ನಗು ಕಿತ್ತುಕೊಂಡ ವಿಧಿಗೆ ಸವಾಲೊಡ್ಡಿ ಗೆದ್ದ ಸಾಧಕ..!

Date:

ನಗು ಕಿತ್ತುಕೊಂಡ ವಿಧಿಗೆ ಸವಾಲೊಡ್ಡಿ ಗೆದ್ದ ಸಾಧಕ..!

ಸಾಯಿ ಕೌಸ್ತುಭ್ ದಾಸ್ಗುಪ್ತಾ. ವಯಸ್ಸು ಈಗಷ್ಟೇ 26. ಊರು ಪಶ್ಚಿಮ ಬಂಗಾಳದ ಸಿಲಿಗುರಿ. ಇವರ ಜೀವನದಲ್ಲಿ ನಗುವ ಎಲ್ಲ ಅವಕಾಶಗಳನ್ನೂ ಆ ವಿಧಿ ಕಿತ್ತುಕೊಂಡಿತ್ತು. ಹಾಗಿದ್ರೂ ‘ಹೃದಯದಿಂದ ನಗುತ್ತೇನೆ, ಈ ಜಗತ್ತನ್ನೂ ನಗಿಸುತ್ತೇನೆ’ ಎಂದು ಸವಾಲ್ ಹಾಕಿಕೊಂಡಿದ್ದೇ ಸಾಯಿ ಕೌಸ್ತುಭ್. ಅಬ್ಬಾ! ಈಗ ನೋಡಿ, ಇಡೀ ದೇಶ ಅಷ್ಟೇ ಯಾಕೆ ವಿದೇಶಗಳಲ್ಲೂ ಇವರನ್ನು ಹೆಮ್ಮೆಯಿಂದ, ಪ್ರೇರಣೆಯಿಂದ ನೋಡುವಂತಾಗಿದೆ.
ಸಾಯಿ ಎದುರಿಸಿದ ಬದುಕಿನ ಸವಾಲು ಅಸಮಾನ್ಯ. ಹೇಳಬೇಕೆಂದ್ರೆ ಮೂರೂವರೆ ತಿಂಗಳ ಮಗುವಾಗಿದ್ದ ಸಾಯಿ, ಅಂದು ತಾಯಿ ಶೀಲಾ ದಾಸ್ಗುಪ್ತಾ ಮಡಿಲಲ್ಲಿ ಮಮತೆಯ ಸವಿ ಉಣ್ಣುತ್ತಿದ್ದ. ಅದೊಮ್ಮೆ ತನ್ನ ಮಡಿಲಿಂದ ಎತ್ತಿ ಅಜ್ಜಿಯ ತೊಡೆ ಮೇಲೆ ಮಲಗಿಸಲು ಹೋದಾಗ ಭುಜದ ಮೂಳೆ ಮುರಿದಿತ್ತಂತೆ. ಹಾಗೆಯೇ ಮಗುವಿಗೆ ಒಂದು ವರ್ಷ ತುಂಬುವಷ್ಟರಲ್ಲೇ ಮೂರು ಫ್ಯಾಕ್ಚರ್! ಅಪ್ಪ-ಅಮ್ಮನಂತೂ ಚಿಂತಿತರಾಗಿದ್ರು. ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಕತ್ತಗೆ ಕರೆದುಕೊಂಡು ಬಂದಾಗ ಗೊತ್ತಾಗಿದ್ದು ಅದು, ಕಾಲಜನ್ ಕಾಯಿಲೆ ಎಂಬುದು.


