ಇವರೇ ನೋಡಿ ‘ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ಡಾಕ್ಟರ್..!

Date:

ಇವರ ತಂದೆ ವೈದ್ಯಕೀಯ ಸೌಲಭ್ಯವೇ ಸಿಗದೆ ಕಣ್ಣೆದುರೇ ಕೊನೆಯುಸಿರೆಳೆಯುತ್ತಾರೆ. ವೈದ್ಯರಿಂದ ಅವಕಾಶ ವಂಚಿತರಿಗೆ ವೈದ್ಯಕೀಯ ಸೌಲಭ್ಯ ದೊರಕಿಸಿ ಕೊಡಲು ಅಂದೇ ಸಂಕಲ್ಪ ತೊಟ್ಟರು. ಅಂದುಕೊಂಡಂತೆ ವೈದ್ಯರಾಗಿ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ನೀಡ್ತಿದ್ದಾರೆ. ಅಷ್ಟೇ ಏಕೆ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಸಹಸ್ರಾರು ಹಿರಿಯರಿಗೆ ಊರುಗೋಲಾಗಿದ್ದಾರೆ…!! ಅವರ್ಯಾರು ಗೊತ್ತೆ?

ಅವರೇ ನಮ್ಮ ರಾಜ್ಯದ ಹೆಸರಾಂತ ವೈದ್ಯರಾದ ಹೆಮ್ಮೆಯ ಪುತ್ರ ಡಾ. ಎಚ್. ಸುದರ್ಶನ್ ಅವರು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮಾಜಿ ಸದಸ್ಯರು ಹೌದು. ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಲ್ಲಿ ಗಿರಿಜನರ ಅಭಿವೃದ್ಧಿಕಾರರು. ಈ ಸೇವೆಗಾಗಿಯೇ ವಿಶ್ವದ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಲ್ಪಟಿರುವ ‘ರೈಟ್ ಲೈವ್ಲಿ ಹುಡ್ ಪ್ರಶಸ್ತಿಗೆ ಭಾಜರಾಗಿ ವಿಶ್ವದೆಲ್ಲೆಡೆ ಕರ್ನಾಟಕದ ಕೀರ್ತಿಯನ್ನು ಬೆಳಗಿದ್ದಾರೆ.

ಇವರು ಹುಟ್ಟಿದ್ದು ಬೆಂಗಳೂರಿನ ಬಳಿಯ ಯಮಲೂರು ಎಂಬ ಪುಟ್ಟ ಹಳ್ಳಿಯಲ್ಲಿ. ಅದು 1950ರಲ್ಲಿ. ತಂದೆ ಹನುಮಪ್ಪ ರೆಡ್ಡಿ, ತಾಯಿ ಚಿನ್ನಮ್ಮ ಅವರ ಸುಪುತ್ರರಾಗಿ ಅಂದು ಆರೋಗ್ಯದ ಮೂಲಭೂತ ಸೌಲಭ್ಯಗಳೆ ಇಲ್ಲದ ಪ್ರದೇಶದಲ್ಲಿ. ಬಾಲಕರಿದ್ದಾಗ ವೈದ್ಯಕೀಯ ಸೌಲಭ್ಯವಿಲ್ಲದೆ ತಂದೆ ಕಣ್ಣೆದುರೇ ಕೊನೆಯುಸಿರೆಳೆದರು. ಆ ಘಟನೆ ಅವರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿಯಿತು. ಅದು ಮುಂದೆ ಸಾರ್ಥಕದ ಸೇವೆಗೆ ಕಾರಣವಾಯಿತು.

ನೋಡಿ, ಡಾ. ಎಚ್. ಸುದರ್ಶನ್ ಅವರು, ಶಾಲೆಗೆ ಸೇರಿ ವಿದ್ಯಾಭ್ಯಾಸ ಆರಂಭಿಸಿದ ಇವರು ತಮ್ಮ ಬುದ್ಧಿಮತ್ತೆಯಿಂದಾಗಿ ಶಾಲೆಯಲ್ಲಿ ಡಬಲ್ ಪ್ರಮೋಷನ್ ಪಡೆದರು. ವೈದ್ಯಕೀಯ ಶಿಕ್ಷಣ ಪಡೆಯಲು ಕನಿಷ್ಟ 16 ವರ್ಷ ಆಗಬೇಕು ಎಂಬ ಕಾರಣದಿಂದ ಬೆಂಗಳೂರಿನ ಕೃಷ್ಣಪ್ಲೋರ್ ಮಿಲ್ಲಿನಲ್ಲಿ ಗುಮಾಸ್ತನಾಗಿ 110 ರೂ, ಸಂಬಳಕ್ಕೆ ಒಂದು ವರ್ಷ ಕೆಲಸ ಮಾಡಿ, ನಂತರ ಆ ಸಂಬಳದಿಂದ ವೈದ್ಯಕೀಯ ಕಾಲೇಜು ಪ್ರವೇಶ ಪಡೆದು ಶಿಕ್ಷಣದ ವೆಚ್ಚ ಭರಿಸಿ ಅಧ್ಯಯನ ಮಾಡಿ ವೈದ್ಯರಾದರು.

