ಡಾ.ಸರೋಜಿನಿ ಅಗ್ರವಾಲ್. ಮಗಳ ಅಗಲುವಿಕೆಯ ನೋವು ಮರೆಯಲು 800 ಮಕ್ಕಳ ಮಹಾ ತಾಯಿಯಾದವರು. ಉತ್ತರ ಪ್ರದೇಶದ ಲಖನೌ ಬಳಿಯ ಗ್ರಾಮವೊಂದರಲ್ಲಿ ಜನಿಸಿದ ಅವರಿಗೆ ಭೌತಿಕ ಸೌಕರ್ಯಗಳ ಯಾವುದೇ ಕೊರತೆ ಇರಲಿಲ್ಲ.. ಓದಿನಲ್ಲೂ ಜಾಣೆ ಜತೆಗೆ ಬರವಣಿಗೆಯ ಹವ್ಯಾಸವೂ ಕೈಹಿಡಿಯಿತು. ಬಿ.ಎ. ನಂತರ ಎಂ.ಎ. ಮಾಡಬೇಕೆಂದು ಲಖನೌಗೆ ಬಂದರು. ಒಳ್ಳೆ ಹುಡುಗ ಸಿಕ್ಕಿದನೆಂದು ಮನೆಯವರು ಮದುವೆ ಮಾಡಿಬಿಟ್ಟರು. ಸಂಸಾರದ ಜಟಕಾ ಬಂಡಿ ಸಾಗುತ್ತಿರುವಾಗ ಇಬ್ಬರು ಗಂಡು ಮಕ್ಕಳ ಜನನವಾಯಿತು.
ಮುಂದೆ ಓದುವ ತುಡಿತ ಇನ್ನೂ ಜಾಗೃತವಾಗಿತ್ತು. ಇಬ್ಬರು ಮಕ್ಕಳನ್ನು ಸಲಹುತ್ತಲೇ ಎಂ.ಎ. ಪೂರೈಸಿದರು. ಗಂಡನ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ, ಸರೋಜಿನಿಯವರ ಮನದ ಕಡಲಲ್ಲಿ ಬಯಕೆಯ ಅಲೆಯೊಂದು ಅಪ್ಪಳಿಸುತ್ತಲೇ ಇತ್ತು-‘ಹೆಣ್ಣು ಮಗು ಬೇಕು’. ಮತ್ತೆ ಗರ್ಭವತಿಯಾದಾಗ ಕಂಡಕಂಡ ದೇವರ ಕೈಮುಗಿದು ‘ಮುದ್ದಾದ ಹೆಣ್ಮಗು ಕೊಡಪ್ಪ’ ಎಂದು ಬೇಡಿದರು. ಅವಳಿ-ಜವಳಿ ಮಕ್ಕಳು ಹುಟ್ಟಿದರು. ಆ ಪೈಕಿ ಒಂದು ಗಂಡು ಒಂದು ಹೆಣ್ಣು. ಹೆಣ್ಣುಮಗುವಿಗೆ ಮನೀಷಾ ಎಂಬ ಹೆಸರಿಡಲಾಯಿತು. ಹಿಂದಿ ಸಾಹಿತ್ಯದಲ್ಲಿ ಪಿಎಚ್ಡಿಯನ್ನು ಪೂರೈಸಿದ ಸರೋಜನಿ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿದರು.
