ವಿಭಾಗವಾರು ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೇ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಶಾಸಕರ ಆಕ್ಷೇಪದ ನಡುವೆಯೇ ಸಿಎಂ ಬಿಎಸ್‌ವೈ ಆಡಳಿತಕ್ಕೆ ಚುರುಕು ನೀಡಿ ಅಭಿವೃದ್ಧಿ ವೇಗ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಸೋಮವಾರ ಬಿಎಸ್‌ವೈ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದ ಶಾಸಕರ ಸಭೆ ನಡೆಸಿದ್ದರು. ಈ ವೇಳೆ ಯಡಿಯೂರಪ್ಪ ಅವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಆಡಳಿತದಲ್ಲಿ ಇತರರ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಕರುಣಾಕರ ರೆಡ್ಡಿ ಸೇರಿದಂತೆ ಕೆಲವು ಹಿರಿಯ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಂಪುಟ ಪುನರ್ ರಚನೆ ಮಾಡಲು ಬಿಎಸ್ವೈ ಉತ್ಸುಕರಾಗಿದ್ದರೂ, ಸದ್ಯ ವಿಸ್ತರಣೆಯನ್ನು ಮಾಡಲು ಮುಖ್ಯಮಂತ್ರಿ ಸಜ್ಜಾಗಿದ್ದು, ಆ ಪಟ್ಟಿಯಲ್ಲಿ ಐವರ ಹೆಸರು ಇದೆ ಎಂದು ಹೇಳಲಾಗುತ್ತಿದೆ.