ಕೆಲವರಿಗೆ ಬಣ್ಣವೇ ಪ್ರಪಂಚ.. ಇನ್ನೂ ಕೆಲವರಿಗೆ ಪ್ರಾಣಿಗಳ ಜೊತೆಗೆ ಬದುಕು.. ಮತ್ತೆ ಕೆಲವರಿಗೆ ಸಿಕ್ಕಿದ್ದನ್ನೂ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುವ ತವಕ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದೊಂದು ಹವ್ಯಾಸ ಇರುತ್ತದೆ. ಮೊದಮೊದಲು ಸಮಯ ಕಳೆಯಲೆಂದು ಆರಂಭಿಸಿದ ಕೆಲಸಗಳು ತದನಂತರದಲ್ಲಿ ನಮ್ಮ ಬದುಕಿನ ಭಾಗವಾಗಿಬಿಡುತ್ತವೆ. ಇನ್ನೂ ಕೆಲವರಿಗೆ ಮಾತ್ರ ಹವ್ಯಾಸವೇ ಬದುಕಾಗಿರುತ್ತದೆ. ತಾವು ಆಸಕ್ತಿ ಹೊಂದಿರುವ ವಿಷಯದಲ್ಲಿ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪೇಂಟಿಂಗ್ , ಫೋಟೋಗ್ರಫಿ, ಮ್ಯೂಸಿಕ್ ಹೀಗೆ ತಮ್ಮ-ತಮ್ಮ ಪ್ರತಿಭೆಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳನ್ನು ಮಿಂಚುತ್ತಿರುವವರನ್ನು ನೋಡುತ್ತೇವೆ.
ಕೆಲವರಂತೂ ತಮ್ಮ ಹವ್ಯಾಸವನ್ನು ಒಂದು ಕ್ಷಣೂ ಸಹ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತಾರೆ. ತಾವು ನಿಂತರೂ, ಕೂತರೂ, ಮಲಗಿದರೂ ಸದಾ ತಮ್ಮ ಆಸಕ್ತಿಯ ವಿಷಯದತ್ತಲೇ ಅವರ ಮನಸ್ಸು ಜಾರುತ್ತಿರುತ್ತಿದೆ. ಅದರ ಯೋಚನೆಯಲ್ಲೇ ಮುಳುಗಿರುತ್ತಾರೆ.ನಾವು ಇಲ್ಲಿ ಹೇಳ ಹೊರಟಿರುವುದು ಅಂಥದ್ದೇ ವಿಷಯದ ಬಗ್ಗೆ. ಹೀಗೆ ತಮ್ಮ ಹವ್ಯಾಸವನ್ನು ಬದುಕಿನ ಭಾಗವಾಗಿಸಿಕೊಂಡಿರುವವರು ರವಿ ಹೊಂಗಲ್..ರವಿ ಹೊಂಗಲ್ ಮೂಲತಃ ಕುಂದಾನಗರಿ ಬೆಳಗಾವಿಯವರು. ರವಿ ಹೊಂಗಲ್ ಅವರ ವೃತ್ತಿ ಹಾಗೂ ಹವ್ಯಾಸ ಫೋಟೋಗ್ರಫಿ. ಇವರಿಗೆ ಫೋಟೋಗ್ರಫಿ ಹುಚ್ಚು ಎಷ್ಟಿದೆ ಎಂದರೆ, ತಮ್ಮ ಮನೆಯನ್ನೇ ಕ್ಯಾಮೆರಾ ಶೈಲಿಯಲ್ಲಿ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಮಕ್ಕಳಿಗೂ ಕ್ಯಾಮೆರಾ ಬ್ರ್ಯಾಂಡ್ ಹೆಸರಿಟ್ಟಿದ್ದಾರೆ.