ಆಶಿಶ್ ನೆಹ್ರಾ … ಭಾರತ ತಂಡದ ಮಾಜಿ ವೇಗಿ .. ವಿಶ್ವಕ್ರಿಕೆಟ್ ನಲ್ಲಿ ದಶಕಕ್ಕೂ ಹೆಚ್ಚು ಕಾಲ ಮಿಂಚಿದ ವೇಗದ ಬೌಲರ್ . ಜಹೀರ್ ಖಾನ್ ಗೆ ವೇಗ ಬೌಲಿಂಗ್ ಜೊತೆಗಾರನಾಗಿ ಭಾರತ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದ ಬೌಲರ್ . ಎದುರಾಳಿ ಬೌಲರ್ ಗಳನ್ನು ಇನ್ನಿಲ್ಲದಂತೆ ಸಿಂಹಸ್ನಪ್ನವಾಗಿ ಕಾಡಿ ಭಾರತಕ್ಕೆ ಸಾಕಷ್ಟು ಗೆಲುವುಗಳನ್ನು ತಂದುಕೊಟ್ಟ ಆಟಗಾರ .
ಈ ಆಶಿಶ್ ನೆಹ್ರಾ ಬರೋಬ್ಬರಿ 15 ವರ್ಷಗಳ ಹಿಂದಿನ ಘಟನೆಯನ್ನು ನೆನೆದಿದ್ದಾರೆ . ಆ ಘಟನೆ ನೆನಪಿಸಿಕೊಂಡು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಕ್ಷಮೆಯಾಚಿಸಿದ್ದಾರೆ .
ಅದು 2005 ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯ . ಆ ಪಂದ್ಯದಲ್ಲಿ ಆಶಿಶ್ ನೆಹ್ರಾ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಕೆಂಡಾಮಂಡಲರಾಗಿದ್ದರು . ಧೋನಿಯ ವಿರುದ್ಧ ಅಂಗಳದಲ್ಲೇ ಫುಲ್ ಗರಂ ಆಗಿದ್ದರು ..!
ಆ ಘಟನೆಯನ್ನು ನೆನೆದು ನೆಹ್ರಾ ಕ್ಷಮೆ ಕೇಳಿದ್ದಾರೆ . ಭಾರತ ನೀಡಿದ್ದ ಗುರಿಯನ್ನು ಪಾಕ್ ಬೆನ್ನಟ್ಟಬೇಕಿತ್ತು. ಆ ವೇಳೆ ನೆಹ್ರಾ ಎಸೆದ ಬಾಲ್ ಪಾಕ್ ಆರಂಭಿಕ ಆಟಗಾರ ಶಾಹಿದ್ ಬ್ಯಾಟನ್ನು ಸವರಿಕೊಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಲಿಪ್ ನಲ್ಲಿದ್ದ ರಾಹುಲ್ ದ್ರಾವಿಡ್ ಅವರಿಬ್ಬರನ್ನು ವಂಚಿಸಿ ಬೌಂಡರಿ ಗೆರೆ ಮುಟ್ಟಿತ್ತು . ಆಗ ತಕ್ಷಣ ಕೋಪಗೊಂಡ ಅಶಿಶ್ ನೆಹ್ರಾ ವಿಕೆಟ್ ಕೀಪರ್ ಧೋನಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು . ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು . ಇಂದಿಗೂ ಆ ವಿಡಿಯೋ ಆಗಾಗ ಮುನ್ನೆಲೆಗೆ ಬಂದು ಪುನಃ ಪುನಃ ವೈರಲ್ ಆಗುತ್ತಿರುತ್ತದೆ . ಈ ಕುರಿತೇ ನೆಹ್ರಾ ಇದೀಗ ಧೋನಿಯ ಕ್ಷಮೆ ಕೋರಿದ್ದಾರೆ .
” ಆ ಸಂದರ್ಭ ನನಗೆ ಸರಿಯಾಗಿ ನೆನಪಿದೆ . ಹೆಚ್ಚಿನವರು ವಿಶಾಪಟ್ಟಣಂನಲ್ಲಿ ನಡೆದ ಘಟನೆ ಎಂದು ಸ್ಮರಿಸಿಕೊಳ್ಳುತ್ತಾರೆ . ಆದರೆ, ಅದು ಅಹ್ಮದಾಬಾದ್ ನಲ್ಲಿ ನಡೆದ ಪಂದ್ಯದ ಸಂದರ್ಭ. ಸರಣಿಯ ನಾಲ್ಕನೇ ಪಂದ್ಯ ಅದಾಗಿತ್ತು . ಅಲ್ಲಿ ನಾನು ಧೋನಿಯನ್ನು ನಿಂದಿಸಿದ ವರ್ತನೆ ನನಗೇ ಬೇಸರ ತರಿಸುತ್ತದೆ ” ಎಂದಿದ್ದಾರೆ .
ಮುಂದುವರೆದು, ” ಈ ಘಟನೆ ಬಳಿಕ ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಲಿಲ್ಲ . ನಂತರವೂ ನಾವಿಬ್ಬರು ಎಂದಿನಂತೆಯೇ ಇದ್ದೆವು ” ಎಂದು ಒಂದುವರೆ ದಶಕದ ಹಿಂದಿನ ಘಟನೆ ನೆನೆದಿದ್ದಾರೆ . ಅಲ್ಲದೆ ಧೋನಿಯ ಕ್ಷಮೆಯನ್ನೂ ಯಾಚಿಸಿದ್ದಾರೆ .
ನೆಹ್ರಾ ಧೋನಿ ನಾಯಕತ್ವದಲ್ಲೂ ಆಡಿದ್ದಾರೆ . ವಿಶ್ವಕಪ್ ವಿಜೇತ ತಂಡದ ಭಾಗವೂ ಆಗಿದ್ದರು .
ಧೋನಿ 2019 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಬಳಿಕ ತಂಡದಿಂದ ದೂರ ಉಳಿದಿದ್ದಾರೆ . ಅವರ ಕಮ್ ಬ್ಯಾಕ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ .
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 29 ರಿಂದ ನಡೆಯಬೇಕಿದ್ದ ಐಪಿಎಲ್ ಸದ್ಯ ಮುಂದೂಡಲ್ಪಟ್ಟಿದೆ . ಬಹುಶಃ ಐಪಿಎಲ್ ನಡೆಯುವುದು ಅನುಮಾನ . ಈ ಐಪಿಎಲ್ ಧೋನಿ ಕಮ್ ಬ್ಯಾಕ್ ಗೆ ವೇದಿಕೆ ಎನ್ನಲಾಗಿತ್ತು . ಇದೀಗ ಧೋನಿ ಭವಿಷ್ಯದ ಬಗ್ಗೆ ಚರ್ಚೆ ಹೆಚ್ಚಿದೆ .