ಜ.16ರಿಂದ ಆರಂಭವಾದ ಪ್ರತಿಷ್ಠಿತ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (IFFI) 51ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಕೊರೊನಾ ವೈರಸ್ ಕಾರಣದಿಂದಾಗಿ ಈ ಸಮಾರಂಭ ತಡವಾಗಿ ಆರಂಭವಾಗಿದೆ. ಈ ಸಮಾರಂಭವು ಪಣಜಿ ನಗರದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.
ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿರುವ ವಿಶ್ವದ ಹಳೆಯ ಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದು ದೊಡ್ಡ ಭಾಗ್ಯ. ಈ ವರ್ಷ ಕೂಡ ಕಾರ್ಯಕ್ರಮ ನಡೆದಿರೋದು ಸಮಾಧಾನ ಮೂಡಿಸುವುದು’ ಎಂದು ಸುದೀಪ್ ಹೇಳಿದ್ದಾರೆ. ಜ.16ರಿಂದ ಜ.24ರವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಈ ಬಾರಿ 119 ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಕೆಲವು ಸಿನಿಮಾಗಳು ದೊಡ್ಡ ಪರದೆಯಲ್ಲಿ ಪ್ರದರ್ಶನ ಕಂಡರೆ, ಮತ್ತೆ ಕೆಲವು ಆನ್‌ಲೈನ್‌ನಲ್ಲಿ ಪ್ರದರ್ಶನ ಆಗಲಿವೆ.
‘ಸ್ಯಾಂಡಲ್‌ವುಡ್‌ನ ರಾಯಭಾರಿ’ ಎಂದು ಜನರು ಸುದೀಪ್‌ರನ್ನು ಕರೆಯುತ್ತಾರೆ. ಇನ್ನು ಆಲ್‌ನೈನ್‌ನಲ್ಲಿ ಇಡೀ ದಿನ ಟ್ರೆಂಡಿಂಗ್‌ನಲ್ಲಿರುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಸುದೀಪ್, ‘ಇಷ್ಟು ಪ್ರೀತಿ ನೀಡುವ ಜನರನ್ನು ಗಳಿಸಿರೋದು ನಿಜಕ್ಕೂ ಪುಣ್ಯದ ಕೆಲಸ. ಕರ್ನಾಟಕ ನನಗೆ ಸಾಕಷ್ಟು ಗೌರವ ನೀಡಿದೆ. ಇದು ಪ್ರಶಸ್ತಿಯೂ ಅಲ್ಲ, ಪ್ರತಿಫಲವೂ ಅಲ್ಲ. ಅದು ನಮ್ಮ ಬೆಳವಣಿಗೆಯ ಭಾಗವೊಂದನ್ನು ನೋಡಿ ಗೌರವಿಸಿರುವುದಾಗಿದೆ’ ಎಂದು ಹೇಳಿದ್ದಾರೆ.
ಕಮರ್ಷಿಯಲ್ ಸಿನಿಮಾ ಹಾಗೂ ಸಮಾನಾಂತರವಾದ ಸಿನಿಮಾಗಳ ಬಗ್ಗೆ ಮಾತನಾಡಿದ ಸುದೀಪ್ “ಕಮರ್ಷಿಯಲ್ ಸಿನಿಮಾ ನಿರ್ದೇಶಕರು ಮಾತ್ರ ದುಡ್ಡು ಮಾಡಬೇಕು ಅಥವಾ ಪರ್ಯಾಯ ನಿರ್ದೇಶಕರು ಬೌದ್ಧಿಕವಾಗಿ, ಪ್ರಯೋಗಾತ್ಮಕವಾಗಿ ಚಿತ್ರ ಮಾಡಬೇಕು. ಇದು ಒಂದು ಪ್ರಾಕಾರದ ಆಯ್ಕೆಯಾಗಿದೆ. ಇದಕ್ಕೆ ಒಂದು ನಿರ್ದಿಷ್ಟ ವಿಧಾನದ ಅಗತ್ಯವಿದೆ. ದಿನದ ಕೊನೆಯಲ್ಲಿ, ನಾವೆಲ್ಲರೂ ಒಬ್ಬರಿಗೊಬ್ಬರು ಮಾಡಿದ ಸಿನಿಮಾವನ್ನು ನೋಡುತ್ತಿದ್ದೇವೆ. ತೃಪ್ತಿಕರ ಸಂಗತಿಯೆಂದರೆ, ಎರಡನ್ನೂ ನೋಡುವ ಜನರಿದ್ದಾರೆ” ಎಂದು ಹೇಳಿದ್ದಾರೆ.