ಕಾಲೇಜು ಕ್ಯಾಂಪಸ್ಸಿನಲ್ಲಿ ಬಳುಕುತ್ತಾ ನಡೆಯುವ ಹುಡುಗಿಯ ಮೈಸೋಕಲು ಹುಡುಗ ಕಾದಂತೆ ನಿನಗಾಗಿ ನಾನು ಕಾಯುತ್ತಾ ಇದ್ದೇನೆ.
ಕಾಯುವುದು ಕಷ್ಟ ಅಂದವರು ಯಾರು? ಕಾಯುವುದನ್ನು ಬೇಸರದ ಕೆಲಸ ಎಂದು ತಿಳಿದರೆ ತಪ್ಪೂ ಆಗಬಹುದು.
ಹೌದು. ಹಸಿದವನು ಊಟಕ್ಕೆ ಕಾಯುತ್ತಾನೆ. ಭಕ್ತ ದೇವರ ದರ್ಶನಕ್ಕಾಗಿ ಕಾಯುತ್ತಾನೆ. ಮರಿ ಹಕ್ಕಿ ತನ್ನ ತಾಯಿಗಾಗಿ ಕಾಯುತ್ತದೆ. ಸಿಂಹ ಬೇಟೆಗಾಗಿ ಕಾಯುತ್ತದೆ. ಕಟ್ಟಿ ಹಾಕಿದ ಪ್ರಾಣಿ ಬಿಡುಗಡೆಗೆ ಕಾಯುತ್ತದೆ. ಅಂದರೆ ಅದರರ್ಥ ಕೊನೆಗೆ ಸಿಗುವ ಖುಷಿಗೆ ಕಾಯುವುದು ಎಂದು. ಅಂದರೆ ನಾವು ಕಾಯುತ್ತಿರುವುದು ಖುಷಿಗಾಗಿ, ಸುಖಕ್ಕಾಗಿ. ಹೀಗೆ ಕಾದಷ್ಟೂ ಸುಖ ಹೆಚ್ಚುತ್ತದೆ ಅಂತಾದರೆ ಅದಕ್ಕಾಗಿ ಕಾಯುವುದೂ ಖುಷಿಯ ವಿಚಾರ ಆಗಬೇಕು ಅಲ್ಲವೇ.
ಹೀಗೆ ನಾನೂ ಕಾಯುತ್ತಲೇ ಇದ್ದೇನೆ. ಆ ರಾತ್ರಿ ಇಂದು ಬರಬಹುದು, ನಾಳೆಯೂ ಬರಬಹುದು. ಇನ್ನೊಂದು ವಾರವೂ ಆಗಬಹುದು. ಬಹಳಷ್ಟು ದಿನಗಳು ಕಳೆಯಬಹುದು. ಈಗೆಲ್ಲ ಹೇಳಿದಂತೆಯೇ ಆಗುವುದಿಲ್ಲ. ಆಗಬೇಕು ಎಂದು ಬಯಸಿ ಕೂರುವುದೂ ಇಲ್ಲ. ಹಾಗಾಗಿ ಕಾಯುವಿಕೆ ತ್ರಾಸದಾಯಕವಲ್ಲ.
ನಿನ್ನ ಸ್ಪರ್ಷ, ನಿನ್ನ ಸುವಾಸನೆಯ ಗಂಧ, ನಿನ್ನ ನಡಿಗೆಯ ಬೆಡಗಿನ ಶಬ್ಧ.. ಅಂದು ನಡುರಾತ್ರಿಗೆ ಗೊತ್ತಿಲ್ಲದಂತೆ, ಊಹಿಸಿರದಂತೆ ಬಂದು ಬಿಟ್ಟಿದ್ದೆ. ನನಗಾದ ಖುಷಿಯನ್ನು ವಿವರಿಸುವುದು ಅಸಾಧ್ಯ. ನನಗೆ ಎಂದೇಕೆ, ಸುಡು ಸುಡುವ ದೇಹಕ್ಕೆ ನೀನು ಸೋಕಿದರೆ ಅದನ್ನು ಸುಖ ಅಲ್ಲ ಎಂದು ಯಾರಾದರೂ ಹೇಳುವರೆ? ಅಂತಹದೇ ಸುಖ ಇಂದೂ ಬೇಕೆಂದೆನಿಸಿದೆ. ಹಾಗೇ ಮತ್ತೆ ಬಾ. ನಡುರಾತ್ರಿಗೆ.
ಹೇಳದೇ ಕೇಳದೇ ತಿಳಿಯದೇ ಬಂದು ಬಿಡು. ನಡುರಾತ್ರಿಗೆ ನಿನ್ನ ಬರುವಿಕೆಯ ಸಪ್ಪಳಕ್ಕೆ ನಾನೇ ಹೊರಬರುತ್ತೇನೆ. ನಿನ್ನ ಹನಿ ಸ್ಪರ್ಷ ಕಾದ ನನಗೂ ಬಿಸಿಲ ನೆಲಕ್ಕೂ ಆಗಿ ಸುವಾಸನೆಯ ಸುಖ ಸಿಗಲಿ. ಬಾ ಮಳೆಯೇ. ನಿನ್ನ ಬರುವಿಕೆ ನನ್ನ ರಾತ್ರಿಗೆ ಮತ್ತಷ್ಟು ಖುಷಿ ತರಲಿ. ಕೊಂಚ ಹಾಗೇ ನೋಡಿ, ಹನಿ ಹಿಡಿದು, ಸುವಾಸನೆ ಹೀರಿ ಮತ್ತೆ ಹಾಸಿಗೆ ಏರಿ ಹೊದ್ದು ಮಲಗುತ್ತೇನೆ. ಅಚಾನಕಾಗಿ ಬಂದುಬಿಡು. ನಿನ್ನ ಆ ಸ್ಪರ್ಷಕ್ಕೆ ನನ್ನ ಮೈಮನ ಕರಗಿ ಹೋಗಲಿ. ಕಾಯುತ್ತಿದ್ದೇನೆ.
ಸಿರಿಗಂಧ ಬಸವರಾಜು