ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಮಾಸ್ತಿ, ಚಿತರಂಗದ ಅದ್ಭುತ ಬರಹಗಾರನ ಬಾಲ್ಯದ ದಿನಗಳ ನೆನಪು.

Date:

ತಮ್ಮ ಬಾಲ್ಯದ ನೆನಪು ಹಾಗು ಶಾಲೆಗೆ ಹೋದ ಪರಿ ಎಲ್ಲಾ ಹಳೆ ನೆನಪುಗಳನ್ನು ಮೆಲುಕು ಹಾಕಿದ ಕನ್ನಡ ಚಿತ್ರರಂಗದ ಬರಹಗಾರ ಮಾಸ್ತಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ

ಮೇಷ್ಟ್ರು ಶಾಲೆಯಲ್ಲಿ ಪಾಠ ಮಾಡ್ತಿರೋವಾಗ ತರಗತಿಯ ಮಧ್ಯೆ ಅಟೆಂಡರ್ ತಂದ ಒಂದು ಮೆಮೋ ಇಡೀ ಶಾಲೆಯ ಅಷ್ಟೂ ಮಕ್ಕಳ ಮನಸ್ಸಿನಲ್ಲಿ ಸಂಚಲನ ಸೃಷ್ಟಿ ಮಾಡಿಬಿಡುತ್ತಿತ್ತು . ಅದೇನಿತ್ತು ಅಂತಹ ವಿಶೇಷ ಆ ಮೆಮೋನಲ್ಲಿ ಅಂದ್ರೆ ಟೂರಿನ ಸುದ್ದಿ , ಶೈಕ್ಷಣಿಕ ಪ್ರವಾಸ . ಮಾಸ್ತರು ಮೆಮೋವನ್ನು ಸ್ಪಷ್ಟವಾಗಿ ಓದಿ ಎಷ್ಟು ಸ್ಥಳಗಳು , ಯಾವಯಾವ ಊರು , ಅಲ್ಲಿನ ವಿಶೇಷತೆ ಏನು , ಪ್ರವಾಸದ ಶುಲ್ಕ ಎಷ್ಟು , ಹೊರಡುವ ದಿನಾಂಕ ಹಿಂದಿರುಗುವ ದಿನಾಂಕ ಯಾವುದು , ಏನು ಎತ್ತ ಅಂತೆಲ್ಲಾ ಸಂಕ್ಷಿಪ್ತವಾಗಿ ಓದಿ ಹೇಳುತ್ತಿದ್ದರು.
ನಾವು ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಮೊದಲಿಗೆ ಅಮ್ಮನಿಗೆ ಟೂರಿನ ಬಗ್ಗೆ ಹೇಳುತ್ತಿದ್ದೆವು , ಅಮ್ಮನ ಬಾಯಿಂದ ಬರುತ್ತಿದ್ದ ಮೊದಲನೇ ಪದವೇ…. ನಿಮ್ ಮೇಷ್ಟ್ರುಗಳಿಗೆ ಮಾಡಕ್ಕೆ ಇನ್ನೇನೂ ಕೆಲಸ ಇಲ್ವಾ ? ಅಂತ ! ಸುಮ್ನೆ ಓದ್ಕೋ ಹೋಗು ಈ ವಯಸ್ಸಿಗೇ ಟೂರೂ ಗೀರು ಅಂತೆಲ್ಲಾ ಹೋಗ್ಬಾರ್ದು ಅಲ್ಲೆಲ್ಲಾ ನೀರು ಇರುತ್ತೆ .


ನಮಗೆ ಅಲ್ಲೇ ಭ್ರಮನಿರಸನ ಆಗೋಗೋದು . ನಾವು ಆ ಕ್ಷಣಾನೇ ಹಠ ಶುರುಮಾಡ್ಬಿಡ್ತಿದ್ವಿ ಆಗ ಅಮ್ಮ ……. ನಿಮ್ಮಪ್ಪ ಬರ್ತಾರಲ್ಲ ಪರ್ಮೀಷನ್ ತಗೊಂಡು ಧಾರಾಳವಾಗಿ ಹೋಗಪ್ಪ ಯಾರು ಬೇಡ ಅಂದ್ರು , ಅಂತ ಹೇಳಿ ಕೈ ತೊಳ್ಕೊಂಬಿಡೋವ್ರು .‌ ಸಂಜೆ ಮನೆಗೆ ಬಂದ ಅಪ್ಪನ ಮೂಡು ನೋಡಿ ಕೇಳೋಣ ಅನ್ಕೊಂಡು ಕೇಳಕ್ಕಾಗದೇ ಒದ್ದಾಡಿ ಭಯ ಪಟ್ಟು ಅಮ್ಮನನ್ನು ಮನಸ್ಸಿನಲ್ಲಿಯೇ ಬೈಕೊಂಡು ಉಂಡು ಮಲಗಿಬಿಡುತ್ತಿದ್ದೆವು .

ಮಾರನೇ ದಿನ ಮೇಷ್ಟ್ರು… ಯಾರ್ ಯಾರು ಬರ್ತಿದೀರೋ ಟೂರಿಗೆ ಅಂತ ಒಂದು ನೂರು ಪೇಜಿನ ಹೊಚ್ಚಹೊಸಾ ನೋಟ್ ಬುಕ್ಕು ಪೆನ್ನು ಹಿಡಿದು ನೊಂದಣಿಗೆ ತಯಾರಾಗಿಬಿಡೋವ್ರು. ಒಂದಿಬ್ಬರು ದುಡ್ಡು ಕೊಟ್ಟು ಹೆಸರು ಬರೆಸಿಬಿಡೋವ್ರು ನಮ್ ಕಣ್ಣಿಗೆ ಅವರು ಅದೃಷ್ಟವಂತರಂತೆ ಕಾಣೋವ್ರು .

ಅಂತೂ ಧೈರ್ಯ ಮಾಡಿ ಅಪ್ಪನ ಹತ್ತಿರ ಪ್ರವಾಸದ ಅಹವಾಲನ್ನು ಇಡುತ್ತಿದ್ದೆವು . ಅಪ್ಪ ಕಳಿಸಲು ಸಾಧ್ಯಾನೇ ಇಲ್ಲ ಅಂತ ಕಡ್ಡಿತುಂಡು ಮಾಡಿದಂಗೆ ಹೇಳಿಬಿಡೋವ್ರು . ಶಾಲೆಯಲ್ಲಿ ಎಲ್ಲಾ ಹೋಗ್ತಿದಾರೆ , ಹದಿಮೂರು ಸ್ಥಳಗಳಂತೆ , ಹುಷಾರಾಗಿ ಕರ್ಕೊಂಡೋಗ್ತಾರಂತೆ ಹೀಗೆ ಏನೇ ಹೇಳಿದರೂ . ಕೊನೆಗೆ ಒಂದೆರಡೊತ್ತು ಊಟ ಬಿಟ್ಟು ಸತ್ಯಾಗ್ರಹ ಕೈಗೊಂಡು ಅತ್ತು ಸುರಿದು ಏನೆಲ್ಲಾ ತಿಪ್ಪರಲಾಗ ಹೊಡೆದರೂ ಅಪ್ಪ ಕರಗುತ್ತಿರಲಿಲ್ಲ .
ಮನೆಯಲ್ಲಿ ನಮ್ಮನ್ನ ಟೂರಿಗೆ ಕಳಿಸಲ್ಲ ಅಂತ ನಾವೇ ತೀರ್ಮಾನಿಸಿ ಪೆಚ್ಚುಮೋರೆಯೊಂದಿಗೆ ಶಾಲೆಗೆ ತೆರಳಿ ಅಲ್ಲಿ ಪ್ರವಾಸಕ್ಕೆ ಹೋಗುವವರ ಚಟುವಟಿಕೆ ಉತ್ಸಾಹ ಕಂಡು ಖುಷಿ ಪಟ್ಟುಕೊಳ್ಳುತ್ತಿದ್ದೆವು .
ಪ್ರವಾಸಕ್ಕೆ ತೆರಳುವರ ಖುಷಿಯೋ ಹೇಳತೀರದ್ದು ಮನೆಯಲ್ಲಿ ಚಕ್ಕುಲಿ ನಿಪ್ಪಟ್ಟು ಕೋಡುಬಳೆ ರವೆಉಂಡೆ ಹೀಗೆ ತರಹೇವಾರಿ ತಿನಿಸುಗಳನ್ನು ಮಾಡಿಸಿಕೊಂಡು ಅದನ್ನು ಡಬ್ಬಿಗಳಲ್ಲಿ ಪಟ್ಟಣ ಕಟ್ಟಿಸಿಕೊಂಡು ಸಿದ್ದವಾಗುತ್ತಿದ್ದರು .

