ಅಲೋಕ್ ಸಾಗರ್.. ಐಐಟಿ ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಹೊಸ್ಟನ್ ಯೂನಿವರ್ಸಿಟಿಯಿಂದ ಮಾಸ್ಟರ್ಸ್ ಡಿಗ್ರಿ ಮತ್ತು ಪಿಎಚ್ಡಿ ಪಡೆದ ಸಾಧಕ. ಅಷ್ಟೇ ಅಲ್ಲ ಐಐಟಿಯ ಮಾಜಿ ಫ್ರೊಫೆಸರ್ ಕೂಡ ಹೌದು. ಆದ್ರೆ ಈಗ ಅಲೋಕ್ ಅವರು ಕಳೆದ 32 ವರ್ಷಗಳಿಂದ ಮಧ್ಯ ಪ್ರದೇಶದ ಕುಗ್ರಾಮ ಒಂದರಲ್ಲಿ ಬದುಕುತ್ತಿದ್ದಾರೆ. ಅಲ್ಲೇ ಆದಿವಾಸಿಗಳ ಜೊತೆಗೆ ಜೀವನ ನಡೆತ್ತಿದ್ದಾರೆ. ಬುಡಕಟ್ಟು ಜನಾಂಗದವರ ಜೊತೆ ಅವರ ಎಲ್ಲಾ ಆಗುಹೋಗುಗಳು ನಡೆದು ಹೋಗುತ್ತಿವೆ. ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದಾಗ ಅಲೋಕ್ ಅವರು ಹಲವು ಬುದ್ಧಿವಂತ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು. ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಅಲೋಕ್ ಸಾಗರ್ ವಿದ್ಯಾರ್ಥಿ ಅನ್ನುವುದು ಅಚ್ಚರಿಯ ವಿಷಯ. ಆದ್ರೆ ಅಲೋಕ್ ಅವರಿಗೆ ಐಐಟಿ ಕೆಲಸ ಇಷ್ಟವಾಗಲಿಲ್ಲ. ಪ್ರೊಫೆಸರ್ ಹುದ್ದೆಗೆ ರಾಜಿನಾಮೆ ನೀಡಿ ಮಧ್ಯಪ್ರದೇಶದ ಬೆತುಲ್ ಮತ್ತು ಹೊಷಂಗಬಾದ್ ಜಿಲ್ಲೆಗಳಲ್ಲಿ ಆದಿವಾಸಿಗಳ ಜೊತೆಗೆ ಕೆಲಸ ಮಾಡಲು ಆರಂಭಿಸಿದರು.
ಕಳೆದ 26 ವರ್ಷಗಳಿಂದ ಅಲೋಕ್ ಕೊಚಮು ಅನ್ನುವ ಕುಗ್ರಾಮದಲ್ಲಿ ಸುಮಾರು 750 ಬುಡಕಟ್ಟು ಕುಟುಂಬಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಅಚ್ಚರಿ ಅಂದ್ರೆ ಕೊಚುಮು ಗ್ರಾಮಕ್ಕೆ ವಿದ್ಯುತ್ ಇಲ್ಲ. ರಸ್ತೆ ಕೂಡ ಸರಿಯಾಗಿಲ್ಲ. ಚಿಕ್ಕದೊಂದು ಪ್ರಾಥಮಿಕ ಶಾಲೆ ಮಾತ್ರ ಈ ಗ್ರಾಮದಲ್ಲಿದೆ. ಅಂದಹಾಗೇ, ವಿದ್ಯಾವಂತರಾಗಿದ್ದ ಅಲೋಕ್ ಇಲ್ಲೇನು ಮಾಡುತ್ತಿದ್ದಾರೆ ಅನ್ನುವ ಸಂಶಯ ನಿಮಗೆ ಕಾಡಬಹುದು. ಅದಕ್ಕೂ ಉತ್ತರವಿದೆ.
ಅಲೋಕ್ ಅವರು ಕಳೆದ 32 ವರ್ಷಗಳಲ್ಲಿ ಕುಗ್ರಾಮದಲ್ಲೇ ಸುಮಾರು 55 ಸಾವಿರ ಮರಗಳನ್ನು ನೆಟ್ಟಿದ್ದಾರೆ. ದೇಶಕ್ಕಾಗಿ ಎಲ್ಲಿ ಬೇಕಾದ್ರೂ ಕೆಲಸ ಮಾಡಬಹುದು ಅನ್ನುವುದನ್ನು ಮಾಡಿ ತೋರಿಸಿದ್ದಾರೆ. ಅಲೋಕ್ ಸರಳತೆ ಎಲ್ಲರಿಗೂ ಮಾದರಿ ಆಗಿದೆ. 3 ಸೆಟ್ ಕುರ್ತಾ, ಒಂದು ಸೈಕಲ್ ಮಾತ್ರ ಹೊಂದಿರುವ ಅಲೋಕ್ ಬುಡಕಟ್ಟು ಜನರಿಗೆ ಕಾಡಿನ ಮಹತ್ವ ಮತ್ತು ಗಿಡಗಳನ್ನು ಬೆಳೆಸುವ ಬಗ್ಗೆ ಹೇಳಿಕೊಡುತ್ತಿದ್ದಾರೆ.
ಅಷ್ಟೇ ಅಲ್ಲ ವಿವಿಧ ಜಾತಿಯ ಗಿಡಗಳ ಬೀಜಗಳನ್ನು ಕೂಡ ಬುಡಕಟ್ಟು ಜನರಿಗೆ ಹಂಚಿ ಮರ ಬೆಳೆಸಲು ನೆರವು ನೀಡುತ್ತಿದ್ದಾರೆ. ಅಲೋಕ್ ಹಲವು ಭಾಷೆಗಳನ್ನು ಮಾತನಾಡಬಲ್ಲರು, ಜೊತೆಗೆ ಬುಡಕಟ್ಟು ಜನರಿಗೆ ಮನಸ್ಸಿಗೆ ಮುಟ್ಟುವಂತೆ ಎಲ್ಲವನ್ನೂ ತಿಳಿಸಬಲ್ಲರು.
ಏನೇ ಹೇಳಿ, ಶ್ರಮಿಕ ಆದಿವಾಸಿ ಸಂಘದ ಜೊತೆ ಕೆಲಸ ಮಾಡುತ್ತಿರುವ ಅಲೋಕ್ ಸಾಗರ್ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ. ಇವರ ಈ ಡಿಗ್ರಿಯ ಮುಂದೆ, ಲಕ್ಷ ಲಕ್ಷ ಖರ್ಚು ಮಾಡಿ, ಡಿಗ್ರಿ ಪಡೆದಿದ್ದೇವೆಂದು ಹಮ್ಮು-ಬಿಮ್ಮು ತೋರ್ಪಡಿಸುವವವರಿಗೂ ಇವರು ಉತ್ತಮ ನಿರ್ದಶನ ಅಲ್ಲವೇ..