ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಗಿಡಮರ, ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗೆಲ್ಲಾ ದರ್ಶನ್ ಮಾಡುವ ಕೆಲಸವೆಂದರೆ ತಾವು ಸಾಕಿರುವ ಪ್ರಾಣಿಗಳ ಜೊತೆಗೆ ಕಾಲಕಳೆಯುವುದು. ಅರಣ್ಯ ಸಫಾರಿ ನಡೆಸಿ, ಮನಸ್ಸಿಗೆ ಮೆಚ್ಚಿದ ಫೋಟೋ ಕ್ಲಿಕ್ಕಿಸೋದು.. ಇದೀಗ ಲಾಕ್ ಡೌನ್ ಸಿನಿಮಾ ಕೆಲಸದಿಂದ ವಿಶ್ರಾಂತಿ ಪಡೆದಿರುವ ದಚ್ಚು, ಈ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಂಚಾರ ನಡೆಸಿದ್ದು, ಕಳ್ಳಬೇಟೆ ತಡೆ ಶಿಬಿರವೊಂದಕ್ಕೆ ಭೇಟಿ ನೀಡಿ ಗಿಡ ನೆಟ್ಟು ಅರಣ್ಯ ಸಿಬ್ಬಂದಿಯಲ್ಲಿ ಹುರುಪು ತುಂಬಿದ್ದಾರೆ.
ಹೌದು, ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ ಬಫರ್ ಝೋನಿನ ಸತ್ತೇಗಾಲ ಬಳಿ ಇರುವ ದೊಡ್ಡಮಾಕಳ್ಳಿ ಕಳ್ಳಭೇಟೆ ತಡೆ ಭೇಟೆ ಶಿಬಿರಕ್ಕೆ ದಿಡೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ ನಟ ದರ್ಶನ್. ಹಾಸ್ಯ ನಟ ಚಿಕ್ಕಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಾಥ್ ನೀಡಿದ್ದಾರೆ.ಈ ವೇಳೆ ಅರಣ್ಯ ಸಿಬ್ಬಂದಿಯೊಂದಿಗೆ ವನ್ಯಸಂಪತ್ತು ಸಂರಕ್ಷಣೆಯ ಬಗ್ಗೆ ಕೆಲ ಹೊತ್ತು ಸಂವಹನ ನಡೆಸಿದ್ದಾರೆ. ಇದೇ ವೇಳೆ ಡಿಎಫ್ಒ ಕಚೇರಿ ಬಳಿ ಗಿಡ ನೆಟ್ಟು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಿದ್ದಾರೆ ಅರಣ್ಯ ರಾಯಭಾರಿ ದರ್ಶನ್.
ರೈತರನ್ನು ಅರಣ್ಯ ಕೃಷಿಯತ್ತ ಆಕರ್ಷಿಸಲು ಅರಣ್ಯ ಇಲಾಖೆ ಪ್ರೋತ್ಸಾಹಧನ ನೀಡುವ ಸಲುವಾಗಿ ಕೃಷಿ ಅರಣ್ಯ ಸಪ್ತಾಹ ಯೋಜನೆ ಆರಂಭಿಸಿದೆ. ಸದ್ಯ ಕರ್ನಾಟಕ ಅರಣ್ಯ ರಾಯಭಾರಿಯಾಗಿರುವ ದರ್ಶನ್ ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಯೋಜನೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ನಟ ದರ್ಶನ್ ಗೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪಅರಣ್ಯಸಂರಕ್ಷಣಾಧಿಕಾರಿ ಯೇಡುಕೊಂಡಲು ಧನ್ಯವಾದ ಹೇಳಿದ್ದಾರೆ.
ಸದ್ಯ ದರ್ಶನ್ ಅರಣ್ಯ ಸಂಚಾರ ಮತ್ತು ಗಿಡ ನೆಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದರ್ಶನ್ ಜೊತೆ ಚಿಕ್ಕಣ್ಣ ಕೂಡ ಕಾಡು ಸುತ್ತಾಟ ಮಾಡಿರುವುದು ವಿಶೇಷ ಎನಿಸಿದೆ. ಈ ಬಗ್ಗೆ ಪೋಟೋಸ್ ಹಾಗೂ ವಿಡಿಯೋವನ್ನು ಆಲ್ ಇಂಡಿಯಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್ ಕೂಡ ಆಗಿರುವ ನಟ ದರ್ಶನ್ ತಾವು ತೆಗೆದ ಛಾಯಾಚಿತ್ರಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಅರಣ್ಯ ಸಿಬ್ಬಂದಿಯ ಕ್ಷೇಮ ನಿಧಿಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆಯು ಆಗಾಗ್ಗೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ದರ್ಶನ್ ಅರಣ್ಯ ಸಿಬ್ಬಂದಿಯೊಂದಿಗೆ ಚರ್ಚೆ ಸಂವಾದ ನಡೆಸುತ್ತಾ ಅವರ ಕಷ್ಟ ಸುಖ ವಿಚಾರಿಸುತ್ತಾ ಸಹಾಯ ಹಸ್ತ ಚಾಚುತ್ತಾ ನೈತಿಕ ಸ್ಥೈರ್ಯ ತುಂಬುತ್ತಾ ಬಂದಿದ್ದಾರೆ.
ಇನ್ನು, ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದರ್ಶನ್ ದತ್ತು ಪಡೆದಿದ್ದಾರೆ. ಸದ್ಯ, ಅವರ ಪ್ರಾಣಿ ಪ್ರೀತಿ ಹಾಗೂ ಅರಣ್ಯ ರಕ್ಷಣೆಗೆ ಅವರು ಪಣ ತೊಟ್ಟಿರುವ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.