ಹೌದು, ಹೊಂಗಲ್ ಅವರು ಗಮನ ಸೆಳೆದಿರುವುದು ತಾವು ಕಟ್ಟಿಸಿರುವ ಮನೆಯಿಂದ. ಮನೆ ಕಟ್ಟಿಸುವಾಗ ಪ್ರತಿಯೊಬ್ಬರಿಗೂ ತಮ್ಮದೇ ಆದ ಪರಿಕಲ್ಪನೆ ಇರುತ್ತದೆ. ತಾನು ವಾಸಿಸುವ ಪ್ರೀತಿಯ ಗೂಡು ಹೇಗಿರಬೇಕೆಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದರಂತೆಯೇ ಮನೆ ಕಟ್ಟಿಸುವಾಗ ಮನೆಯನ್ನು ತಮ್ಮ ಇಷ್ಟದಂತೆ ಕಟ್ಟಿಸುತ್ತಾರೆ.ಇವರು ತಮ್ಮಿಷ್ಟದ ಕ್ಯಾಮೆರಾ ವಿನ್ಯಾಸದಲ್ಲಿ ಮನೆ ಕಟ್ಟಿದ್ದಾರೆ.ರವಿ ಮನೆ ನೋಡಿದರೆ ಥೇಟ್ ಕ್ಯಾಮರಾದಂತೆಯೇ ಇದೆ. ಇದೀಗ ಈ ಮನೆ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಚಿಕ್ಕ ವಯಸ್ಸಿನಲ್ಲಿಯೇ ರವಿ ಅವರಿಗೆ ಫೋಟೋಗ್ರಫಿ ಕಡೆಗೆ ವಿಪರೀತ ಸೆಳೆತ. ಸಣ್ಣ ವಯಸ್ಸಿನಲ್ಲೇ ಮನೆಯಲ್ಲಿದ್ದ Pentax ಕ್ಯಾಮರಾ ತೆಗೆದುಕೊಂಡು ಹಳ್ಳಿಗಳಿಗೆ ಹೋಗಿ ಕಣ್ಣಿಗೆ ಕಂಡಿದ್ದನ್ನು, ಮನಸ್ಸು ಒಪ್ಪಿದನ್ನು ಫೋಟೋ ಕ್ಲಿಕ್ ಮಾಡುತ್ತಿದ್ದರು. ನಂತರ ದಿನಗಳಲ್ಲಿ ಫೋಟೋಗ್ರಫಿ ಅವರ ಹವ್ಯಾಸವಾಯಿತು. ನಂತರ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು.
ಫೋಟೋಗ್ರಫಿಯನ್ನು ಮತ್ತಷ್ಟು ಹಚ್ಚಿಕೊಂಡ ರವಿ ಅವರಿಗೆ ಮತ್ತೊಂದು ಇಚ್ಛೆ ಹುಟ್ಟಿಕೊಂಡಿತು. ಅದೇ ಕ್ಯಾಮೆರಾ ವಿನ್ಯಾಸದ ಮನೆ. ಈ ಅಲೋಚನೆ ಬಂದಿದ್ದೇ, ರವಿ ಕ್ಯಾಮರಾದ ಡಿಸೈನ್ ನ ಮನೆ ನಿರ್ಮಿಸಿದ್ದಾರೆ. ಈಗ ಕ್ಯಾಮರಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕ್ಲಿಕ್, ಲೆನ್ಸ್, ರೀಲ್, ಶೆಟರ್‌ಸ್ಪೀಡ್ ಹೀಗೆ ಕ್ಯಾಮರಾದ ಪ್ರತಿಯೊಂದು ಫೀಚರ್‌ಗಳನ್ನು ಇವರ ಮನೆಯಲ್ಲಿ ನೋಡಬಹುದಾಗಿದೆ.ಇಷ್ಟೇ ಅಲ್ಲ ತಮ್ಮ ಗಂಡು ಮಕ್ಕಳಿಗೆ ಕೂಡ Epson, Canon, Nikon (ಎಪ್ಸೋನ್, ಕೆನೋನ್, ನಿಕೋನ್) ಎಂದು ನಾಮಕರಣ ಮಾಡಿದ್ದಾರೆ. ಒಟ್ನಲ್ಲಿ ರವಿ ಹೊಂಗಲ್ ಅವರ ಕ್ಯಾಮೆರಾ ಕ್ರೇಜ್ ಗೆ ಜನ ವಾರೆ ವ್ಹಾ ಅಂತಿದ್ದಾರೆ.