ಕೈ ತುಂಬಾ ಸಿಗ್ತಿದ್ದ ಸಂಬಳ ಬಿಟ್ಟು ಮೊಬೈಲ್ ಡಾಕ್ಟರ್ ಆದ್ರು!
ಬೆಂಗಳೂರಿನ ಸರ್ಜಾಪುರದಲ್ಲಿರುವ ‘ಮಾತೃಸಿರಿ ಫೌಂಡೇಷನ್’ ಬಡವರ ಪಾಲಿನ ಆರೋಗ್ಯ ಸಂಜೀವಿನಿ. ಸುಮಾರು 10 ವರ್ಷಗಳಿಂದ ಈ ಸಂಸ್ಥೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. ಕೂಲಿ ಕಾರ್ಮಿಕರು, ಬಡವರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದಿರುವವರ ನೆರವಿಗೆ ಈ ಸಂಸ್ಥೆ ನಿಂತಿದೆ. ವಿಜಯಪುರ ಮೂಲದ ವೈದ್ಯ, ಡಾ. ಸುನೀಲ್ ಕುಮಾರ್ ಹೆಬ್ಬಿ ‘ಮಾತೃಸಿರಿ ಫೌಂಡೇಷನ್’ ಸಂಸ್ಥಾಪಕರು.
ಉತ್ತರ ಕರ್ನಾಟಕ ಮೂಲದ ಹೆಬ್ಬಿ ವಿಜಯಪುರದ ಚಿಕ್ಕ ಹಳ್ಳಿಯಿಂದ ಬಂದವರು. ಆ ಹಳ್ಳಿಯಲ್ಲಿ ಕಾಯಿಲೆ ಬಂದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳು ಕೂಡ ಇರಲಿಲ್ಲ. ಅಷ್ಟೇ ಅಲ್ಲ, ವೈದ್ಯರು ಕೂಡ ಇರಲಿಲ್ಲ. ಈ ನಡುವೆ ಸುನೀಲ್ ಕುಮಾರ್ ಹೆಬ್ಬಿ, ತಂದೆ ತಾಯಿಯ ಆಶಯದಂತೆ ಡಾಕ್ಟರ್ ಆದ್ರು. ಬೆಂಗಳೂರಿನ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸ ಕೂಡ ಸಿಕ್ಕಿತ್ತು.
ಆದ್ರೆ, ಅದರಲ್ಲಿ ನೆಮ್ಮದಿ ಇರಲಿಲ್ಲವಂತೆ. ಬಡವರ ಸೇವೆ ಮಾಡಬೇಕು ಅನ್ನುವ ಆಸೆ ಹೆಚ್ಚುತ್ತಾ ಹೋಯಿತು. ಈ ಹಂತದಲ್ಲಿ ಒಂದು ಬಾರಿ ಕಾರಿನಲ್ಲಿ ಮನೆಗೆ ತೆರುಳುತ್ತಿದ್ದಾಗ ಅಪಘಾತದ ದೃಶ್ಯವನ್ನು ನೋಡಿದ್ರು. ಫಸ್ಟ್ ಏಡ್ ಕಿಟ್ ಕೈಯಲ್ಲಿತ್ತು. ಅಪಘಾತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದ್ರು. ಇದು ಸುನೀಲ್ ಕುಮಾರ್ ಹೆಬ್ಬಿಯ ಮನಸ್ಸನ್ನೇ ಬದಲಿಸಿತು. ಮೊಬೈಲ್ ಡಾಕ್ಟರ್ ಅನ್ನುವ ಸೇವೆಯನ್ನು ಆರಂಭಿಸಿದ್ರು.
