ಹಿಂದಿನ ದಿನ ದಾರಿಯಲ್ಲಿ ಬರುವಾಗ ಮಳೆಯಲ್ಲಿ ಮಿಂದು ಮಳೆಯ ಹನಿಗಳ ಜೊತೆ ಆಟವಾಡಿ ನೆಂದು ನಿಂತಿದ್ದೆ. ತಲೆ ಒರೆಸಿಕೊಂಡು ಬಿಸಿ-ಬಿಸಿ ಟೀ ಕುಡಿದು ಬರುವಷ್ಟರಲ್ಲಿ ಶುರುವಾಗಿತ್ತು ನೆಗಡಿ ಜ್ವರ.
ಇಷ್ಟಾದ್ರೆ ಸಾಕಲ್ವಾ.. ಶುರುವಾಯ್ತು ಅಮ್ಮನ ಬೈಗುಳದ ರಾಗ. ಮನೆ ಮದ್ದುಗಳನ್ನೆಲ್ಲಾ ತಯಾರಿಸಿ ಮೂಗು ಹಿಡಿದು ಬಾಯಿ ಆ್ಞಂ ಮಾಡಿಸಿ ಹೊಯ್ದೇ ಬಿಟ್ಟಳು ಕಹಿ ಮದ್ದನ್ನು.
ಅಷ್ಟಾದ್ರೂ ಅಮ್ಮನಿಗೆ ಸಮಾಧಾನವೇ ಆಗದೇ, ಆಸ್ಪತ್ರೆಗೂ ಕರೆದೊಯ್ದಳು. ಮೊದಲೇ ಆಸ್ಪತ್ರೆಯೆಂದರೆ ನರಕ ಯಾತನೆ. ಔಷಧಗಳ ವಾಸನೆಗೆ ವಾಕರಿಕೆ ಬರುವಷ್ಟರ ಮಟ್ಟಿಗೆ.
ಆದರೆ ಅಂದು ಹಾಗಿರಲಿಲ್ಲ. ಆಸ್ಪತ್ರೆಯ ಸುತ್ತ ಗಂಧದ ಹೂವಿನ ಪರಿಮಳ. ಆಶ್ಚರ್ಯವಾಯಿತು! ವೈದ್ಯರನ್ನು ಭೆಟಿಯಾಗಲು ತೆರಳಿದೆ. ಬಾಗಿಲ ಬಲ ಭಾಗದಲ್ಲಿ ಖುರ್ಚಿಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕೈಯ್ಯಲ್ಲಿ ಪೆನ್ನು ಹಿಡಿದು, ಬಿಳಿಯ ಕೋಟು ಧರಿಸಿ ಕೂತಿದ್ದರು.
ಸುಂದರ ಆ ತರುಣ, ಡಾಕ್ಟರ್ ಅಂದ್ರೆ ಹಿಂಗಿರ್ಬೇಕು, ನೋಡೋರೊಳಗೆ ಕಾಯಿಲೆ ಮರೆತು ಹೋಗುವಂತೆ ಅನ್ನಿಸಿತು. ಕೆನ್ನೆಯಲ್ಲೊಂದು ಚೆಂದದ ಗುಳಿ ಬೇರೆ. ಆ ಗುಳಿಗೆನ್ನೆ ಡಾಕ್ಟರಿಗೆ ನಾನು ಮನ ಸೋತಿದ್ದೆ. ಅವರನ್ನೇ ನೋಡುತ್ತ ಕುಳಿತ ನನಗೆ ಅವರು ಹೇಳಿದ ಮಾತ್ರೆಗಳ ವಿವರವೂ ಗಮನಕ್ಕೆ ಬರಲಿಲ್ಲ.
ಸುಂದರಾಂಗ ವೈದ್ಯರು ಒಂದಿಷ್ಟು ಮಾತ್ರೆಗಳನ್ನು ಬರೆದುಕೊಟ್ರು.
