ಕರಾವಳಿ ಜಿಲ್ಲೆ ಭೂತರಾದನೆಯ ತವರು ನೆಲ. ಇಲ್ಲಿಯ ಜನ ದೇವರನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ದೈವವನ್ನು ಮಾತ್ರ ಭಯ ಭಕ್ತಿಯಿಂದ ಆರಾಧಿಸ್ತಾರೆ. ತುಳುನಾಡಿಗೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದೇ ಈ ಭೂತಾರಾಧನೆ. ಜಗತ್ತಿನ ಯಾವ ಮೂಲೆಯಲ್ಲಿ ಹುಡುಕಿದ್ರು ಸಿಗದ ದೈವಾರಾಧನೆ ಕರಾವಳಿಯಲ್ಲಿ ಕಾಣಸಿಗುತ್ತೆ.
ಇಂದಿಗೂ ಅದೆಷ್ಟೋ ದೈವಗಳಿಗೆ ಕರಾವಳಿ ಮಂದಿ ಗುಡಿಗಳನ್ನು ಕಟ್ಟಿ ಮನೆ ದೇವರಾಗಿ, ಸೀಮೆ ದೇವರಾಗಿ, ಗ್ರಾಮ ದೇವತೆಯಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಒಂದೊಂದು ದೈವಗಳಿಗೂ ಒಂದೊಂದು ಇತಿಹಾಸವಿದೆ, ಅವುಗಳು ದೈವತ್ವಕ್ಕೆ ಏರೀದ ಕತೆಗಳಿವೆ. ಅದರಲ್ಲೂ ಭೂತರಾಧನೆಯ ಇತಿಹಾಸದಲ್ಲೇ ಅತಿ ವಿಶಿಷ್ಟ ಆಚರಣೆ ಎನಿಸಿರೋದು ಹುಲಿಕೋಲ.
ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ದೈವಗಳ ಆರಾಧನೆಯ ಕ್ರಮವೇ ಒಂದು ವಿಶಿಷ್ಟವಾಗಿರುತ್ತದೆ. ಇಲ್ಲಿ ಒಂದೊಂದು ದೈವಗಳನ್ನು ಒಂದೊಂದು ರೀತಿಯಾಗಿ ಆರಾಧಿಸುತ್ತಾರೆ. ಅದರಂತೆ ಹುಲಿಯನ್ನು ಕೂಡಾ ದೈವತ್ವಕ್ಕೆ ಏರಿಸಿ ಅದನ್ನು ಕೋಲದ ಮೂಲಕ ಆರಾಧಿಸಲಾಗುತ್ತದೆ, ಅಭಯವನ್ನು ಬೇಡಲಾಗುತ್ತದೆ. ಈ ಆಚರಣೆಯೇ ಪಿಲಿಕೋಲ
ಹುಲಿ ಬಂತು ಹುಲಿ ಅಂತಾ ದಿಕ್ಕೆಟ್ಟು ಓಡೋ ಜನ. ಮೈಯಿಡೀ ಹುಲಿಯಂತೆ ಬಣ್ಣಗಾರಿಕೆ ಮಾಡಿಕೊಂಡ ಹುಲಿ ದೈವದ ಅಬ್ಬರ. ಇದು ಪಿಲಿಕೋಲದ ಆಚರಣೆಯ ರೀತಿ. ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯ ಆವರಣದಲ್ಲಿ ನಡೆಯೋ ಈ ಆಚರಣೆ ವಿಚಿತ್ರ ಹಾಗೂ ವಿಶಿಷ್ಟ. ಯಾಕಂದ್ರೆ ಇಲ್ಲಿ ಹುಲಿದೈವ ಸ್ಪರ್ಶಿಸಿದ್ರೆ ಆ ವ್ಯಕ್ಯಿ ಮುಂದಿನ ಕೋಲದ ಒಳಗೆ, ಅಂದ್ರೆ ಎರಡು ವರ್ಷದಲ್ಲಿ ಸಾಯ್ತಾನೆ. ಇಲ್ಲವೇ ಕಂಟಕಕ್ಕೆ ಗುರಿಯಾಗ್ತಾನೆ ಅನ್ನೋ ಪ್ರತೀತಿ ಇದೆ.
ಹಾಗಾಗಿ ದೈವ ಸ್ಪರ್ಶಿಸದಂತೆ ಜನ ತಪ್ಪಿಸಿಕೊಳ್ಳುತ್ತಾರೆ. ಆದ್ರೆ ಹುಲಿ ದೈವ ಸ್ಪರ್ಶಿಸದೆ ಬಿಡೋದಿಲ್ಲ. ಒಂದು ವೇಳೆ ಯಾರಾನ್ನಾದರೂ ಸ್ಪರ್ಶಿಸದಿದ್ರೆ ಹುಲಿ ವೇಷಧಾರಿ ಸಾಯುತ್ತಾನೆ ಅನ್ನೋದೆ ಜನರ ನಂಬಿಕೆ. ಈ ಆಧುನಿಕ ಯುಗದಲ್ಲಿಯೂ ಹುಲಿ ದೈವದ ಕಾರಣಿಕ ನಡೆಯುತ್ತೆ ಅನ್ನೋ ದೃಢವಾದ ನಂಬಿಕೆ ಇಲ್ಲಿಯ ಭಕ್ತರಲ್ಲಿದೆ.
