ಇವರಿಗೆ 85 ವಯಸ್ಸು ದಾಟಿದೆ. ಆದ್ರೆ ಕೈ ನಡುಗುವುದಿಲ್ಲ. ಉತ್ಸಾಹವಿನ್ನೂ ಕಡಿಮೆಯಾಗಿಲ್ಲ. ಇಟ್ಟ ಗುರಿ ಎಂದಿಗೂ ತಪ್ಪಿಲ್ಲ. ಒಂದೇ ಏಟು.. ಮಟಾಷ್..! ಅಂತಾರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡಿರೋ ಇವರ ಮುಂದೆ ತರುಣ-ತರುಣಿಯರೇ ಸೋಲೊಪ್ಪಿಕೊಂಡಿದ್ದಾರೆ!
ಶರೀರಕ್ಕೆ ವೃದ್ಧಾಪ್ಯ ಬಂದಿರಬಹುದು ಆದರೆ ಮನಸ್ಸಿಗಲ್ಲ ಎಂಬುದನ್ನು ನಿರೂಪಿಸಿದ್ದಾರೆ ಅಜ್ಜಿ. ಇವರು ಶೂಟರ್ ದಾದಿ, ರಿವಾಲ್ವರ್ ದಾದಿ ಅಂತಲೇ ವಿಶ್ವ ವಿಖ್ಯಾತಿ ಪಡೆದಿದ್ದಾರೆ. ಅಂದಹಾಗೇ ಈ ಅಜ್ಜಿಯ ಹೆಸರು ಚಂದ್ರೋ ತೋಮರ್ ಅಂತ. ಇಳಿವಯಸ್ಸಿನಲ್ಲಿಯೂ ಯುವ ಸಮುದಾಯವೇ ನಾಚಿಸುವಂತೆ ಶಾರ್ಪ್ ಶೂಟಿಂಗ್ನಲ್ಲಿ ಪರಿಣಿತಿ ಹೊಂದಿದ್ದಾರೆ. ಇವರು ಇಟ್ಟ ಗುರಿ ಇದುವರೆಗೂ ಒಂದೂ ತಪ್ಪಿಲ್ಲವಂತೆ.
ವಿಶ್ವದ ಅತ್ಯಂತ ಹಿರಿಯ ಶಾರ್ಪ್ಶೂಟರ್, ಅದರಲ್ಲೂ ಮಹಿಳಾ ಶಾರ್ಪ್ಶೂಟರ್ ಎಂಬ ಹೆಗ್ಗಳಿಕೆಗೆ ಇವರದ್ದು. ಇವರು ಉತ್ತರ ಪ್ರದೇಶದ ಬಾಗ್ವತ್ ಜಿಲ್ಲೆಯ ಜೋಹ್ರಿ ಗ್ರಾಮದವರು. ಜೋಹ್ರಿ ಗ್ರಾಮ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ಕಾರಣ ಚಂದ್ರೋ ತೋಮರ್ ಅವ್ರು ಈ ಇಳಿವಯಸ್ಸಿನಲ್ಲಿ ಮಾಡಿರುವ ಸಾಧನೆಯಿಂದ.
ಇವರಿಗೆ ಹೆಚ್ಚು ಪ್ರೀತಿ ಪಿಸ್ತೂಲ್ ಮೇಲೆಯೇ. ಸೂರ್ಯೋದಯವಾಗುತ್ತಿದ್ದಂತೆಯೇ ದಿನ ನಿತ್ಯದ ಚಟುವಟಿಕೆ ಪ್ರಾರಂಭಿಸುವ ರಿವಾಲ್ವರ್ ದಾದಿ. ರಾತ್ರಿ ಮಲಗೋವರೆಗೂ ಪಿಸ್ತೂಲ್ ಕೈಗೆ ಅಂಟಿಕೊಂಡಿರುತ್ತೆ. ಪಿಸ್ತೂಲ್ ಇವರಿಗೆ ಚಿಕ್ಕ ಮಕ್ಕಳು ಆಟವಾಡುವ ವಸ್ತುವಿದ್ದ ಹಾಗೆ. ಯಾವುದೇ ಭಯವಿಲ್ಲದೆ ಲೀಲಾಜಾಲವಾಗಿ ಬಳಸುತ್ತಾರೆ.
ಅದು 1998ರ. ಅಜ್ಜಿಯ ಮೊಮ್ಮಗಳು ತಾನು ಒಳ್ಳೆಯ ಶೂಟರ್ ಆಗಬೇಕೆಂಬ ಬಹುದೊಡ್ಡ ಕನಸಿನಿಂದ ತರಬೇತಿ ಪಡೆಯಲು ಗ್ರಾಮದಲ್ಲಿದ್ದ ಜೋಹ್ರಿ ರೈಫಲ್ ಕ್ಲಬ್ ಸೇರಿಕೊಂಡಿದ್ದಳು. ಆದ್ರೆ, ಕ್ಲಬ್ನಲ್ಲಿ ಹೆಚ್ಚಿಗೆ ಯುವಕರೇ ಇದ್ದುದ್ದರಿಂದ ಮೊಮ್ಮಗಳಿಗೆ ಕಲಿಯಲು ಮುಜುಗರವಾಗುತ್ತಿತ್ತು. ಈ ವಿಷಯನ್ನು ತನ್ನಜ್ಜಿಯಾದ ಚಂದ್ರೋ ತೋಮರ್ ಬಳಿ ಹೇಳಿಕೊಂಡಾಗ ಅದಕ್ಕೇನಂತೆ ನಾನಿದ್ದೀನಿ ಎಂದು ಶೂಟಿಂಗ್ ಕ್ಲಾಸ್ ಮುಗಿಯವರೆಗೂ ಜೊತೆಯಲ್ಲಿಯೇ ತಾನು ಕೂಡ ಕಾಲ ಕಳೆಯುತ್ತಿದ್ರು.
ಒಂದು ದಿನ ಮೊಮ್ಮಗಳು ಬಂದೂಕನ್ನು ಲೋಡ್ ಮಾಡಲು ಮುಂದಾಗಿದ್ರು. ಆದ್ರೆ ಏನು ಮಾಡಿದ್ರು ಗನ್ ಲೋಡ್ ಆಗುತ್ತಲೇ ಇರಲಿಲ್ಲ. ಮೊಮ್ಮಗಳ ಒದ್ದಾಟವನ್ನು ನೋಡಲಾಗದೆ ಅಲ್ಲಿಗೆ ಬಂದು ಗನ್ ತೆಗೆದುಕೊಂಡು ಲೋಡ್ ಮಾಡಿದ್ದಲ್ಲದೆ ಬುಲ್ಸ್ ಐ ಗೆ ಗುರಿ ಇಟ್ಟು ಹೊಡೆದ್ರು.
ರೈಫಲ್ ಕ್ಲಬ್ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿ ಕಲಿಸುತ್ತಿದ್ದ ಶೂಟಿಂಗ್ ತರಬೇತುದಾರರಿಗೂ ಅಚ್ಚರಿಯಾಗಿತ್ತು. ಎಲ್ಲರೂ ತಬ್ಬಿಬ್ಬಾಗಿ ಹೋದರು. ಅಜ್ಜಿ ಬಂದೂಕಿನ ಗುರಿಯ ನಿಗಧಿತ ಸ್ಥಳಕ್ಕೆ ಗುರಿಯಿಟ್ಟು ಒಡೆದ ಅಜ್ಜಿಯ ಗುರಿಗೆ ತಾವೇ ಬಲಿಯಾದವರಂತೆ ಸ್ತಬ್ಧವಾದರು. ಅದು ರಿವಾಲ್ವರ್ ದಾದಿಯ ಮೊದಲ ಗುರಿ ಎಂದು ಯಾರೂ ಊಹಿಸುವುಕ್ಕೂ ಅಸಾಧ್ಯ ಎಂಬಂತೆ ಗುರಿ ತಲುಪಿದ್ದರು.
ಚಂದ್ರತೋಮರ್ ಮೊದಲ ಸ್ಪರ್ಧೆಗೆ ತಮ್ಮ ಮೊಮ್ಮಗಳ ಜೊತೆಗೆ ಅಂಜಿಕೆಯಿಂದಲೇ ಹೋದರು. ಅಲ್ಲಿ ಇವರನ್ನು ಅನುಭವಿ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಯಿತು. ದಾದಿ ಜೊತೆ ಸ್ಫರ್ದಿಸಿದ್ದವರಲ್ಲಿ ಬಹುತೇಕರು ಶೂಟಿಂಗ್ನಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದವರು. ಚಾಂಪಿಯನ್ಶಿಪ್ಗಳಲ್ಲಿ ಗೆದ್ದವರು. ಇವರೆಲ್ಲರಿಗೂ ಸೋಲಿನ ರುಚಿ ತೋರಿಸಿ ಚಂದ್ರೋ ತೋಮರ್ ಗೆದ್ದು ಬೀಗಿದರು.
ರೈಫಲ್ ಕ್ಲಬ್ನಲ್ಲಿ ತನ್ನ ಮೊದಲ ಗುರಿಯಿಂದ ಶುರುವಾದ ಚಂದ್ರೋತೋಮರ್ರವರ ಶಾರ್ಪ್ಶೂಟಿಂಗ್ ಜರ್ನಿ ಇಂದು ವಿಶ್ವಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಶಾರ್ಪ್ಶೂಟರ್ ದಾದಿ ಚಂದ್ರೋತೋಮರ್ ಅವರನ್ನು ಶೂಟಿಂಗ್ನಲ್ಲಿ ಮೀರಿಸುವವರೇ ಇಲ್ಲ. 25ಕ್ಕೂ ಹೆಚ್ಚು ಚಾಂಪಿಯನ್ಶಿಪ್ಗಳನ್ನು ಗೆದ್ದುಕೊಂಡ ಅತ್ಯದ್ಭುತ ಶಾರ್ಪ್ಶೂಟರ್ ಈಕೆ. ರಿವಾಲ್ವರ್ ದೀದಿ ಸ್ಫರ್ಧಾಳಾಗಿ ಸ್ಪರ್ಧಿಸಿದ ಎಲ್ಲಾ ಸ್ಫರ್ಧೆಗಳಲ್ಲಿಯೂ ವಿಜಯಶಾಲಿಯಾಗಿ ಮಿಂಚಿದ್ದರು.
2010ರಲ್ಲಿ ನಡೆದ ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್ನಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಏಕೈಕ ಮಹಿಳೆ ಎನ್ನಿಸಿಕೊಂಡರು. ದೇಶಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಟ್ಟಿದಲ್ಲದೆ 82 ವರ್ಷವಾದರೂ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವ ದಾದಿ ಗೆದ್ದು ಪಡೆದ ಪದಕಗಳ ಸಂಖ್ಯೆ 146ಕ್ಕೂ ಹೆಚ್ಚಿದೆ. ಪದಕಗಳು ಅಜ್ಜಿಯ ಶಾರ್ಪ್ ದೃಷ್ಟಿಗೆ ಸಾಕ್ಷಿ ತೋರಿಸುತ್ತಿವೆ. ದಾದಿ ಈಗ ಎಲ್ಲಿ ಮೊದಲ ಪಿಸ್ತೂಲ್ ಪ್ರಯೋಗ ಮಾಡಿದರೋ ಅದೇ ಕ್ಲಬ್ನಲ್ಲೀಗ ಮುಖ್ಯ ಕೋಚ್!
ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ.. ನನ್ನ ಶರೀರಕ್ಕೆ ಮಾತ್ರ ವಯಸ್ಸಾಗಿರೋದು ಮನಸ್ಸಿಗಲ್ಲ ಎಂಬುದನ್ನು ರಿವಾಲ್ವಾರ್ ದಾದಿ ಚಂದ್ರೋತೋಮರ್ ನಿರೂಪಿಸಿದ್ದಾರೆ. 82ರ ಹರೆಯದಲ್ಲೂ ನನ್ನ ಉಸಿರಿರುವ ತನಕ ನಾನು ಗುಂಡು ಹಾರಿಸುತ್ತೇನೆ ಎಂದು ಹೇಳುವ ಶಾರ್ಪ್ಶೂಟರ್ ರಿವಾಲ್ವರ್ ದಾದಿಗೆ ನಮ್ಮದೂ ಒಂದು ಸಲಾಮ್..