22 ವರ್ಷದ ತಾರಿಕಾ ಬಾನು. ಇವರೊಬ್ಬ ಮಂಗಳಮುಖಿ. ತಮಿಳುನಾಡಿನ ಈಕೆ 12ನೇ ತರಗತಿ ಪಾಸು ಮಾಡಿದ ಭಾರತ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ತಾರಿಕಾ ಪಾತ್ರಳಾಗಿರುವವರು.
ತಾರಿಕಾ ಬಾನು ಅವರು ಆ ಕುಟುಂಬದ ನಾಲ್ಕನೇ ಮಗುವಾಗಿ ಜನಿಸಿದ್ರು. ತೂತುಕುಡಿ ಜಿಲ್ಲೆಯಲ್ಲಿ ಅವಳ ಮನೆಯಿದೆ. 18 ವರ್ಷವಾಗುವವರೆಗೂ ತಾರಿಕಾ ಮನೆಯಲ್ಲೇ ಇದ್ಲು. ಆದ್ರೆ ತನ್ನದಲ್ಲದ ತಪ್ಪಿಗೆ ಮನೆಯವರಿಂದ ತಿರಸ್ಕರಿಸಲ್ಪಟ್ಟ ತಾರಿಕಾ ಬದುಕು ಅರಸಿ ಅಲ್ಲಿಂದ ಹೊರನಡೆದ್ರು. ಮನೆ ಬಿಟ್ಟು ಓಡಿ ಬಂದ ತಾರಿಕಾ ಚೆನ್ನೈ ಸೇರಿಕೊಂಡ್ರು.
ಇನ್ನು ಮನೆ ಬಿಟ್ಟು ಚೆನ್ನೈಗೆ ಓಡಿ ಬಂದಾಗ ತಾರಿಕಾ ಬದುಕು ಈ ರೀತಿಯ ತಿರುವು ಪಡೆಯಬಹುದೆಂದು ಊಹಿಸಿಕೊಂಡಿರಲಿಲ್ಲವಂತೆ. ತಮ್ಮ ತಾಯಿಯ ಆಶೀರ್ವಾದದಿಂದ್ಲೇ ಇದೆಲ್ಲವೂ ಸಾಧ್ಯವಾಗಿದೆ ಎನ್ನುತ್ತಾರೆ ತಾರಿಕಾ. ಆದರೆ, ತಾಯಿ ಅಂದಾಕ್ಷಣ ತಾರಿಕಾ ತನ್ನ ಹೆತ್ತಮ್ಮನನ್ನು ನೆನೆದಿದ್ದಾಳೆ ಎಂದುಕೊಳ್ಳಬೇಡಿ. ಆಕೆ ಕೃತಜ್ಞತೆ ಅರ್ಪಿಸಿರುವುದು ಮಂಗಳಮುಖಿಯರ ಕಾರ್ಯಕರ್ತೆ ಗ್ರೇಸ್ ಬಾನು ಅವರಿಗೆ.
29 ವರ್ಷದ ಗ್ರೇಸ್ ಬಾನು ಕೂಡ ಒಬ್ಬ ಮಂಗಳಮುಖಿ. ಆಕೆ ಬದುಕಿನಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ತನ್ನಂತೆ ಇತರ ಮಂಗಳಮುಖಿಯರು ಕೂಡ ಜೀವನದಲ್ಲಿ ನೋವು ಅನುಭವಿಸಬಾರದು ಅನ್ನೋದು ಅವಳ ಉದ್ದೇಶ.ತಾರಿಕಾ ಸೇರಿದಂತೆ ಇತರ ಕೆಲವು ಮಂಗಳಮುಖಿಯರನ್ನು ಗ್ರೇಸ್ ಬಾನು ದತ್ತು ಪಡೆದಿದ್ದಾರೆ. ಅವರಿಗೆ ಆಸರೆ ನೀಡಿ, ಆರೈಕೆ ಮಾಡುತ್ತಿದ್ದಾರೆ.
ಮಂಗಳಮುಖಿಯರಿಗೆ ಸಾಮಾಜಿಕ ಭದ್ರತೆಯನ್ನೂ ಕೊಡಿಸುವ ಪ್ರಯತ್ನ ಗ್ರೇಸ್ ಬಾನು ಅವರದ್ದು. ಅಂಬತ್ತೂರ್ ನಲ್ಲಿರುವ ಪೆರುಂಥ ಲೈವರ್ ಕಾಮರಾಜರ್ ಸರ್ಕಾರಿ ಹೆಣ್ಣುಮಕ್ಕಳ ಹೈಸ್ಕೂಲ್ ನಲ್ಲಿ ತಾರಿಕಾ ಶಿಕ್ಷಣ ಪಡೆದಿದ್ದಾರೆ.
12ನೇ ತರಗತಿಯಲ್ಲಿ ಉತ್ತೀರ್ಣಳಾಗಿರುವ ತಾರಿಕಾ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ. ತಾರಿಕಾ ಮುಂದೊಂದು ದಿನ ಡಾಕ್ಟರ್ ಆಗ್ತಾರೆ ಅನ್ನೋ ವಿಶ್ವಾಸ ಗ್ರೇಸ್ ಬಾನುಗಿದೆ. ತಮಿಳುನಾಡು ಸರ್ಕಾರ ಕೂಡ ಇಂತಹ ಪ್ರತಿಭಾವಂತ ಮಂಗಳಮುಖಿಯರಿಗೆ ಪ್ರೋತ್ಸಾಹ ನೀಡಿದೆ.
ಒಟ್ಟಿನಲ್ಲಿ, ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ ತಾರಿಕಾ ಅವರು, ಈಗ ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ. ಇವರು ಇತರೆ ಮಂಗಳಮುಖಿಯರಿಗೂ ಸ್ಫೂರ್ತಿಯಾಗಿದ್ದಾರೆ