ಬೆಂಗಳೂರಿನಲ್ಲಿ ದೊರಕಿದ ರಾಮಕೃಷ್ಣಾಶ್ರಮದ ಸಂಪರ್ಕ, ಬದುಕಿಗೆ ಬಹು ದೊಡ್ಡ ತಿರುವನ್ನು ನೀಡಿತು. ಆಗ ದೊರಕಿದ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಜೀವನಚರಿತ್ರೆಗಳನ್ನು ಓದಿ ಪ್ರಭಾವಿತರಾದರು. ‘ They alone live for others, Others are more Dead than alive ಎಂಬಂತೆ ಕಾರ್ಯಪ್ರವೃತ್ತರಾಗಿದ್ದಾರೆ. ಬಂಗಾಳದಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದರು. ತಾಯಿಯವರ ಅನಾರೋಗ್ಯದ ಕಾರಣ ಬೆಂಗಳೂರಿಗೆ ವಾಪಸ್ಸಾಗಬೇಕಾಯಿತು.

ಡಾ. ಸುದರ್ಶನ್ ಅವರು, ಮೆಡಿಕಲ್ ಇಂಟರ್ನ್ಶಿಪ್ ನಂತರ ನೀಲಗಿರಿಯಲ್ಲಿ ಡಾ.ನರಸಿಂಹನ್ ಅವರ ಕಾರ್ಯವನ್ನು ನೋಡಿ ಸ್ಫೂರ್ತಿ ಪಡೆದರು. 1979ರಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಆಗಮಿಸಿ, ಇಲ್ಲಿನ ಗಿರಿಜನರೊಡನೆ ತಮ್ಮ ಬದುಕನ್ನು ನಿಶ್ಚಯಿಸಿಕೊಂಡರು. ಅವಕಾಶ ವಂಚಿತರಿಗೆ ವೈದ್ಯಕೀಯ ನೆರವು ನೀಡುವ ಆಶಯದ ಫಲಸ್ವರೂಪವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸ್ಥಾಪನೆ, ಅಂದು ಗುಡಿಸಲಿನಲ್ಲಿ, ಸ್ವಂತ ಜಮೀನಿಲ್ಲದೆ ಕೇವಲ 5 ಸಾವಿರ ರೂಪಾಯಿಗಳ ಇಡುಗಂಟಿನೊಂದಿಗೆ ಆರಂಭವಾದ ಕೇಂದ್ರ ಇಂದು 20 ಹಾಸಿಗೆಯ ಆಸ್ಪತ್ರೆ ಆಗಿ ಕಾರ್ಯನಿರ್ವಹಿಸುತ್ತಿದೆ.

ಇಂದು ಸಮಾಜ, ಶಿಕ್ಷಣ, ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ಪೂರಕ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಐದು ರಾಜ್ಯಗಳಲ್ಲಿ ಕರುಣಾ ಟ್ರಸ್ಟ್ ರಚಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಅನುಪಯುಕ್ತವಾಗಿದ್ದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿವೇಕಾನಂದ ಕೇಂದ್ರ ವಹಿಸಿಕೊಂಡು ಸರಕಾರದ ವೆಚ್ಚ ಶೇಕಡಾ 90 ರಷ್ಟು ವೆಚ್ಚದಲ್ಲಿ ರಾಜ್ಯದ 26 ಪ್ರಾಥಮಿಕ ಕೇಂದ್ರಗಳನ್ನು ಕರುಣಾ ಟ್ರಸ್ಟ್ ಮೂಲಕ ನಡೆಸಲಾಗುತ್ತಿದೆ.

ಇದೇ ಮಾದರಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಹಾಗೂ ಮೇಘಾಲಯ, ಒರಿಸ್ಸಾ ಆಂಧ್ರಪ್ರದೇಶಗಳಲ್ಲಿ ಸಹಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಲಾಗುತ್ತಿದೆ. ಇದೀಗ ಇವುಗಳ ಯಶಸ್ಸನ್ನು ಕಂಡು ಇನ್ನೂ ಹತ್ತು ರಾಜ್ಯಗಳು ತಮ್ಮ ರಾಜ್ಯಕ್ಕೆ ಈ ಸೇವೆ ವಿಸ್ತರಿಸಲು ಆಹ್ವಾನಿಸಿವೆ.

ಗಿರಿಜನರಿಗೆ ಅಂದು ಕೃಷಿ ಭೂಮಿ ಇರಲಿಲ್ಲ. ಗಿರಿಜನರಿಗೆ ಜಮೀನು ದೊರಕಿಸುವ ಯಶಸ್ವಿ ಹೋರಾಟದಲ್ಲಿ ಜೈಲುವಾಸವನ್ನು ಅನುಭವಿಸಬೇಕಾಯಿತು. ಲ್ಯಾಂಡ್ ಸೊಸೈಟಿ ಆರಂಭಿಸಿ, ಅರಣ್ಯ ಉತ್ಮನ್ನಗಳ ಮಾರಾಟ ಮಾಡುವ ಮೂಲಕ ಅಲ್ಲಿನ ಜನರಿಗೆ ಆರ್ಥಿಕ ಸ್ವಾಯತ್ತತೆ ಒದಗಿಸಿದ್ದಾರೆ. ಇವೆಲ್ಲವುಗಳ ಪರಿಣಾಮವಾಗಿ ಇಲ್ಲಿನ ಶೇಕಡ 60ರಷ್ಟು ಜನರು ವರ್ಷಕ್ಕೆ ಕನಿಷ್ಟ 300 ದಿನಗಳ ಉದ್ಯೋಗ ಪಡೆದಿದ್ದಾರೆ. ಹೀಗೆ ಮಹಾತ್ಮ ಗಾಂಧಿಜೀಯವರ ಗ್ರಾಮಸ್ವರಾಜ್ಯವನ್ನು ಸಾಕಾರಗೊಳಿಸುತ್ತಿದ್ದಾರೆ.

ಗಿರಿಜನ ಕೇಂದ್ರ ನಡೆಸುತ್ತಿರುವ ಶಾಲೆಗಳಲ್ಲಿ ಸುಮಾರು 500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೊದಲ ತಂಡದಲ್ಲಿದ್ದ ಆರು ವಿದ್ಯಾರ್ಥಿಗಳ ಪೈಕಿ ನಾಲ್ವರು ಇಂದು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇನ್ನೊಂದು ವಿಶೇಷ ಎಂದರೆ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಇಂದಿನ ಅಧ್ಯಕ್ಷರಾದ ಜಡೇಗೌಡು ಮೊದಲ ತಂಡದ ವಿದ್ಯಾರ್ಥಿ, ಪಿಎಚ್ಡಿ ಪದವಿ ಪಡೆದು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ 2000ನೇ ಸಾಲಿನಲ್ಲಿ ನಮ್ಮ ಕರ್ನಾಟಕ ಸರಕಾರವು ಡಾ.ಎಚ್. ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಯೋಜನೆಯ Task Force on Health & Family Welfare ರಚಿಸಿತು. ಅದರ ಶಿಫಾರಸ್ಸುಗಳನ್ನು ಶೇಕಡ 65 ರಷ್ಟು ಅನುಷ್ಠಾನಗೊಳಿಸಿದೆ. ಆರೋಗ್ಯ ಕ್ಷೇತ್ರದ ಭ್ರಷ್ಠಾಚಾರಗಳನ್ನು ಕೊನೆಗಾಣಿಸಲು ಕರ್ನಾಟಕ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗಡೆಯವರ ಜೊತೆ ಸಮಿತಿ ಸದಸ್ಯರಾಗಿ ಶ್ರಮಿಸಿದ್ದಾರೆ.

ಡಾ. ಎಚ್. ಸುದರ್ಶನ್ ಅವರ ಗಿರಿಜನರ ಸೇವೆಯನ್ನು ಗುರುತಿಸಿ ದೇಶ ವಿದೇಶಗಳಿಂದ ಸ್ನೇಹಿತರು, ಹಿತೈಷಿಗಳು ತಮ್ಮ ತನು-ಮನ-ಧನಗಳಿಂದ ನೆರವಾಗುತ್ತಿದ್ದಾರೆ. ಅವರಿಗೆ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೆ ಗುರುತಿಸಲ್ಪಡುವ “ರೈಟ್ ಲೈವ್ಲಿಹುಡ್ ಪ್ರಶಸ್ತಿ ಲಭಿಸಿದೆ ಹಾಗೂ ‘ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹೀಗೆ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ. ಇಷ್ಟೆಲ್ಲ ಇದ್ದರೂ ಅವರು ಪ್ರಚಾರದಿಂದ ಬಲು ದೂರ..!

“ ನಾವು ಅತ್ಯಂತ ಸುಸಂಸ್ಕೃತರು ಎಂದು ಹೇಳಿಕೊಳ್ಳುವ ಸಮಾಜ, ಅವಕಾಶ ವಂಚಿತ ಆದಿವಾಸಿ ಜನಾಂಗಗಳಿಂದ ಕಲಿಯಬೇಕಿರುವುದು ಬಹಳಷ್ಟು ಇದೆ ” ಎಂದು ಡಾ. ಸುದರ್ಶನ್ ಸೌಜನ್ಯದಿಂದ ಹೇಳುತ್ತಾರೆ. ಈ ಮಾತು ಎಲ್ಲೋ ನಮ್ಮನ್ನು ತಟ್ಟುವಂತಿದೆಯೇನೋ ಅನಿಸುತ್ತಿದೆ. ಅಲ್ಲವೇ..!?

 

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...