ಕೌಸ್ತುಭ್ ಮೂಳೆಗಳು ಅತೀ ದುರ್ಬಲವಾಗಿದ್ವು. ಅವು ಯಾವಾಗ ಬೇಕಾದರೂ ಮುರಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದಾಗ ತಂದೆ-ತಾಯಿಗೆ ದಿಕ್ಕೇ ತೋಚದಂತಾಗಿತ್ತು. ಆದರೆ, ಅವರು ಆ ಕ್ಷಣದಲ್ಲಿ ಕೈಗೊಂಡ ನಿರ್ಧಾರ ಸಕಾರಾತ್ಮಕವಾಗಿತ್ತು. ಅದು ಎಲ್ಲ ಪಾಲಕರಿಗೂ ಸ್ಫೂರ್ತಿ ನೀಡುವಂಥದ್ದು. ‘ದೇವರು ನಮಗೆ ವಿಶೇಷ ಕೊಡುಗೆ ನೀಡಿದ್ದಾನೆ. ಈ ಮಗುವನ್ನು ಜತನದಿಂದಲೇ ಸಂಭಾಳಿಸೋಣ. ಮುಂದೆ, ಇವನನ್ನು ವಿಶೇಷ ವ್ಯಕ್ತಿಯಾಗಿಸೋಣ‘ ಎಂದು ಅಪ್ಪ ಅಮ್ಮ ಸಂಕಲ್ಪಿಸಿದ್ರು.
ನಾಲ್ಕೈದು ವರ್ಷದವನಾಗಿದ್ದಾಗಲೇ ಸಾಯಿ ಟಿವಿ ನೋಡಿಕೊಂಡು ತುಂಬ ಚೆನ್ನಾಗಿ ಡಾನ್ಸ್ ಮಾಡೋದನ್ನು ರೂಢಿಸಿಕೊಂಡ. ‘ನನ್ನನ್ನು ಡಾನ್ಸ್ ಕ್ಲಾಸ್ಗೆ ಕಳುಹಿಸಿ’ ಎಂದು ಹಠ ಹಿಡಿದ. ಈತನ ಶಾರೀರಿಕ ಪರಿಸ್ಥಿತಿಯ ಅರಿವಿದ್ದರೂ ಡ್ಯಾನ್ಸ್ ಮಾಡುವಾಗ ಸಾಯಿ ಅನುಭವಿಸುತ್ತಿದ್ದ ಸಂತೋಷ ಕಂಡು ಪಾಲಕರು ಕ್ಲಾಸ್ಗೇನೋ ಸೇರಿಸಿದರು. ಆದರೆ, ನೃತ್ಯ ಮಾಡುವಾಗಲೇ ಹಲವು ಬಾರಿ ಮೂಳೆ ಮುರಿದು ಫ್ಯಾಕ್ಚರ್ ಆಯಿತು. ವೈದ್ಯರು-ಡ್ಯಾನ್ಸ್ ಇವನಿಗಾಗಿ ಇಲ್ಲ ಬೇಡವೇ ಬೇಡ ಎಂದುಬಿಟ್ಟಿದ್ರು.
ಇನ್ನು ತಾಯಿ ಶೀಲಾ ದಾಸ್ಗುಪ್ತಾ ಒಳ್ಳೆ ಹಾಡುಗಾರ್ತಿ. ತಾಯಿ ಹಾಡುವಾಗ ಸಾಯಿ ಕೂಡ ದನಿಗೂಡಿಸುತ್ತಿದ್ದ. ದನಿ ಇಂಪಾಗಿತ್ತು. ‘ಮಗು, ನೀನು ಸ್ವರಗಳನ್ನು ತುಂಬ ಬೇಗ ಗುರುತಿಸುತ್ತಿ. ಕಂಠವೂ ಚೆನ್ನಾಗಿದೆ. ಸಂಗೀತದತ್ತ ಹೆಚ್ಚಿನ ಆಸಕ್ತಿ ವಹಿಸಬಹುದಲ್ಲವೇ?‘ ಎಂದು ಅಮ್ಮ ಹೇಳಿದಾಗ ಈತನ ಬಾಳಲ್ಲಿ ಹೊಸ ಬೆಳಗೊಂದು ಪ್ರವೇಶಿಸಿತು. ತಾಯಿಯಿಂದಲೇ ಸಂಗೀತ ಕಲಿಯತೊಡಗಿ, ಹಾಡಲು ಆರಂಭಿಸಿದ.