ಅಂದು 1978ರ ಏಪ್ರಿಲ್ 1. ಸರೋಜಿನಿಯವರು ಪತಿ, ಮನೀಷಾ ಹಾಗೂ ಕಿರಿಯ ಮಗನೊಂದಿಗೆ ಸಂಬಂಧಿಕರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದರು. ರಸ್ತೆಯಲ್ಲೇ ಕಾದುನಿಂತಿದ್ದ ಜವರಾಯ ಅಪಘಾತದಲ್ಲಿ ಮನೀಷಾಳನ್ನು ಕಿತ್ತುಕೊಂಡ! ಮಗನಿಗೆ ಗಾಯಗಳಾದವು. ಯಾವುದನ್ನು ಹಂಬಲಿಸಿ, ಮೊರೆಯಿಟ್ಟು ತಾಯಿಹೃದಯ ಪಡೆದಿತ್ತೋ ಆ ಜೀವವೇ ಇಲ್ಲವೆಂದ ಮೇಲೆ ಏನು ಗತಿ? ಈ ತಾಯಿಗೆ ಯಾವುದೂ ಬೇಡವಾಯಿತು. ಪಿಎಚ್ಡಿ ಪೂರ್ಣಗೊಳಿಸಿದ್ದರಿಂದ ವಿಶ್ವವಿದ್ಯಾಲಯದಿಂದ ಉತ್ತಮ ಉದ್ಯೋಗದ ಆಫರ್ ಕೂಡ ಬಂತು. ಆದರೆ, ಮನೀಷಾಳನ್ನು ಕಳೆದುಕೊಂಡ ಬದುಕು ಬರಡಾಗಿತ್ತು. ಭರವಸೆ, ಉತ್ಸಾಹಗಳೆಲ್ಲ ಇಂಗಿಹೋಗಿದ್ದವು, ಕೆಲಸಕ್ಕೆ ಹೋಗಲು ನಿರಾಕರಿಸಿಬಿಟ್ಟರು.
ಅದೊಂದು ದಿನ ಇವರ ಪರಿಚಯದ ವೈದ್ಯೆಯೊಬ್ಬರು ಫೋನ್ ಮಾಡಿ- ‘‘ನಮ್ಮ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆ ಹೆಣ್ಣುಮಗುವಿಗೆ ಜನ್ಮನೀಡಿ ಪ್ರಾಣಬಿಟ್ಟಿದ್ದಾಳೆ. ಆಕೆಯ ಗಂಡ ಓಡಿಹೋಗಿದ್ದಾನೆ. ನವಜಾತ ಶಿಶು ಅನಾಥವಾಗಿದೆ. ನೀನು ಅದನ್ನು ಪೋಷಿಸಲು ಸಿದ್ಧಳಿದ್ದರೆ ಕಾನೂನು ಪ್ರಕ್ರಿಯೆ ಪೂರೈಸಿ ಮಗುವನ್ನು ನೀಡುತ್ತೇನೆ’’ ಎಂದರು. ಆಸ್ಪತ್ರೆಗೆ ಹೋಗಿ ಆ ಮುದ್ದಾದ ಮಗು ನೋಡಿದಾಗ ಅದರಲ್ಲಿ ಮನೀಷಾಳನ್ನೇ ಕಂಡ ಸರೋಜಿನಿ ಇದೆಲ್ಲ ‘ದೇವರ ಆಟ’ವೇ ಇರಬೇಕು ಎಂದುಕೊಂಡು ಮಗುವನ್ನು ಮನೆಗೆ ಕರೆತಂದರು. ಆಗ ಅಂತಃಕರಣದ ಸೆಲೆಯೊಂದು ಜಾಗೃತವಾಯಿತು, ಇಂಥ ಅನಾಥ-ನಿರ್ಗತಿಕ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳ ಬದುಕನ್ನು ಯಾರು ಕಟ್ಟುತ್ತಾರೆ?
