ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾರ್ವಕಾಲಿಕ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದಾರೆ. ನಿವೃತ್ತಿ ಬಳಿಕ ಸಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ಅವರು, ಇದೀಗ ಭಾರತ ತಂಡವನ್ನು ಪ್ರಕಟಿಸಿ ಸುದ್ದಿಯಲ್ಲಿದ್ದಾರೆ.
ಅಚ್ಚರಿ ಎಂದರೆ ವಾರ್ನ್ ಪ್ರಕಟಿಸಿದ ಸಾರ್ವಕಾಲಿಕ ಭಾರತ ತಂಡದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ , ಹಿಟ್ ಮ್ಯಾನ್ ರೋಹಿತ್ ಶರ್ಮಾಗೂ ಸ್ಥಾನ ನೀಡಿಲ್ಲ..!
ಧೋನಿ ಬದಲು ನಯನ್ ಮೋಂಗಿಯಾ..! : ಭಾರತಕ್ಕೆ ಎರಡೆರಡು ವಿಶ್ವಕಪ್ ತಂದು ಕೊಟ್ಟ ನಾಯಕ , ವಿಶ್ವದ ಬೆಸ್ಟ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ವಾರ್ನ್ ಪ್ರಕಟಿಸಿದ ತಂಡದಲ್ಲಿಲ್ಲ. ಧೋನಿ ಬದಲು ವಿಕೆಟ್ ಕೀಪರ್ ಆಗಿ ನಯನ್ ಮೋಂಗಿಯಾ ಅವರನ್ನು ಆಯ್ಕೆ ಮಾಡಿದ್ದಾರೆ.
ವೀರೋ ಜೊತೆ ಸಿದ್ದು : ಆರಂಭಿಕ ಆಟಗಾರರಾಗಿ ಡ್ಯಾಂಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತು ನವಜೋತ್ ಸಿಂಗ್ ಸಿದ್ದು ಆಯ್ಕೆ ಮಾಡಿದ್ದಾರೆ.
ಇನ್ನುಳಿದಂತೆ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ, ಮೊಹಮ್ಮದ್ ಅಜರುದ್ಧೀನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಾವಗಲ್ ಶ್ರೀನಾಥ್ , ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಇದ್ದಾರೆ.
ಸೌರವ್ ಗಂಗೂಲಿ ನಾಯಕ : ಇನ್ನು ತಂಡದ ಚುಕ್ಕಾಣಿ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಿಡಿಯುತ್ತಿದ್ದಾರೆ. ಭಾರತ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ನಾಯಕ ಗಂಗೂಲಿಯನ್ನು ವಾರ್ನ್ ಸಾರ್ವಕಾಲಿಕ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಮೂವರು ಕನ್ನಡಿಗರು : ವಾರ್ನ್ ಸಾರ್ವಕಾಲಿಕ ಭಾರತ ತಂಡದಲ್ಲಿ ಮೂವರು ಕನ್ನಡಿಗರಿದ್ದಾರೆ. ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ಸ್ಥಾನ ಪಡೆದಿರುವ ಕನ್ನಡಿಗರು.
ತಂಡ ಹೀಗಿದೆ : ವೀರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ (ನಾಯಕ), ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.
ಧೋನಿ, ಕೊಹ್ಲಿ ಕೈ ಬಿಡಲು ಕಾರಣ? : ಧೋನಿ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಈಗಿನ ಸ್ಟಾರ್ ಆಟಗಾರರನ್ನು ತಂಡದಿಂದ ವಾರ್ನ್ ಕೈಬಿಡಲು ಕಾರಣವನ್ನು ಕೂಡ ನೀಡಿದ್ದಾರೆ. ಅವರು ತಮ್ಮ ಸಮಕಾಲೀನ ಕ್ರಿಕೆಟಿಗರನ್ನು ಮಾತ್ರ ಪರಿಗಣಿಸಿ ತಂಡ ಪ್ರಕಟಿಸಿರುವುದಾಗಿ ಹೇಳಿದ್ದಾರೆ.