ಟೂರಿಗೆ ಹೊರಡುವ ದಿನ ಮುಂಜಾನೆ ಶಾಲೆಯ ಬಳಿಯೇ ಬಸ್ಸು ಬರುತ್ತಿತ್ತು , ಅದಕ್ಕೆ ಟೀಚರ್ರು ಮತ್ತು ಒಂದಿಬ್ಬರು ವಿದ್ಯಾರ್ಥಿನಿಯರು ಪೂಜೆ ಸಲ್ಲಿಸುತ್ತಿದ್ದರು . ಮಕ್ಕಳು ಸಂಭ್ರಮದಿಂದ ಕಿಟಕಿ ಬಳಿ ಕೂರುತ್ತಿದ್ದರು . ನಾವು ಟೂರಿಗೆ ಹೋಗದಿದ್ದರು ಆ ಕುತೂಹಲವನ್ನು ಕಣ್ತುಂಬಿಕೊಳ್ಳಲು ಹೋಗುತ್ತಿದ್ದೆವು . ಟೀಚರ್ಗಳು ತಮ್ಮೊಂದಿಗೆ ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಿದ್ದರು .

ನಾವು ಹೋಗಲಿಲ್ಲ ಅನ್ನೋ ಬೇಸರ ನಮ್ಮಲ್ಲಿದ್ದರು ಮೂರು ದಿನದ ರಜೆಯಲ್ಲಿ ಅದನ್ನು ಮರೆತುಬಿಡುತ್ತಿದ್ದೆವು . ಬಂದವರು ಶಾಲೆಯಲ್ಲಿ ಪ್ರವಾಸದ ಅನುಭವದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೆ ನಾವು ಮಿಕಮಿಕ ನೋಡುತ್ತಿದ್ದೆವು . ಟೀಚರ್ ಆದೇಶದ ಮೇರೆಗೆ ಪ್ರವಾಸದಿಂದ ಬಂದ ಮಕ್ಕಳು ಅದರ ಬಗ್ಗೆ ಒಂದು ಪುಟಕ್ಕೂ ಮೀರದಂತೆ ಪ್ರಬಂಧ ಬರೆಯುತ್ತಿದ್ದರು . ನಾವು ಅದನ್ನ ಕುತೂಹಲದಿಂದ ಓದುತ್ತಿದ್ದೆವು . ಅವರ ಬರವಣಿಗೆಯಲ್ಲಿ ಪ್ರವಾಸವನ್ನು ಅನುಭವಿಸುತ್ತಿದ್ದೆವು .
ಏನೇ ಹೇಳಿ ಬದುಕೆಂಬ ಪ್ರಯಾಣದಲ್ಲಿ ಬಾಲ್ಯದ ಶಾಲಾ ಪ್ರವಾಸವು ಅತ್ಯಮೂಲ್ಯ ಎಂದು ಎಲ್ಲಾ ನೆನಪುಗಳನ್ನ ಮಾಸ್ತಿ ಅವರು ಮೆಲುಕು ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...