1984ರಲ್ಲಿ ಈ ಕಾರ್ಯಕ್ಕೊಂದು ಸ್ಪಷ್ಟದಿಕ್ಕು ಕೊಡಲು ‘ಮನೀಷಾ ಮಂದಿರ’ ಹೆಸರಿನಲ್ಲಿ ಅನಾಥಾಶ್ರಮವನ್ನು ಸ್ಥಾಪಿಸಿ ಅನಾಥ ಹಾಗೂ ನಿರ್ಗತಿಕ ಹೆಣ್ಣುಮಕ್ಕಳಿಗೆ ವಸತಿ, ಊಟ, ಶಿಕ್ಷಣ, ಪ್ರೀತಿ, ಉತ್ತಮ ಭವಿಷ್ಯ ನೀಡಲು ಸಂಕಲ್ಪಿಸಿದರು. ಮೊದಲಿಗೆ ಬಾಡಿಗೆ ಕಟ್ಟಡದಲ್ಲಿ ಮನೀಷಾ ಮಂದಿರ ಆರಂಭಗೊಂಡಿತು. ಚರಂಡಿಯಲ್ಲಿ, ಬೀದಿಬದಿಯಲ್ಲಿ ಎಸೆದ ಹಸೂಗುಸುಗಳು, ಆಸ್ಪತ್ರೆಯಲ್ಲಿ ದಿಕ್ಕುಕಾಣದೆ ಅನಾಥವಾಗಿದ್ದ ನವಜಾಶ ಶಿಶುಗಳು, ಬಡತನದ ಬೇಗೆಯಲ್ಲಿ ಜೀವನ ನಡೆಸಲಾರದೆ ನರಳುತ್ತಿದ್ದ ಪುಟ್ಟ ಮಕ್ಕಳು ಇವರಿಗೆಲ್ಲ ಮನೀಷಾ ಮಂದಿರ ಕೇವಲ ಆಸರೆಯಲ್ಲ ಮಮತೆಯ ಮಡಿಲಾಯಿತು, ಬದುಕು ಕಟ್ಟಿಕೊಳ್ಳುವ ಸಾರ್ಥಕ ತಾಣವಾಯಿತು.
ಕಳೆದ 33 ವರ್ಷಗಳಲ್ಲಿ ಇಲ್ಲಿ 800ಕ್ಕೂ ಅಧಿಕ ಹೆಣ್ಣುಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆಲ್ಲ ಸ್ವಂತ ತಾಯಿಗಿಂತಲೂ ಹೆಚ್ಚಾಗಿ ಪ್ರೀತಿ ಸುರಿದಿರುವ ಸರೋಜಿನಿ ಅವರು ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮಾರ್ಗದರ್ಶನ ನೀಡಿ ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿದ್ದಾರೆ. 20ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮದುವೆಯನ್ನು ತಾವೇ ನಿಂತು ಮಾಡಿದ್ದಾರೆ. ಅದೆಷ್ಟೋ ಹುಡುಗಿಯರು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಂಡಿದ್ದು ಈ ಮಾತೃಮಂದಿರಕ್ಕೆ ತಮ್ಮಿಂದ ಸಾಧ್ಯವಾದ ನೆರವನ್ನು ನೀಡುತ್ತಿದ್ದಾರೆ. ಇನ್ನು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಹಲವು ರಂಗಗಳಲ್ಲಿ ಈ ಮಕ್ಕಳು ಸಾಧನೆಯ ಹೆಜ್ಜೆಗುರುತು ಮೂಡಿಸಿದ್ದಾರೆ.
2010ರಲ್ಲಿ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರಿಂದ ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವ, ಸನ್ಮಾನಗಳಿಗೆ ಡಾ.ಅಗ್ರವಾಲ್ ಪಾತ್ರರಾಗಿದ್ದಾರೆ. ಏನೇ ಹೇಳಿ, ಡಾ. ಸರೋಜಿನಿ ಅವರು 78ರ ಇಳಿವಯಸ್ಸಿನಲ್ಲೂ ಇಲ್ಲಿನ ಹೆಣ್ಣುಮಕ್ಕಳ ಉತ್ಕರ್ಷಕ್ಕಾಗಿ ಶ್ರಮಿಸುತ್ತಿರುವುದು ಪ್ರತಿಯೊಬ್ಬ ಮಹಿಳೆಯರಿಗೂ ಸ್ಫೂರ್ತಿಯ ಸೆಲೆಯಾಗಿದೆ.