ಕನ್ನಡಿಗ ಕೆ.ಎಲ್ ರಾಹುಲ್ ಸದ್ಯ ವಿಶ್ವ ಕ್ರಿ,ಕೆಟ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ಹೆಸರು..! ನೋಡು ನೋಡುತ್ತಿದ್ದಂತೆ ಸ್ಟಾರ್ ಆಟಗಾರನಾಗಿ ಬೆಳೆದಿರುವ ಅವರು ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಯಾವ್ದೇ ಕ್ರಮಾಂಕದಲ್ಲೂ, ಯಾವ್ದೇ ಸಂದರ್ಭದಲ್ಲೂ ಅವಶ್ಯಕತೆಗೆ ತಕ್ಕಂತೆ ಬ್ಯಾಟ್ ಬೀಸಬಲ್ಲರು. ಅವರ ಆ ಸಾಮರ್ಥ್ಯಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಆಗಿಯೂ ಹೆಚ್ಚುವರಿ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ರು.
ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಎಲ್ಲಾ 5 ಪಂದ್ಯಗಳನ್ನು ಗೆದ್ದು ಬೀಗಿತು. ಆ ಸರಣಿಯಲ್ಲಿ ಸರಣಿ ಶ್ರೇಷ್ಠರಾಗಿದ್ದು ಇದೇ ರಾಹುಲ್. ಆಮೇಲೆ ನಡೆದ ಏಕದಿನ ಸರಣಿಯಲ್ಲಿ ಭಾರತ ಮೂರು ಪಂದ್ಯಗಳಲ್ಲೂ ಸೋತು ಕ್ಲೀನ್ ಸ್ವೀಪ್ ಅವಮಾನ ಎದುರಿಸಿತಾದರೂ ರಾಹುಲ್ ಮಾತ್ರ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಟಿ20ಯಲ್ಲಿ ಆರಂಭಿಕ ಆಟಗಾರನಾಗಿ ಮಿಂಚಿದ ಅವರು ಏಕದಿನ ಸರಣಿಯಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು ಕೂಡ ಗಮನಾರ್ಹ. ಯಾವ್ದೇ ಕ್ರಮಾಂಕ ಇರಲಿ ತಂಡಕ್ಕೆ ಅಗತ್ಯವಾಗಿ ನೆರವಾಗ ಬಲ್ಲೆ, ವಿಕೆಟ್ ಕೀಪರ್ ಆಗಿಯೂ ಮೋಡಿ ಮಾಡಬಲ್ಲೆ ಅನ್ನೋದನ್ನು ಮತ್ತೆ ಮತ್ತೆ ಪ್ರೂವ್ ಮಾಡಿದ್ದಾರೆ.
ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿದೆ. ಈ ಸೋಲಿಗೆ ಕಾರಣವಾಗಿದ್ದು, ಬ್ಯಾಟಿಂಗ್ ವೈಫಲ್ಯ. ಟೀಮ್ ಇಂಡಿಯಾ ನಾಯಕ ಕೊಹ್ಲಿ ಸೇರಿದಂತೆ ಯಾರೊಬ್ಬರೂ ಕೂಡ ಅದ್ಭುತ ಪ್ರದರ್ಶನ ನೀಡೇ ಇಲ್ಲ..! ಈ ಸರಣಿಯಲ್ಲಿ ಕ್ಲಾಸ್ಗೂ ಸೈ, ಮಾಸಿಗೂ ಸೈ ಎನಿಸುವ ರಾಹುಲ್ ಅನುಪಸ್ಥಿತಿ ಕಾಡಿದೆ. ಹೀಗಾಗಿ ಮುಂದಿನ ಟೆಸ್ಟ್ ಸರಣಿಗಳಿಂದ ರಾಹುಲ್ ಅವರನ್ನು ಆಡಿಸುವುದು ಬಹುತೇಕ ಖಚಿತ.
ಅಲ್ಲದೆ ಟೀಮ್ ಇಂಡಿಯಾ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಸತತ ರನ್ ಬರ ಎದುರಿಸುತ್ತಿದ್ದಾರೆ. ಧೋನಿ ಇಲ್ಲದ ತಂಡದ ಮುಂದಾಳತ್ವದ ಒತ್ತಡ ಕೊಹ್ಲಿಗೆ ಇದ್ದಿರಬಹುದು. ಅವರ ವೈಫಲ್ಯ ಹೀಗೆ ಮುಂದುವರೆದರೆ ಹೊಸ ನಾಯಕನ ಆಯ್ಕೆಗೆ ಬಿಸಿಸಿಐ ಚಿಂತನೆ ನಡೆಸಬಹುದು. ಆಗ ಮೊದಲ ಆಯ್ಕೆ ಇದೇ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್..!
ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ನಾಯಕರಾಗಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ಫೀಲ್ಡಿಂಗ್ ವೇಳೆ ತಂಡವನ್ನು ಮುನ್ನಡೆಸಿದ್ದು ಇದೇ ಕೆ.ಎಲ್ ರಾಹುಲ್ ಎಂಬುದನ್ನಿಲ್ಲಿ ಸ್ಮರಿಸಬಹುದು. ಹೀಗಾಗಿ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಕೆ ಎಲ್ ರಾಹುಲ್ ನಾಯಕನಾಗುವ ಕಾಲ ಕೂಡ ಸನ್ನಿಹಿತವಾಗಿದೆ ಎಂದರೆ ತಪ್ಪಾಗಲ್ಲ ಅನಿಸುತ್ತದೆ.
ಒಟ್ಟಿನಲ್ಲಿ ನಮ್ಮ ಕರಾವಳಿಯ ಹುಡುಗ ರಾಹುಲ್ ಈಗಾಗಲೇ ಟಿ20, ಏಕದಿನ ಸರಣಿಯಲ್ಲಿ ತಂಡದ ಖಾಯಂ ಸದಸ್ಯರಾಗಿದ್ದು, ಮುಂಬರುವ ಸರಣಿಗಳಿಂದ ಟೆಸ್ಟ್ ಮಾದರಿಗೂ ಖಾಯಂ ಸದಸ್ಯನಾಗಿ ತಂಡಕ್ಕೆ ಆಧಾರವಾಗುವ ಎಲ್ಲಾ ಸಾಧ್ಯತೆ ಹೆಚ್ಚಿದೆ.