ಆ ಮಾತ್ರೆಗಳೋ ಸಿಹಿ ಪೇಪ್ಪರ್ ಮೆಂಟ್ ಅಂತ ಅನ್ನಿಸ್ತಿತ್ತು. ಯಾಕೆ ಇವರು ಚಾಕಲೇಟ್ ನು ನನಗೆ ನೀಡ್ತಾ ಇದ್ದಾರೆ ಎಂಬ ಗೊಂದಲ ಮೂಡಿದಂತಿತ್ತು. ಆ ಕ್ಷಣದಲ್ಲೇ ಡಾಕ್ಟ್ರೇ ಇದ್ಯಾಕೆ ಮಾತ್ರೆ ಬದಲು ಸಿಹಿ ಚಾಕಲೇಟ್ ಅಂತ ಕೇಳಬೇಕಿತ್ತು! ಅದ್ಯಾಕೋ ಅಂದು ನಾನು ಕೇಳಲಿಲ್ಲ.
ಅದೇ ಕ್ಷಣಕ್ಕೆ ನರ್ಸ್ ಒಬ್ಬಳನ್ನು ಕರೆದರು. ವೈದ್ಯರ ಕರೆಗೆ ಓಗೊಟ್ಟ ಸುಂದರಿ ಬಂದೇ ಸಾರ್ ಅಂತ ರಾಗ ಎಳೆದಳು. ಅವಳ ರೂಪಕ್ಕೆ ನಾನೇ ಮಾರುಹೋಗಿದ್ದೆ. ನೋಡಲು ಡುಮ್ಮಿಯಾದರೂ ಸುಂದರ ಮುಖ, ಕೆಂಪನೆಯ ತುಟಿಗಳನ್ನು ಮಿಟುಕಿಸುತ್ತಿರುವ ಚಂದಕ್ಕೆ ಜ್ವರ ಮಾಯವಾಗಿತ್ತು. ಅವಳಂತೆಯೇ ನಾನೂ ಇರಬಾರದಿತ್ತೇ, ಈ ಡಾಕ್ಟರಿನಂತಹ ಸುಂದರ ತರುಣ ನನಗೂ ಸಿಗಬಾರದಿತ್ತೆ. ಅವಳ ಜಾಗದಲ್ಲಿ ನಾನಿದ್ದಿದ್ದರೆ ಝ ಡಾಕ್ಟರು ನನಗೆ ಸಿಗುತ್ತಿದ್ದರಾ? ಎಂದೆಲ್ಲಾ ಮನಸ್ಸಲ್ಲಿ ಭಾವನೆಗಳು ಹರಿದಾಡುತ್ತಿದ್ದವು. ಇವರಿಗೆ ಇಂಜಕ್ಷನ್ ರೆಡಿ ಮಾಡು ಎಂದು ವೈದ್ಯರು ಹೇಳಿದ್ದು ಕಿವಿಗೆ ಹೊಡೆದಂತಾಯ್ತು. ಸೂಜಿಯ ಭಯಕ್ಕೆ ಒಮ್ಮೆ ಎದ್ದು ಕೂತುಬಿಟ್ಟೆ.
ಹಾಸಿಗೆಯ ಮೇಲೆ ಕೂತು ಅತ್ತಿತ್ತ ತಡಕಾಡಿದೆ. ಆದರೆ ಅದು ಆಸ್ಪತ್ರೆಯಾಗಿರಲಿಲ್ಲ. ಕನಸಿನ ಲೋಕದಲ್ಲಿ ಆಸ್ಪತ್ರೆ ಕಾಡಿದರೂ, ವಾಸ್ತವದಲ್ಲಿ ಮನೆಯಲ್ಲಿಯೇ ಬಿದ್ದುಕೊಂಡಿದ್ದೆ. ಆದರೆ ಕನಸಲ್ಲಿ ಕಂಡ ಸುಂದರಾಂಗ ವೈದ್ಯರ ನೋಟವೇ ರೋಗವನ್ನು ವಾಸಿಮಾಡಿತ್ತು.
ಈ ಕನಸೊಂದು ನನಸಾಗಲಿ ಅಂತ ಕಾತರದಿಂದ ಕಾಯುತ್ತಿದ್ದೇನೆ!
ನನಗೀಗ ಬಂದಿರುವುದು ಪ್ರೇಮಜ್ವರವಾ?
ಇಂತಿ ಪ್ರೇಮರೋಗಿ
ಶೃತಿ ಹೆಗಡೆ ಹುಳಗೋಳ