ಡಾ. ಹೆಬ್ಬಿ ಮೊಬೈಲ್ ಡಾಕ್ಟರ್ ಅನ್ನುವ ಹೊಸ ಕಾನ್ಸೆಪ್ಟ್ ಅನ್ನು ಮೊದಲಿಗೆ ಹುಟ್ಟು ಹಾಕಿದ್ರು. ಸುನೀಲ್ ಬಳಿಯಿದ್ದ ಒಂದು ಕಾರ್ ಅನ್ನು ಸುಸಜ್ಜಿತ ಕ್ಲಿನಿಕ್ ತರಹ ಮಾಡಿಕೊಂಡ್ರು. ಕಾರಿನಲ್ಲೇ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ್ರು. ಕಾರಿನಲ್ಲೇ ಡಾಕ್ಟರ್ ಕಿಟ್ ಕೂಡ ಇಟ್ಟುಕೊಂಡ್ರು. ಇದ್ರಿಂದ ಎಲ್ಲಿ ಬೇಕೋ ಅಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿದೆ. ಕಳೆದ 8 ವರ್ಷಗಳಿಂದ ಮೊಬೈಲ್ ಡಾಕ್ಟರ್ ಕಾರ್ಯನಿರ್ವಹಿಸುತ್ತಿದೆ.
ಕಳೆದ 10 ವರ್ಷಗಳಲ್ಲಿ ಡಾ ಹೆಬ್ಬಿ ಮತ್ತು ತಂಡ ಒಟ್ಟು 700ಕ್ಕೂ ಅಧಿಕ ಮೆಡಿಕಲ್ ಕ್ಯಾಂಪ್ಗಳನ್ನು ಮಾಡಿದೆ. ಈ ಕ್ಯಾಂಪ್ಗಳಲ್ಲಿ ಒಟ್ಟು 33 ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಿದೆ. ಈ ರೀತಿಯ ಕ್ಯಾಂಪ್ಗಳಿಗೆ ಕೂಲಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಆರ್ಥಿಕವಾಗಿ ನಿಶ್ಯಕ್ತಿ ಹೊಂದಿದವರು ಹೆಚ್ಚಾಗಿ ಬರುತ್ತಿದ್ದು, ಅವರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೇವೆಯಲ್ಲಿ ಸಾವಿರದ 800 ವೈದ್ಯಕೀಯ ಸ್ವಯಂ ಸೇವಕರು ಮತ್ತು 350ಕ್ಕೂ ಅಧಿಕ ಪರಿಣಿತ ಡಾಕ್ಟರ್ಗಳು ಕೆಲಸ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಕಟ್ಟಡದ ಕೆಲಸಗಾರರು ಹಾಗೂ ಕಾಲಿ ಕಾರ್ಮಿಕರರು ಇರುವ ಸ್ಥಳಗಳಲ್ಲಿ ಹೆಬ್ಬಿ ಮತ್ತು ತಂಡ ಹೆಚ್ಚು ಕ್ಯಾಂಪ್ಗಳನ್ನು ನಡೆಸುತ್ತಿದೆ. ಅದೇ ರೀತಿ ಶಾಲಾ, ಕಾಲೇಜುಗಳಲ್ಲೂ ಕ್ಯಾಂಪ್ಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಿ ಅವರಿಗೆ ಆರೋಗ್ಯದ ಸಲಹೆಗಳನ್ನು ನೀಡುತ್ತಿದೆ. ಈ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಆರೋಗ್ಯದ ಬಗ್ಗೆ ಹೆಚ್ಚು ಜ್ಞಾನ ಹೊಂದುವಂತೆ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.
ಒಟ್ಟಿನಲ್ಲಿ ಏನೇ ಹೇಳಿ, ಮೊಬೈಲ್ ಡಾಕ್ಟರ್ ಮತ್ತು ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಯಾರೂ ಊಹಿಸಲು ಅಸಾಧ್ಯವಾಗಿರುವಂತಹ ಕೆಲಸಗಳನ್ನು ಮಾಡುತ್ತಿದೆ. ಇವತ್ತಿನ ಕಾಲದಲ್ಲಿ ದುಡ್ಡಿಗಿಂತ ಮಾನವೀಯತೆಗೆ ಬೆಲೆ ಇದೆ ಅನ್ನುವುದನ್ನು ಸುನೀಲ್ ಕುಮಾರ್ ಹೆಬ್ಬಿ ತನ್ನ ಕಾರ್ಯಗಳಿಂದ ಮಾಡಿ ತೋರಿಸುತ್ತಿದ್ದಾರೆ..