ಸದ್ಯ ಎಲ್ಲೆಲ್ಲೂ ಕೊರೋನಾ ವೈರಸ್ ಭೀತಿ. ಕೊರೋನಾ ಹಿನ್ನೆಲೆಯಲ್ಲಿ IPL 2020 ರದ್ದಾಗುತ್ತೆ ಎಂಬ ಮಾತುಗಳು ಕೇಳಿಬಂದಿವೆ. ಚೀನಾದಿಂದ ಹರಡಿದ ಡೆಡ್ಲಿ ಕೊರೋನಾ ವಿಶ್ವದ ನಾನಾ ಕಡೆಗಳಲ್ಲಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಇದುವರೆಗೆ 28ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಬಾರಿಯ IPL ಟೂರ್ನಿ ಸ್ಥಗಿತಗೊಳ್ಳುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಹಬ್ಬಿರುವ ಸುದ್ದಿ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊನೆಗೂ ಮೌನ ಮುರಿದಿದ್ದಾರೆ.
ಟೂರ್ನಿಗೆ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಸೌರವ್ ಗಂಗೂಲಿ, 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗಾಗಲೇ ನಿಗಧಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. ಕೊರೋನಾ ವೈರಸ್ ಹರಡದಂತೆ ಎಲ್ಲಾ ರೀತಿಯ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಐಪಿಎಲ್ ಟೂರ್ನಿ ನಡೆಯಲಿದೆ. ಆರೋಗ್ಯ ಇಲಾಖೆ ಒಡಗೂಡಿ ಕ್ರಮ ಕೈಗೊಂಡಿದ್ದೇವೆ. ಅಭಿಮಾನಿಗಳ ಜೊತೆ ಕೈಕುಲುಕದಂತೆ ಸೇರಿದಂತೆ ಎಲ್ಲಾ ರೀತಿ ಮುತುವರ್ಜಿ ವಹಿಸಲಾಗುವುದು. ಆರೋಗ್ಯ ಇಲಾಖೆ ಸಹಾಯ ಕೂಡ ಕೇಳಿದ್ದೇವೆ ಎಂದು ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.