ಲಾಕ್ ಡೌನ್ ಉಲ್ಲಂಘಿಸಿ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!
ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು , ಮಾರಣಾಂತಿಕ ವೈರಸ್ ವಿರುದ್ಧದ ಹೋರಟವಾಗಿ ಲಾಕ್ ಡೌನ್ ಮೊರೆ ಹೋಗಲಿದೆ . ಇಡೀ ದೇಶ ಸದ್ಯ ಲಾಕ್ ಡೌನ್ ಆಗಿದೆ . ಕೊರೋನಾ ಹೆಮ್ಮಾರಿಯ ಮರಣಮೃದಂಗಕ್ಕೆ ಬ್ರೇಕ್ ಹಾಕಲು ಇದು ಅನಿವಾರ್ಯ . ಸಾಕಷ್ಟು ಸಂಕಷ್ಟ ಎದುರಾಗುತ್ತಿದ್ದರೂ ಕೊರೋನಾ ರಕ್ಕಸನ ನಿರ್ಣಾಮಕ್ಕೆ ಇದೊಂದೇ ಮಾರ್ಗ .
ಆದರೆ , ಕೆಲವರು ಲಾಕ್ ಡೌನ್ ಗೆ ಕ್ಯಾರೇ ಎನ್ನುತ್ತಿಲ್ಲ . ತಲೆ ಪ್ರತಿಷ್ಠೆ ಮಾಡುತ್ತಿರುವ ಅಂಥಾ ಅಧಿಕ ಪ್ರಸಂಗಿಗಳಿಗೆ ಖಾಕಿ ಪಡೆ ಬಿಸಿ ಮುಟ್ಟಿಸುತ್ತಿದೆ . ಆದರೂ ಕೆಲವರ ಮೊಂಡುತನಕ್ಕೆ ಬ್ರೇಕ್ ಬಿದ್ದಿಲ್ಲ .
ಇದೀಗ ಒಬ್ಬ ಅಂಥಾ ಅಧಿಕ ಪ್ರಸಂಗಿಗೆ ಆಕೆಯ ಪತ್ನಿಯೇ ಮೈ ಚಳಿ ಬಿಡಿಸಿದ್ದಾಳೆ . ಜಾಲಿ ರೈಡ್ ಹೋದ ಭೂಪನ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ .
ಹೌದು ಲಾಕ್ ಡೌನ್ ಉಲ್ಲಂಘಿಸಿ ಬೈಕಲ್ಲಿ ತಿರುಗಾಡುತ್ತಿದ್ದ ತಲೆಹರಟೆ ವ್ಯಕ್ತಿಗೆ ಆತನ ಪತ್ನಿ ಬಿಸಿ ಮುಟ್ಟಿಸಿದ್ದಾರೆ . ಲಾಕ್ ಡೌನ್ ಗೆ ಡೋಂಟ್ ಕ್ಯಾರ್ ಎಂದು ಜಾಲಿ ರೈಡ್ ಅಂತ ಬೈಕೇರಿ ಸುತ್ತುತ್ತಿದ್ದ ಮಹಾನುಭಾವನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ .
ಈ ಸೋಜಿಗದ ಪ್ರಸಂಗ ನಡೆದಿರುವುದು ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳದಲ್ಲಿ . ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಇದೆ . ಕೇರಳದಲ್ಲಿ ಕೊರೋನಾ ಹಾವಳಿ ಹೆಚ್ಚಿದೆ . ಈ ನಡುವೆ
ವ್ಯಕ್ತಿಯೊಬ್ಬ ತನಗೂ ಲಾಕ್ ಡೌನ್ ಗೂ ಸಂಬಂಧವಿಲ್ಲ ಎಂಬಂತೆ ಪ್ರತಿ ದಿನ ತನ್ನ ಪೋಷಕರ ಮನೆಗೆ ಬೈಕಲ್ಲಿ ಓಡಾಡುತ್ತಿದ್ದ . ಮನೆಯಲ್ಲಿರೋದು ಬಿಟ್ಟು ಹೀಗೆ ಸುತ್ತುವ ಪತಿ ವಿರುದ್ಧ ಸಿಟ್ಟಾದ ಪತ್ನಿ ಸ್ಥಳೀಯ ಠಾಣಾಧಿಕಾರಿಗಳಿಗೆ ಕರೆ ಮಾಡಿ ,ಗಂಡ ಸುತ್ತಾಡುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೀಡಿ ಲಾಕ್ ಡೌನ್ ಉಲ್ಲಂಘನೆ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದಾಳೆ .
ಮಹಿಳೆಯ ದೂರನ್ನು ಆಲಿಸಿದ ಪೊಲೀಸರು ಇದೊಂದು ಕೌಟುಂಬಿಕ ಕಲಹ ಇರಬಹುದು ಎಂದು ಮಹಿಳೆಯ ಮನವೊಲಿಸುವ ಪ್ರಯತ್ನ ಮಾಡಿದರು . ಆದರೆ, ಅದಕ್ಕೆ ಒಪ್ಪದ ಮಹಿಳೆ ಪತಿ ಹೊರಗಡೆ ಓಡಾಡುತ್ತಲೇ ಇದ್ದರೆ ಆತ ಕೂಡ ಕೊರೋನಾ ಸೋಂಕಿಗೆ ತುತ್ತಾಗಿ , ತನಗೂ ಸೋಂಕು ತಗುಲಬಹುದು . ಆದ್ದರಿಂದ ಆತನ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ . ಪತ್ನಿಯ ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪತಿರಾಯನಿಗೆ ಪೊಲೀಸರು ಆರಕ್ಷಕರು ನೋಟಿಸ್ ನೀಡಿದ್ದಾರೆ .
ಒಂದು ದೃಷ್ಟಿಯಲ್ಲಿ ಕೆಲವರು ಮಹಿಳೆಯ ವರ್ತನೆಯನ್ನು ಅತಿರೇಕ ಎನ್ನಬಹುದು . ಆದರೆ ಇಂಥಾ ಸಂದರ್ಭದಲ್ಲಿ ಎಚ್ಚರ ಮುಖ್ಯ . ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು . ಸರ್ಕಾರ ಲಾಕ್ ಡೌನ್ ಘೋಷಿಸಿರುವುದು ತಮಾಷೆಗಲ್ಲ, ಬೇರೆ ಕೆಲಸ ಏನೂ ಇಲ್ಲ ಅಂತಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣ ಬೇಕು .