ಚಾಯ್ವಾಲಾ ಚಾರ್ಟೆಡ್ ಅಕೌಂಟೆಂಟ್ ಆಗುವ ತನಕ
ಸೋಮನಾಥ್ ಗಿರಮ್. ವಯಸ್ಸು 29 ವರ್ಷ. ಸೋಮನಾಥ್ ರನ್ನು ಜನ ಗುರುತಿಸಿದ್ದು ಒಬ್ಬ ಚಾಯ್ ವಾಲಾನಾಗಿ. ಸೋಮನಾಥ್ ಅಂಗಡಿಗೆ ಬಂದು ಬೇಕಾದ ಟೀ ಕುಡಿದು, ಹಣ ಕೊಟ್ಟು ಜನ ವಾಪಸ್ ಹೋಗ್ತಿದ್ದರು. ಸೋಮನಾಥ್ ಏನು ಮಾಡಬಲ್ಲರು ಎಂಬ ಭಾವ ಜನರ ಕಣ್ಣಲ್ಲಿ ಕಾಣ್ತಾ ಇತ್ತು. ಆದ್ರೆ ಈಗ ಟೀ ಮಾರುವವನ ಗುರುತು ಬದಲಾಗಿದೆ.
ಟೀ ಮಾರುವ ಸೋಮನಾಥ್ ಗಿರಮ್ ಈಗ ಚಾರ್ಟಡ್ ಅಕೌಂಟೆಂಟ್. ಟೀ ಮಾರಿ ಸಾಮಾನ್ಯರಂತೆ ಬದುಕು ಸಾಗಿಸುತ್ತಿದ್ದ ವ್ಯಕ್ತಿ ಕಠಿಣ ಪರೀಕ್ಷೆ ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆಗಿದ್ದಾರೆ. ಮಹಾರಾಷ್ಟ್ರ ಸರ್ಕಾರದ EARN AND LEARN ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಸೋಮನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ.
ಸೋಮನಾಥ್ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಒಂದು ಸಣ್ಣ ಊರು ಸಾಂಗ್ವಿಯವರು. ಉತ್ತಮ ಶಿಕ್ಷಣ ಪಡೆದು ಏನಾದರೂ ಸಾಧಿಸಬೇಕೆಂದುಕೊಂಡಿದ್ದರು ಸೋಮನಾಥ್. ಆದ್ರೆ ಬಡತನ ಅವರ ಓದನ್ನು ನಿಲ್ಲಿಸಿತ್ತು. ಮನೆಯವರ ಹೊಟ್ಟೆ ತುಂಬಿಸಲು ಸೋಮನಾಥ್ ತಮ್ಮ ಊರು ಬಿಟ್ಟು ಬೇರೆ ಊರಿಗೆ ಹೋಗಬೇಕಾಯ್ತು. ಹಸಿದಿದ್ದ ಸೋಮನಾಥ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.
ಕೊನೆಗೆ ಸೋಮನಾಥ್ ಪುಣೆಯ ಸದಾಶಿವ ಪೇಟ್ ನಲ್ಲಿ ಟೀ ಅಂಗಡಿ ತೆರೆದರು.ಕಷ್ಟದ ಪರಿಸ್ಥಿತಿಯಲ್ಲಿಯೂ ಸೋಮನಾಥ್ ಗೆ ಓದುವ ಹಸಿವು ಮಾತ್ರ ಇಂಗಿರಲಿಲ್ಲ. ಟೀ ಅಂಗಡಿಯಿಂದ ಸ್ವಲ್ಪ ಲಾಭ ಬರ್ತಾ ಇದ್ದಂತೆ ಓದುವ ಹುಚ್ಚು ಹೆಚ್ಚಾಯ್ತು. ಸೋಮನಾಥ್ ಸಿಎ ಮಾಡುವ ತೀರ್ಮಾನಕ್ಕೆ ಬಂದರು. ಗುರಿ ತಲುಪಲು ಕಠಿಣ ಪರಿಶ್ರಮಕ್ಕಿಳಿದರು. ಬೆಳಗ್ಗೆ ಓದಲು ಸಮಯ ಸಿಗದ ಕಾರಣ ರಾತ್ರಿ ನಿದ್ದೆ ಬಿಟ್ಟು ಓದಲು ಶುರುಮಾಡಿದರು.
ಒಂದು ಬಡ ಕುಟುಂಬದಲ್ಲಿ ಜನಿಸಿರುವ ಸೋಮನಾಥ್ ಅವರ ತಂದೆ ಬಲಿರಾಮ್ ಗಿರಾಮ್ ಒಬ್ಬ ಸಾಧಾರಣ ಕೃಷಿಕರು. ಮಹಾರಾಷ್ಟ್ರದ ಕೃಷಿಕರ ದುಸ್ಥಿತಿ ತಿಳಿದಿದ್ದ ಸೋಮನಾಥ್, ಆರ್ಥಿಕ ಪರಿಸ್ಥಿತಿ ಸುಧಾರಿಸಲು ದೊಡ್ಡದೇನಾದ್ರೂ ಮಾಡಬೇಕೆಂದು ಆಲೋಚಿಸಿದ್ದರಂತೆ. ಆಗಲೇ ಸಿಎ ಮಾಡುವ ಕನಸು ಹುಟ್ಟಿಕೊಂಡಿತ್ತಂತೆ. 2006ರಲ್ಲಿ ತನ್ನೂರಿನಿಂದ ಪುಣೆಗೆ ಬಂದ ಸೋಮನಾಥ್, ಸಾಹು ಕಾಲೇಜಿನಲ್ಲಿ ಬಿಎ ಮುಗಿಸಿದರು. ಬಿಎ ಪಾಸ್ ಆದನಂತರ ಸಿಎ ಮಾಡಲು ಆರ್ಟಿಕಲ್ ಶಿಪ್ ಮಾಡಿದ್ರು. ಕೊನೆಗೆ 2016 ರಲ್ಲಿ ಸಿಎ ಪಾಸ್ ಮಾಡಿ 2017ರಲ್ಲಿ ಚಾರ್ಟಡ್ ಅಕೌಂಟೆಂಟ್ ಆದ್ರು.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಟೀ ಮಾರಿ ಪ್ರಧಾನಿ ಪಟ್ಟಕ್ಕೇರಿದ್ರು. ಸೋಮನಾಥ್ ಟೀ ಮಾರಿ ಸಿಎ ಪರೀಕ್ಷೆ ಪಾಸ್ ಮಾಡಿದ್ರು. ಬಡತನದಿಂದ ಓದಿ ಈಗ ಸಿಎಂ ಆಗಿರುವ ಸೋಮನಾಥ್ ಅವರಿಗೆ ಬಡ ಮಕ್ಕಳಿಗೆ ಶಿಕ್ಷಣ ನೀಡಲು ನೆರವಾಗುವುದು ಅವರ ಮುಂದಿನ ಗುರಿಯಂತೆ.
ಸೋಮನಾಥ್ ಅವರು ಕೇವಲ ಮಹಾರಾಷ್ಟ್ರದಲ್ಲೊಂದೆ ಅಲ್ಲ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡಲು ಮನಸ್ಸಿಲ್ಲದಿದ್ದರೂ ಓದಲು ಹಣವಿಲ್ಲದೆ ಶಿಕ್ಷಣ ಮೊಟಕುಗೊಳಿಸುವ ವಿದ್ಯಾರ್ಥಿಗಳಿಗೆ ಸೋಮನಾಥ ಅವರು ಮಾದರಿಯಾಗಿದ್ದಾರೆ.