ತುಳುನಾಡು ಆಚರಣೆ ಮತ್ತು ನಂಬಿಕೆಯ ಆಡಂಬೋಲ ಅನ್ನೋದು ಎಷ್ಟು ಸತ್ಯವೋ ಪಿಲಿಕೋಲವೆಂಬ ಜನಪದ ಆಚರಣೆಯಲ್ಲೂ ಅಷ್ಟೇ ವೈಶಿಷ್ಟತೆ ಇರೋದು ಸತ್ಯ. ಈ ಕೋಲವನ್ನು ನೋಡೋಕೆ ರಾಜ್ಯ ಹೊರ ರಾಜ್ಯದ ಸಹಸ್ರಾರು ಜನರು ಸೇರ್ತಾರೆ. ಹುಲಿಯ ಜೊತೆ ಸರಸವಾಡಿ ಮುಟ್ಟದಂತೆ ತಪ್ಪಿಸಿಕೊಳ್ತಾರೆ. ಹುಲಿ ದೈವದ ಕೋಲದಲ್ಲಿ ನರ್ತಿಸುವ ವ್ಯಕ್ತಿ ಬಹಳಷ್ಟು ದಿನಗಳಿಂದ ವಿವಿಧ ವ್ರತಗಳನ್ನು ಪಾಲಿಸಿಕೊಂಡು ಬರುತ್ತಾರೆ.
ವಿಶೇಷ ಅಂದ್ರೆ ಹುಲಿ ಮುಟ್ಟಿಸಿಕೊಂಡ್ರೆ ಮುಂದಿನ ಕೋಲದೊಳಗೆ ಸಾಯ್ತಾರೆ ಅನ್ನೋ ನಂಬಿಕೆಗೆ ಪ್ರಾಯಶ್ಚಿತ್ತ ಕೂಡಾ ಇಲ್ಲಿ ಇದೆ. ಹುಲಿ ಕೋಲ ಮುಗಿಯೋದ್ರೂಳಗೆ ಹುಲಿ ಮುಟ್ಟಿಸಿಕೊಂಡವರು ಹುಲಿ ದೈವದ ಹತ್ರ ಬಂದು ಪ್ರಸಾದ ತೆಗೆದುಕೊಂಡು ಹೋಗ್ಬೆಕು. ನಂತರ ಪ್ರಾಯಶ್ಚಿತ್ತದ ವಿವಿಧ ವಿಧಾನಗಳನ್ನು ಇಲ್ಲಿ ಹೇಳಲಾಗುತ್ತದೆ.
5 ಗಂಟೆಯ ನಿರಂತರ ಸುತ್ತಾಟ ಮತ್ತು ಬೇಟೆಯಾಡುವಿಕೆಯಿಂದ ಸುಸ್ತಾಗುವ ಹುಲಿಯು ಮಾರಿಯಮ್ಮ ದೇವಿಯ ಸಮ್ಮುಖದಲ್ಲಿ ತೆಂಗಿನಕಾಯಿ ಮತ್ತು ಕೋಳಿಯನ್ನು ಬಲಿಪಡೆದು ಬ್ರಹ್ಮರ ಗುಂಡಕ್ಕೆ ಸುತ್ತು ಹೊಡೆದು ಬಾಳೆ ಎಲೆಯ ಮೇಲೆ ಬಂದು ಮಲಗುತ್ತದೆ. ಅನಂತರ ಮಾರ ಗುರಿಕಾರ ಹುಲಿಯ ಮೇಲೆ ನೀರು ಸಂಪ್ರೋಕ್ಷಣೆಗೈದ ಬಳಿಕ ಹಗ್ಗ ಹಿಡಿದುಕೊಂಡವರು ವೇಷಧಾರಿಯ ಮೈತಿಕ್ಕುತ್ತಾರೆ. ಇದರಿಂದ ಆತನ ಆಯಾಸ ಪರಿಹಾರಗೊಂಡು ಆವೇಶ ಕೊನೆಗೊಳ್ಳುತ್ತದೆ.
ಜನಪದ ಆಚರಣೆಗಳೇ ಹಾಗೇ. ಅದೆಷ್ಟು ಭಯಂಕರವಾಗಿರುತ್ತೆ. ಪಿಲಿಕೋಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಪ್ರಯತ್ನವೂ ಸಾಕಷ್ಟು ಬಾರಿ ಇಲ್ಲಿ ನಡೆದಿದೆ. ಒಟ್ಟಿನಲ್ಲಿ ಭಯದ ನಡುವೆ ಭಕ್ತಿಯೇ ಶ್ರೇಷ್ಟ ಅನ್ನುವಂತೆ ಸಾವಿರಾರು ಜನರು ಈ ಆಚರಣೆಗೆ ಸಾಕ್ಷಿಯಾಗೋದು ಮಾತ್ರ ದಶಕಗಳಿಂದ ತಪ್ಪಿಲ್ಲ. ಒಟ್ಟಿನಲ್ಲಿ ನಂಬಿಕೆಗಳೂ ಮಾತ್ರ ಇಲ್ಲಿ ಭಿನ್ನ-ವಿಭಿನ್ನವಾಗಿದ್ದು, ಅವರವರ ನಂಬಿಕೆಯ ಮೇಲೆ ಆಚರಣೆಗಳೂ ಭದ್ರವಾಗಿ ನೆಲೆಯೂರಿವೆ.
- ಶ್ರೀ
POPULAR STORIES :
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?