ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಮತ್ತೆ ದೇಸಿ ಕ್ರಿಕೆಟ್‌ಗೆ ಮರಳುವ ಆಸೆ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ (ಪಿಸಿಎ) ಸಿಕ್ಸರ್ ಕಿಂಗ್ ಯುವಿ ಅವರನ್ನು ದೇಸಿ ಕ್ರಿಕೆಟ್‌ಗೆ ಕರೆತರುವ ಪ್ರಯತ್ನ ನಡೆಸಿತ್ತು. ಪಂಜಾಬ್ ಕೋರಿಕೆಗೆ ಯುವಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಯುವಿ ಆಸೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಣ್ಣೀರೆರಚಿದೆ.
ಜೂನ್ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಕೆಚ್ಚೆದೆಯ ಮಹಾರಾಜ ಯುವಿ ಅವರನ್ನು ದೇಸಿ ಕ್ರಿಕೆಟ್‌ನಲ್ಲಿ ಅಂದರೆ ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಪಂಜಾಬ್ ಪರ ಆಡಿಸಲು ಪಿಸಿಎ ಯೋಚಿಸಿತ್ತು. ಈ ಬಗ್ಗೆ ಬಿಸಿಸಿಐಗೆ ಪತ್ರವೂ ಬರೆಯಲಾಗಿತ್ತು. ಆದರೆ ಯುವಿ ಮತ್ತು ಪಿಸಿಎ ಕೋರಿಕೆಯನ್ನು ಬಿಸಿಸಿಐ ನಿರಾಕರಿಸಿದೆ.
ದೇಸಿ ಕ್ರಿಕೆಟ್‌ಗೆ ಮರಳುವ ಯುವಿ ಕೋರಿಕೆಗೆ ಬಿಸಿಸಿಐ ನಿರಾಕರಿಸಲು ಕಾರಣವಿದೆ. ಬಿಸಿಸಿಐನಲ್ಲಿರುವ ಕಟ್ಟುನಿಟ್ಟಿನ ನಿಯಮದಿಂದಾಗಿ ಯುವಿ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡಲಾಗುತ್ತಿಲ್ಲ.
ದೇಸಿ ಕ್ರಿಕೆಟ್‌ಗೆ ಯುವಿಯನ್ನು ಕರೆತರುವ ಬಗ್ಗೆ ಪಂಜಾಬ್ ತೋರಿದ್ದ ಹುಮ್ಮಸ್ಸು, ಯುವಿ ನೀಡಿದ್ದ ಗ್ರೀನ್ ಸಿಗ್ನಲ್ ಕಂಡು ಯುವಿ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಇದಕ್ಕೆ ಹಿನ್ನಡೆಯಾಗಿದೆ. ಕಾರಣ; ಬಿಸಿಸಿಐ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರ ಒಂದು ವೇಳೆ ನಿವೃತ್ತಿ ವಾಪಸ್ ಪಡೆಯುವುದಾದರೆ ಆತ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಿರಬಾರದು. ಆಗ ಮಾತ್ರ ಆತ ದೇಸಿ ಕ್ರಿಕೆಟ್ ಅಥವಾ ಐಪಿಎಲ್‌ನಲ್ಲಿ ಆಡಲು ಅರ್ಹನಾಗಿರುತ್ತಾನೆ. ಆದರೆ ಯುವಿ ಈಗಾಗಲೇ ವಿದೇಶಿ ಲೀಗ್‌ಗಳಲ್ಲಿ ಆಡಿದ್ದಾರೆ. ಹೀಗಾಗಿ ಯುವಿಗೋಸ್ಕರ ನಿಯಮ ಬದಲಾಯಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
ಭಾರತೀಯ ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಆಡಿದ ಉದಾಹರಣೆಯಿಲ್ಲವೆ? ಇದೆ. ಅಂಬಾಟಿ ರಾಯುಡು 2019ರ ವಿಶ್ವಕಪ್ ವೇಳೆ ನಿವೃತ್ತಿ ಘೋಷಿಸಿದ್ದರು. ಮತ್ತೆ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್ ಮತ್ತು ಕಳೆದ ಐಪಿಎಲ್‌ನಲ್ಲೂ ಸಿಎಸ್‌ಕೆ ಪರ ಆಡಿದ್ದರು. ಆದರೆ ರಾಯುಡು ಯಾವುದೇ ವಿದೇಶಿ ಲೀಗ್‌ಗಳಲ್ಲ ಆಡಿಲ್ಲವಾದ್ದರಿಂದ ಅವರು ನಿವೃತ್ತಿ ವಾಪಸ್ ಪಡೆಯುವುದಾಗಿ ಬಿಸಿಸಿಐ ಅನುಮತಿಗೂ ಕಾಯುವ ಅಗತ್ಯ ಇರಲಿಲ್ಲ. ಯಾಕೆಂದರೆ ವಿದೇಶಿ ಲೀಗ್‌ಗಳಲ್ಲಿ ಆಡದ ಹೊರತು ಭಾರತೀಯ ಆಟಗಾರ ತಾನು ಬಯಸಿದರೆ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್‌ನಲ್ಲಿ ಆಡಬಹುದು.
ಹಿಂದೆ ಭಾರತದ ಅನುಭವಿ ಬೌಲರ್ ಪ್ರವೀಣ್ ತಾಂಬೆಗೂ ಬಿಸಿಸಿಐ ನಿಯಮ ಅಡ್ಡಿ ಮಾಡಿತ್ತು. ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಪ್ರವೀಣ್ ತಾಂಬೆ ಆ ಬಳಿಕ ನಿವೃತ್ತಿ ವಾಪಸ್ ಪಡೆದಿದ್ದರು. ಆದರೆ ಕಳೆದ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ತಾಂಬೆ ಇದ್ದರಾದರೂ ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ಲಭಿಸಲಿಲ್ಲ. ಅವರನ್ನು ಕೆಕೆಆರ್‌ನಿಂದ ಹೊರಗಿಡಲಾಯಿತು. ಯಾಕೆಂದರೆ ತಾಂಬೆ ಅದಾಗಲೇ ದುಬೈ ಟಿ10 ಲೀಗ್‌ನಲ್ಲಿ ಆಡಿಯಾಗಿತ್ತು. ಯುವಿ ಕೂಡ ಈಗಾಗಲೇ ದುಬೈ ಟಿ10 ಲೀಗ್ ಮತ್ತು ಗ್ಲೋಬಲ್ ಟಿ20 ಕೆನಡಾ ಲೀಗ್‌ಗಳಲ್ಲಿ ಆಡಿರುವುದರಿಂದ ಅವರಿಗೆ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡಲಾಗುತ್ತಿಲ್ಲ.
ಕಮ್ ಬ್ಯಾಕ್ ಆಗುವ ಉತ್ಸಾಹದಲ್ಲಿದ್ದ ಯುವಿಗೆ ಶಾಕ್..!
Date: