ಕಾಲೇಜ್ ಲೈಫ್‌ನಲ್ಲಿ ಪ್ರೀತಿ ಎಂಬುದು ಸರ್ವೇಸಾಮಾನ್ಯವಾಗಿದೆ. ಕೆಲವರಿಗೆ ಒಂದೇ ಪ್ರೀತಿ ಶಾಶ್ವತವಾಗಿದ್ದರೆ ಇನ್ನೂ ಕೆಲವರಿಗೆ ಅದು ಟೈಮ್ ಪಾಸ್ ಆಗಿರುತ್ತದೆ. ಇನ್ನೂ ಕೆಲವರಿಗಂತೂ ಪ್ರೀತಿ ಆರಂಭವಾಗುವ ಮುಂಚೆಯೆ ಮುಳುಗಿ ಹೋಗುತ್ತದೆ. ಈ ರೀತಿಯ ಘಟನೆ ಅನೇಕರ ಜೀವನದಲ್ಲಿ ನಡೆದಿರುತ್ತದೆ. ಇದೇ ರೀತಿ ರಾಘುವಿನ ಜೀವನದಲ್ಲಿಯೂ ಇಂತಹದ್ದೇ ಒಂದು ಘಟನೆ ಸಂಭವಿಸಿತು.
ರಾಘು ಹೈಸ್ಕೂಲ್ ಮುಗಿಸಿ ಕಾಲೇಜ್‌ಗೆಂದು ಬೆಂಗಳೂರಿಗೆ ಹೋಗಿದ್ದ. ಮೊದಲಿನಿಂದಲೂ ಮನೆಯವರ ಹಿಡಿತದಲ್ಲಿದ್ದ ಅವನಿಗೆ ಮಹಾನಗರದ ಎಲ್ಲಾ ವಸ್ತುಗಳು ಹೊಸದಂತೆ ಗೋಚರವಾಗತೊಡಗಿದವು. ಅವನಿಗೆ ಮೊದಲಿನಿಂದಲೂ ಸ್ನೇಹ ಬಳಗ ಅಧಿಕವಾಗಿಯೇ ಇತ್ತು. ಅದೇ ರೀತಿ ಆ ಕಾಲೇಜಿನಲ್ಲೂ ಎಲ್ಲರ ಗೆಳೆತನವನ್ನು ಮಾಡಿಕೊಂಡ. ದಿನ ಕಳೆದಂತೆ ಆತನ ಗೆಳೆಯರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಹೀಗಿರುವಾಗ ಒಮ್ಮೆ ರಾಘು ಕ್ಲಾಸ್ ಮುಗಿಸಿಕೊಂಡು ಹೊರಬರುತ್ತಿದಂತೆಯೇ ಅವನಿಗೆ ಒಂದು ಗುಳಿ ಕೆನ್ನೆಯ ಗಾಜು ಕಣ್ಣಿನ ಹುಡುಗಿಯು ಅಪ್ಸರೆಯಂತೆ ಕಂಡಳು. ಅವಳನ್ನು ನೋಡಿದ ತಕ್ಷಣ ಆತನಿಗೆ ಏನಾಗುತ್ತದೆ ಎಂಬುವುದೇ ತಿಳಿಯದಂತಾಯಿತು. ನಂತರ ನಿಧಾನವಾಗಿ ತನ್ನ ಮಾರ್ಗವನ್ನು ಬದಲಿಸಿ ಅವಳ ಹಿಂದೆಯೆ ಹೋಗತೊಡಗಿದ. ಹೀಗೆ ನಡೆಯುತ್ತಿರುವಾಗ ಅವಳ ಒಂದು ವಾರೆನೋಟಕ್ಕೆ ದಾರಿ ತೋಚದಂತಾಗಿ ಅವಳ ಕಣ್ಣಿಗೆ ಮರೆಮಾಚುವಂತೆ ಓಡಿ ಹೋದ. ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ಅವನ ಗೆಳೆಯರು ಅವನನ್ನು ಹೊರಗೆಳೆದು ವಿಚಾರಿಸತೊಡಗಿದರು. ಅವನು ಮೊದಲಿಗೆ ಏನು ಇಲ್ಲವಲ್ಲ ಎಂದು ವಾದಿಸಿದನು. ಬಳಿಕ ಅವಳೆಂದರೆ ನನಗೆ ಇಷ್ಟವೆಂದು ನಾಚುತ್ತಾ ಹೇಳಿದನು. ನಂತರ ಗೆಳೆಯರೆಲ್ಲರೂ ಸೇರಿಕೊಂಡು ಅವಳ ಬಗ್ಗೆ ಮಾಹಿತಿಯನ್ನು ಕಲೆ ಹಾಕತೊಡಗಿದ್ದೂ ಆಯಿತು. ಮೊದಲಿಗೆ ರಾಘು ಅವಳ ಗೆಳತಿಯರ ಸ್ನೇಹವನ್ನು ಮಾಡಿ, ಅವರಿಂದ ಅವಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡ. ನಂತರ ಅವಳು ಯಾರನ್ನೂ ಪ್ರೀತಿಸುತ್ತಿಲ್ಲವೆಂದು ತಿಳಿದ ಬಳಿಕ ನಿಧಾನವಾಗಿ ಅವಳೊಂದಿಗೆ ಸ್ನೇಹವನ್ನು ಆರಂಭಿಸಿದ. ಮೊದಮೊದಲಿಗೆ ಅವನು ಅವಳಿಗೆ ತಾನು ಮಾಡುವ ಕೆಲಸಗಳನೆಲ್ಲ ತಿಳಿಯುವಂತೆ ಮಾಡತೊಡಗಿದ. ಆರಂಭದಲ್ಲಿ ಅವಳು ಅವನನ್ನು ಕಂಡಾಗ ಯಾರೋ ಗೊತ್ತಿಲ್ಲ ಎಂಬ ರೀತಿಯಲ್ಲಿ ಸುಮ್ಮನೆ ಹೊಗುತ್ತಿದ್ದಳು. ಆದರೆ ದಿನ ಕಳೆದಂತೆ ಅವಳ ಕಣ್ಣಿನಲ್ಲಿ ಒಳ್ಳೆಯವನಾಗಿ ಹೋದ ರಾಘು. ಅವರ ಗೆಳೆತನವು ದಿನ ಕಳೆದಂತೆ ಗಟ್ಟಿಯಾಗತೊಡಗಿತು. ಇವರನ್ನು ನೋಡಿದ ಪ್ರತಿಯೊಬ್ಬರು ಇವರಿಬ್ಬರು ಪ್ರೇಮಿಗಳೆಂದು ಹೇಳತೊಡಗಿದರು. ರಾಘುವಿನ ಮನಸ್ಸಿನಲ್ಲಿ ಪ್ರೀತಿ ಇದ್ದರೂ ಸಹ ಹೇಳುವುದಕ್ಕೆ ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದ. ಆದರೆ ಬರಬರುತ್ತಾ ಅವನ ನಡುವಳಿಕೆಯಲ್ಲಿ ಬದಲಾವಣೆ ಆಗತೊಡಗಿತು, ಇದು ಅವಳಿಗೂ ತಿಳಿಯತೊಡಗಿತು. ನಂತರ ಅವಳು ರಾಘುವಿನ ಗೆಳೆಯರನ್ನು ವಿಚಾರಿಸಿದಾಗ ಅವಳಿಗೆ ಅವನು ತನ್ನನ್ನು ಪ್ರೀತಿಸುತ್ತಿರುವ ವಿಷಯ ತಿಳಿಯಿತು. ಯಾವುದೇ ಕಾರಣಕ್ಕೂ ಇದು ಮುಂದುವರೆಯಬಾರದೆಂಬ ಉದ್ದೇಶದಿಂದ ಅವಳು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು. ಅದೇ ಸಮಯದಲ್ಲಿ ಸರಿಯಾಗಿ ರಕ್ಷಾಬಂಧನವು ಬಂದಿತ್ತು. ಇದೇ ಸರಿಯಾದ ಸಮಯ ಎಂದು ತಿಳಿದು ಅವನಿಗೆ ರಾಖಿ ಕಟ್ಟಬೇಕೆಂದು ತೀರ್ಮಾನಿಸಿದಳು.
ಅಂದು ರಕ್ಷಾಬಂಧನದ ದಿನವೆಂದು ರಾಘುವಿಗೂ ತಿಳಿದಿತ್ತು. ಅವಳು ನನಗೆ ಯಾಕೆ ರಾಖಿ ಕಟ್ಟುತ್ತಾಳೆಂದುಕೊಂಡು ಎಂದಿನಂತೆ ಅವಳೊಂದಿಗೆ ಇದ್ದ. ಅವಕಾಶ ಕಾಯುತ್ತಿದ್ದ ಅವಳ ಸೂಕ್ತವಾದ ಸಮಯ ನೋಡಿ ಅವನ ಕೈಗೆ ರಾಖಿಯನ್ನು ಕಟ್ಟಿಯೇ ಬಿಟ್ಟಳು. ಅವನ ಕನಸೆಲ್ಲಾ ಮಣ್ಣಾಗಿ ಹೋಯಿತು, ವಿಧಿಯಿಲ್ಲದೆ ಅವಳನ್ನು ತಂಗಿಯಾಗಿ ಸ್ವೀಕರಿಸಿದ. ಪ್ರೀತಿ ಅರಳುವ ಮೊದಲೇ ಮುದುಡಿ ಹೋಯಿತು.
-ಸುಮುಖ ಹೆಗಡೆ, ಶಿರಸಿ