ಸ್ಟಾರ್ ನಟರಾಗೋದರ ಜೊತೆಗೆ ಕೆಲವರು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗುತ್ತಾರೆ. ಇಂಥವರ ಸಾಲಿನಲ್ಲಿ ನಮ್ಮ ಅಭಿನಯ ಚಕ್ರವರ್ತಿ ಸುದೀಪ್ ಸಹ ನಿಲ್ಲುತ್ತಾರೆ. ಹಿಂದಿನಿಂದಲೂ ಸಹ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುದೀಪ್, ಈಗಲೂ ಸಹ ಇಂತಹ ಕೆಲಸಗಳಿಗಾಗಿ ಇಂತಿಷ್ಟು ಸಮಯ ಅಂಥ ಮೀಸಲಿಟ್ಟಿದ್ದಾರೆ.
ಖಡಕ್ ನೋಟ,, ನೇರ ನುಡಿಯ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಶಕ್ತಿ ಅಂದರೆ ತಪ್ಪಾಗಲಾರದು. ಕಲೆ, ಕ್ರೀಡೆ, ರಾಜಕೀಯ, ಶಿಕ್ಷಣ ಕ್ಷೇತ್ರದ ಬಗ್ಗೆಯೂ ಒಲವು ಹೊಂದಿರುವ ಸುದೀಪ್ ಸಮಾಜಮುಖಿ ಕಾರ್ಯದಲ್ಲೂ ಸದಾ ಮುಂದು. ಹೀಗಾಗಿ ಕಿಚ್ಚನಿಗೆ ಕಿಚ್ಚನೇ ಸರಿಸಾಟಿ ಅಂತಾರೆ ಅಭಿನಯ ಚಕ್ರವರ್ತಿಯ ಅಭಿಮಾನಿಗಳು.
ಕನ್ನಡ, ಹಿಂದಿ, ತಮಿಳು, ತೆಲುಗು ಹೀಗೆ ಚರ್ತುರ್ ಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ಸುದೀಪ್ ಸೂಪರ್ ಹೀರೋ.. ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಅವರು ಹೀರೋನೆ..
ನಟ, ನಿರ್ದೇಶಕ, ನಿರ್ಮಾಪಕ ಸುದೀಪ್ ದೊಡ್ಡ ಮಟ್ಟದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜಿಸಿದ ಸುದೀಪ್, ಚಿತ್ರದುರ್ಗದ ಶಾಲೆ ಅಭಿವೃದ್ಧಿ ಮಾಡಿಸಿದ್ದರು. ವೃದ್ಧ ದಂಪತಿಯ ಬಾಳಿಗೆ ಬೆಳಕಾದರು, ಬಳಿಕ ಬಡ ಹೆಣ್ಣು ಮಗಳ ಮದುವೆಗೆ ಸಹಾಯ ಮಾಡಿದ್ದರು. ಇತ್ತೀಚೆಗೆ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವಾ ಟ್ರಸ್ಟ್ ಮೂಲಕ ಅಹಾರ ಕಿಟ್ ಸೇರಿ ಅಗತ್ಯ ವಸ್ತುಗಳ ಪೂರೈಸಿದ್ದರು. ಇದೀಗ ಮಲೆನಾಡಿನಲ್ಲಿ ಅಕ್ಷರ ಕ್ರಾಂತಿ ಶುರು ಮಾಡಿದ್ದಾರೆ ಕನ್ನಡದ ರನ್ನ.
ಇದೀಗ ಮಲೆನಾಡಿನ ದಟ್ಟ ಕಾಡಿನಲ್ಲಿರುವ ಶಾಲೆಯ ಮಕ್ಕಳಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಿದ್ದಾರೆ ಕೋಟಿಗೊಬ್ಬ. ತಮ್ಮ ತವರು ಶಿವಮೊಗ್ಗದಲ್ಲಿ ಒಟ್ಟು ನಾಲ್ಕು ಶಾಲೆಗಳನ್ನು ದತ್ತು ಪಡೆದು, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೂಸೈಟಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಾಗರ ತಾಲೂಕಿನ ಆವಿಗೆ ಹಳ್ಳಿಯ ಶಾಲೆಯನ್ನ ದತ್ತು ಪಡೆದಿದ್ದಾರೆ. ಆವಿಗೆ ಶಾಲೆ ಸಾಗರದಿಂದ 49 ಕಿಲೋಮೀಟರ್ ದೂರದಲ್ಲಿದೆ. ವಿಚಿತ್ರ ಅಂದ್ರೆ ಈ ಶಾಲೆ ಇರೋದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರೋ ಗುಡ್ಡಗಾಡಿನ ಕುಣಬಿ ಜನಾಂಗದ ಮಕ್ಕಳಿಗೆ ಸರ್ಕಾರ ಈ ಶಾಲೆ ಕಟ್ಟಿಸಿದೆ. ಆದರೆ ಪಾಠ ಕಲಿಸೋ ಶಿಕ್ಷಕರೇ ಇಲ್ಲಿಲ್ಲ. ಹೀಗಾಗಿ ಈ ಶಾಲೆ ದತ್ತು ಪಡೆದಿದ್ದಾರೆ. ಶಾಲೆಯನ್ನು ದತ್ತು ಪಡೆಯೋದರ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರನ್ನ ವ್ಯವಸ್ಥೆ ಮಾಡೋ ಆಲೋಚನೆ ಮಾಡಿದ್ದಾರೆ ಕಿಚ್ಚ ಸುದೀಪ್.
ಕಿಚ್ಚನ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸಹ ಸುದೀಪ್ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಸ್ಕೂಲ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.