತರ ಅಭಿವೃದ್ಧಿ ಇವು ಆ ಜಗತ್ತಿಗೆ ಮಾರಕವಾಗಿವೆ. ಮರಗಳನ್ನು ಬೆಳೆಸಿ, ವಾತಾವರಣಕ್ಕೆ ಸೇರುತ್ತಿರುವ ರಾಸಾಯನಿಕಗಳನ್ನು ನಿವಾರಿಸುವುದರತ್ತ ಗಮನ ಕೊಡಬೇಕು. ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಪಣತೊಟ್ಟಿರುವ 196 ರಾಷ್ಟಗಳ ಜೊತೆಗೆ ಆಯಾ ದೇಶದ ಪ್ರಜೆಗಳು ಪ್ರಕೃತಿಗೆ ಕ್ಷಮೆ ಕೇಳಿ ಹಿಂದಿನ ಸ್ಥಿತಿಗೆ ತರಲು ಪ್ರಯತ್ನಿಸಬೇಕು. ಇಲ್ಲವೇ, ಬರಗಾಲದಿಂದ ಪ್ರತಿಯೊಬ್ಬರು ಸಾವನ್ನಪ್ಪುವ ಭವಿಷ್ಯಕ್ಕೆ ಮಾನಸಿಕವಾಗಿ ಈಗಿನಿಂದಲೇ ಸಿದ್ದರಾಗಬೇಕು.

https://youtu.be/tUgzYLsSG_g

POPULAR  STORIES :

ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!

ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ ಆ ಹಾಡನ್ನು ಅವರಿಂದ ಮಾತ್ರ ಹಾಡಲು ಸಾಧ್ಯವಾಗಿತ್ತು..!!

`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!

ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ

ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!

`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!

ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...