ಉತ್ತಮ ಹಾಡುಗಾರಿಕೆಗೆ ತನ್ನ ಎಂಟನೇ ವಯಸ್ಸಲ್ಲೇ ಪಶ್ಚಿಮ ಬಂಗಾಳದ ಪ್ರತಿಷ್ಠಿತ ದಿಶಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ. ಆದರೆ, ಆ ವಿಧಿ ಅದೆಷ್ಟು ಕ್ರೂರಿ ಎಂದರೆ ಸಾಯಿ ಸಣ್ಣ ಖುಷಿಯನ್ನೂ ಅದಕ್ಕೆ ನೋಡಲಾಗಲಿಲ್ಲ. ಅದೊಂದು ದಿನ, ಬಾತರೂಂನಲ್ಲಿ ಕುಸಿದು ಬಿದ್ದಾಗ ಎರಡೂ ಕಾಲಿನ ಮೂಳೆಗಳು ಮುರಿದ ಪರಿಣಾಮ ಮತ್ತೆ ಫ್ಯಾಕ್ಚರ್! ಆಗ, ಮನೆಯೇ ಪ್ರಪಂಚವಾಯಿತು. ಇಂಥ ಕಾಯಿಲೆಗಳಿಗೆ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದಾಗ ಪಶ್ಚಿಮ ಬಂಗಾಳದಲ್ಲಿನ ಸ್ವಂತ ಮನೆ ಮಾರಿ, ತಂದೆ ಕೌಶಿಕ, ತಾಯಿ ಶೀಲಾ ಉದ್ಯೋಗವನ್ನೂ ತ್ಯಜಿಸಿ ಸಾಯಿ, ಆತನ ತಮ್ಮ ಕುಶಲ್ನೊಂದಿಗೆ ಪುಟ್ಟಪರ್ತಿಗೆ ಬಂದು ನೆಲೆಸಿದರು.
ರಾಜ್ಯವನ್ನೇ ಬದಲಿಸಿ ಆಂಧ್ರಕ್ಕೆ ಬಂದು ನೆಲೆಸಿದ್ದರಿಂದ ಸಂಸ್ಕೃತಿ, ಆಹಾರ ಪದ್ಧತಿ ಎಲ್ಲವೂ ಬದಲಾಯಿತು. ಆಗ ಕೌಸ್ತುಭ್ ನಂಬಿದ್ದು ಸತ್ಯ ಸಾಯಿಬಾಬಾರನ್ನು. ಸಾಯಿ ಭಕ್ತಿ ಡಿವಿಡಿ ಹೊರತಂದದ್ದಲ್ಲದೆ 150ಕ್ಕೂ ಹೆಚ್ಚು ಹಾಡುಗಳನ್ನು ತಾನೇ ಕಂಪೋಸ್ ಮಾಡಿದ. ಕ್ರಮೇಣ ಈತನ ಹಾಡಿನ ಇಂಪು ಎಲ್ಲೆಡೆ ಪಸರಿಸತೊಡಗಿತು. ಹೀಗೆ ಬದುಕು ಮತ್ತೆ ಸುಗಮವಾಗತೊಡಗಿದಾಗಲೇ 2009ರಲ್ಲಿ ಮತ್ತೊಂದು ಆಘಾತ. ಕೌಸ್ತುಭ್ ದೇಹದ ಕೀಲುಗಳು ಚಲನೆ ಕಳೆದುಕೊಂಡು ಇಡೀ ದೇಹ ಸ್ತಬ್ಧವಾಯಿತು.
‘ಬದುಕು ಇರುವುದು ಶೋಕಿಸಲು ಅಲ್ಲ, ಸಂಭ್ರಮಿಸಲು’ ಎಂಬ ಸಕಾರಾತ್ಮಕ ಚಿಂತನೆ ಮಿಂಚಿನಂತೆ ಹೊಳೆಯಿತು ಸಾಯಿಗೆ. ತನಗೆ ಬೇಕಾದ ವ್ಹೀಲ್ಚೇರ್ನ ವಿನ್ಯಾಸ ತಾನೇ ರೂಪಿಸಿ, ಬೆಂಗಳೂರಿನಿಂದ ತರಿಸಿಕೊಂಡ. ಗೆಳೆಯನ ಸಲಹೆಯಂತೆ ಮನೆಯಲ್ಲೇ ಕುಳಿತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿತದ್ದೂ ಆಯಿತು. ಎರಡೇ ಬೆರಳು ಕಾರ್ಯನಿರ್ವಹಿಸುತ್ತಿದ್ದರೂ ಅದರ ಬಲದಿಂದಲೇ ಇಂದು ಪ್ರತಿಷ್ಠಿತ ಕಂಪನಿಯೊಂದಕ್ಕೆ ಗ್ರಾಫಿಕ್ ಡಿಸೈನರ್ ಆಗಿದ್ದಾರೆ.
ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ನಗುವನ್ನು ಆತ್ಮೀಯ ಸ್ನೇಹಿತನಾಗಿಸಿಕೊಂಡು ಬದುಕನ್ನು ಸುಂದರ, ಸಾರ್ಥಕವಾಗಿಸಿರೋದೆ ಇವರ ಸಾಧನೆಯಲ್ವಾ.ಅದಕ್ಕೆ ಸಾವಿರ ಸಾವಿರ ಸಲಾಂ ಸಲ್ಲಿಸಿದರೂ ಕಡಿಮೆಯೇ!

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...